ಬೆಂಗಳೂರು: ಬಿಜೆಪಿಯ ಎಲ್ಲ ನಾಯಕರು ಮತ್ತು ಅವರ ನಡೆಗಳನ್ನು ಟೀಕಿಸುತ್ತಿರುವ (BJP Politics) ಮಾಜಿ ಸಚಿವ ಹಾಗೂ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಅವರು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಹೇಳಿದ್ದಾರೆ.
ಸೋಮಶೇಖರ್ ಅವರು ಬುಧವಾರವೂ ಮೈಸೂರಿನಲ್ಲಿ ಬಿಜೆಪಿ ಮೇಲೆ ಟೀಕಾಪ್ರಹಾರ ನಡೆಸಿದ್ದರು. ಬಿಜೆಪಿಗೆ ಬಂದಾಗ ಜಾಮೀನು ಕೊಡ್ತಾರೆ, ಅಧಿಕಾರ ಹೋದ ಮೇಲೆ ವಿಷ ಕೊಡ್ತಾರೆ ಎಂದು ಹೇಳಿದ್ದರು. ಜತೆಗೆ ಪಕ್ಷ ಬಿಟ್ಟುಹೋಗಲಿ ಎಂದ ಕೆ.ಎಸ್. ಈಶ್ವರಪ್ಪ ಅವರ ಮೇಲೂ ಕೆಂಡ ಕಾರಿದ್ದರು.
ಗುರುವಾರ ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸೋಮಶೇಖರ್ ಬಳಿ ಮಾತಾಡಿದ್ದೇನೆ. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಅಸಮಾಧಾನ ಇದ್ದರೆ ಮಾತಾಡಿ ಸರಿಪಡಿಸ್ತೇನೆ ಎಂದು ಹೇಳಿದರು. ಸೋಮಶೇಖರ್ ಅವರು ಕೂಡಾ ತಾನು ಯಡಿಯೂರಪ್ಪ ಅವರಿಂದಾಗಿಯೇ ಬಿಜೆಪಿಯಲ್ಲಿ ಉಳಿದಿರುವುದು ಎಂದು ಹೇಳಿಕೊಂಡಿದ್ದರು.
ಈ ನಡುವೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ವಿ. ಸದಾನಂದ ಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಸದಾನಂದ ಗೌಡರಿಗೆ ಕೇಂದ್ರವೇ ಸೂಚನೆ ಕೊಟ್ಟಿದೆ. ಚುನಾವಣೆಗೆ ನಿಲ್ಲದಂತೆ ಸೂಚನೆ ನೀಡಿದೆ. ಹಾಗಾಗಿ ಅವರು ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಹೇಳಿದೆ. ಅವರ ಮುಂದಿನ ಸ್ಥಾನಮಾನಗಳನ್ನೂ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಬಿಎಸ್‌ವೈ ತಿಳಿಸಿದರು.
ಎಸ್ಟಿಎಸ್‌ಗೆ ಅನ್ಯಾಯ ಆಗಿಲ್ಲ,ಮಾತು ಹಿಂಪಡೆಯಲಿ ಎಂದ ಅಶ್ವತ್ಥ್ ನಾರಾಯಣ
ಇದೇ ವೇಳೆ ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಅವರು, ನಮ್ಮ ಸ್ನೇಹಿತ ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದರು.
ʻʻಅವರಿಗೆ ಬಿಜೆಪಿ ಎಲ್ಲಾ ಸ್ಥಾನಮಾನ ಕೊಟ್ಟು ಗೌರವಿಸಿದೆ. ಒಂದು ದಿನವೂ ಕಡೆಗಣಿಸಿಲ್ಲ. ಅವರಿಗೆ ಅಳುಕು ಬೇಡ. ಜಾಮೂನು, ವಿಷ ಎಲ್ಲಾ ಕಾಂಗ್ರೆಸ್‌ನಲ್ಲಿ ಕೊಡೋದುʼʼ ಎಂದರು. ಪಕ್ಷ ಯಾವತ್ತೂ ಅವರ ಹೆಗಲ ಮೇಲೆ ಭಾರ ಹಾಕಿಲ್ಲ. ಅವರ ಮೇಲೆ ಆನ್ಯಾಯ ಆಗಿಲ್ಲ. ಹೀಗಾಗಿ ಏನೇ ಮಾತು ಹೇಳಿದ್ದರೂ ಅದನ್ನು ವಾಪಸ್ ಪಡೆಯಲಿ ಎಂದರು.
ಸಿಎಂ, ಡಿಸಿಎಂ ಮೆಚ್ಚಿಸಲು ಬಿಜೆಪಿ ಮೇಲೆ ವಾಗ್ದಾಳಿ
ಎಸ್‌ಟಿ ಸೋಮಶೇಖರ್ ಅವರು ಮನೆಯಲ್ಲೇ ಇದ್ದು ಮನೆ ಯಜಮಾನರ ಬಗ್ಗೆ ಮಾತಾಡೋದು ಸರಿಯಲ್ಲ. ಅವರ ವ್ಯಕ್ತಿತ್ವಕ್ಕೂ ಸರಿಯಲ್ಲ. ಸೋಮಶೇಖರ್ ಅವರು ಸಿದ್ದರಾಮಯ್ಯ, ಡಿಕೆಶಿ ಮೆಚ್ಚಿಸಲು ಮಾತಾಡ್ತಿದ್ದಾರೆ ಎಂದು ಆರೋಪಿಸಿದ ಅಶ್ವತ್ಥ್ ನಾರಾಯಣ ಅವರು, ʻʻಕಾಂಗ್ರೆಸ್‌ನವರೇ ಮುಳುಗ್ತಿದ್ದಾರೆ. ಇವರೆಲ್ಲ ಯಾಕೆ ಆ ಹಡಗು ಹತ್ತುತ್ತಿದ್ದಾರೋ ಗೊತ್ತಿಲ್ಲʼʼ ಎಂದರು.
ನಾನು ಮೊದಲೇ ಹೇಳಿದ್ದೆ ಎಂದ ಶಿವರಾಜ್ ತಂಗಡಗಿ
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಅವರು ಮಾತನಾಡಿ, ನಾನು ಎಸ್‌ಟಿ ಸೋಮಶೇಖರ್ ಅವರಿಗೆ ಮೊದಲೇ ಹೇಳಿದ್ದೆ. ಕೈಯಲ್ಲಿ ಕಡ್ಡಿ ಕೊಟ್ಟು ಹೇಳಿದೆ, ಬಿಜೆಪಿಯವರು ಅರ್ಧದಲ್ಲಿ ಕೈ ಬಿಡ್ತಾರೆ ಎಂದು. ಹಿಂದೆ ನಮ್ಮನ್ನು ಕರೆದುಕೊಂಡು ಹೋಗಿ ಅರ್ಧಕ್ಕೆ ಕೈ ಬಿಟ್ಟಿದ್ದರು. ಆದ್ದರಿಂದ ಅವರಿಗೆ ಹೇಳಿದ್ದೆ, ಅವರು ಕೇಳಿಲ್ಲ. ಈಗಲಾದರೂ ಅರ್ಥ ಆಗಿದೆ ಎಂದರು.