Site icon Vistara News

BJP Politics : ಪಕ್ಷ ಸಂಘಟನೆ ಜತೆಗೆ ಅತೃಪ್ತಿ ಶಮನಕ್ಕೆ ಇಳಿದ ಬಿಎಸ್‌ವೈ; ಸಮಾಧಾನಗೊಂಡ್ರಾ ರೇಣುಕಾ, ಮುನೇನಕೊಪ್ಪ?

BS Yediyurappa

ಬೆಂಗಳೂರು: ಒಂದು ಹಂತದಲ್ಲಿ ನಾವಿಕನಿಲ್ಲದ ನೌಕೆಯಂತೆ ಸಾಗುತ್ತಿದ್ದ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ಮತ್ತೆ ಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದೊಳಗಿನ (BJP Politics) ಅತೃಪ್ತಿಯ ಶಮನಕ್ಕೆ (Deffusing descedent activities) ಮುಂದಾಗಿದ್ದಾರೆ. ಬಂಡಾಯದ ಧ್ವನಿಯಲ್ಲಿ ಮಾತನಾಡುತ್ತಿರುವ ಎಂ.ಪಿ. ರೇಣುಕಾಚಾರ್ಯ (MP Renukacharya), ಶಂಕರ ಪಾಟೀಲ್‌ ಮುನೇನಕೊಪ್ಪ (Shankar Pateel Munenakoppa) ಮತ್ತು ಮೈಸೂರಿನ ರಾಮದಾಸ್‌ (SA Ramadas) ಅವರನ್ನು ಕರೆಸಿಕೊಂಡು ಮಾತನಾಡಿ ಸಮಾಧಾನ ಮಾಡಿ ಕಳುಹಿಸಿದ್ದಾರೆ.

ಪಕ್ಷದ ಕೆಲವು ನಾಯಕರು ತಮ್ಮನ್ನು ಕಡೆಗಣಿಸಿ ಮೂಲೆಗುಂಪು ಮಾಡಲು ಯತ್ನಿಸಿದರೂ ಪಕ್ಷಕ್ಕೆ ಎದುರಾಗಿರುವ ಸಂಕಷ್ಟವನ್ನು ಮನಗಂಡು ನೇರವಾಗಿ ಕಣಕ್ಕೆ ಧುಮುಕಿದ್ದ ಬಿ.ಎಸ್‌. ಯಡಿಯೂರಪ್ಪ ಸೆಪ್ಟೆಂಬರ್‌ 8ರಂದು ರಾಜ್ಯ ಸರ್ಕಾರದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜತೆಗೆ ಸೆಪ್ಟೆಂಬರ್‌ 16ರಿಂದ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡುವ ಪ್ಲ್ಯಾನ್‌ ಸಿದ್ಧಪಡಿಸಲಾಗಿದೆ. ಈ ಬೆಳವಣಿಗೆಗಳು ಪಕ್ಷದಲ್ಲಿ ಸಂಚಲನ ಮೂಡಿಸಿದ್ದು ತಮ್ಮನ್ನು ಕೇಳೋರಿಲ್ಲ ಎಂಬಂತಿದ್ದ ನಾಯಕರು ಈಗ ಖುಷಿಯಾಗಿದ್ದಾರೆ.

ಇದೆಲ್ಲದಕ್ಕಿಂತಲೂ ಮುಖ್ಯವಾದದ್ದು ಬಿ.ಎಸ್‌. ಯಡಿಯೂರಪ್ಪ ಅವರು ಪ್ರಕಟಿಸಿರುವ ಬಿಜೆಪಿ-ಜೆಡಿಎಸ್‌ ಜತೆಗಿನ ಮೈತ್ರಿ ಘೋಷಣೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಗೆ ಬಿಜೆಪಿಯ ಹಿರಿಯ ನಾಯಕರಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಒಪ್ಪಿಗೆ ನೀಡಿದ್ದಾರೆ ಎಂಬ ಅವರ ಒಂದು ಹೇಳಿಕೆ ಬಿಜೆಪಿಯ ಉತ್ಸಾಹವನ್ನು ಹೆಚ್ಚಿಸಿದೆ. ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರು ಆತ್ಮವಿಶ್ವಾಸಭರಿತರಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.

ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟ ಬಿಎಸ್‌ ಯಡಿಯೂರಪ್ಪ

ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ಘೋಷಿಸಿದ ಬೆನ್ನಿಗೇ ರಾಜ್ಯ ಬಿಜೆಪಿಯ ಆಘೋಷಿತ ನಾಯಕತ್ವ ಯಡಿಯೂರಪ್ಪ ಅವರದ್ದೇ ಎನ್ನುವುದು ಎಲ್ಲರಿಗೂ ಸ್ಪಷ್ಟವಾದಂತಾಗಿದೆ. ಅವರ ಕಟ್ಟಾ ವಿರೋಧಿಯಾಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಕೂಡಾ ಮೈತ್ರಿಯನ್ನು ಯಾವುದೇ ಕೊಂಕು ನುಡಿಯದೆ ಒಪ್ಪಿಕೊಂಡಿದ್ದಾರೆ. ಹಿಂದಿನ ರೀತಿಯಾದರೆ ಈ ಮೈತ್ರಿಯನ್ನು ಘೋಷಿಸಲು ಯಡಿಯೂರಪ್ಪ ಯಾರು ಎಂದು ಪ್ರಶ್ನಿಸುವ ಸಾಧ್ಯತೆಗಳಿದ್ದವು. ಸಂಸದ ಪ್ರತಾಪ್‌ ಸಿಂಹ ಅವರಂಥ ನಾಯಕರು ಕೂಡಾ ಬಿಎಸ್‌ವೈ ಹೇಳಿದ್ದಾರೆಂದರೆ ಅದು ಫೈನಲ್‌ ಎಂದೇ ಅರ್ಥ ಎಂದಿದ್ದಾರೆ. ಹೀಗಾಗಿ ಬಿಎಸ್‌ವೈ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಂತಾಗಿದೆ.

ಬಿಜೆಪಿ ಪುನಶ್ಚೇತನದ ಮುಂದಿನ ಭಾಗವಾಗಿ ಬಿಎಸ್‌. ಯಡಿಯೂರಪ್ಪ ಅವರು ಪಕ್ಷದೊಳಗಿನ ಆಂತರಿಕ ಆಕ್ರೋಶವನ್ನು ಶಮನ ಮಾಡಲು ಮುಂದಾಗಿದ್ದಾರೆ. ಸದಾ ಬಂಡಾಯ ಧ್ವನಿಯಲ್ಲಿ ಮಾತನಾಡುವ ಮಾಜಿ ಶಾಸಕರಾದ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ, ನವಲಗುಂದ ಶಂಕರ ಪಾಟೀಲ ಮುನೇನಕೊಪ್ಪ, ಮೈಸೂರಿನ ರಾಮದಾಸ್‌ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದರು. ಮೂವರನ್ನೂ ಸಮಾಧಾನ ಮಾಡಿ ಕಳುಹಿಸಿದ್ದು ಹೊರಬಂದ ಬಳಿಕ ಅವರ ಮಾತುಗಳಲ್ಲಿ ವ್ಯಕ್ತವಾಯಿತು.

ಬಿಜೆಪಿ ಬಿಡುವುದಿಲ್ಲ ಎಂದ ಮುನೇನಕೊಪ್ಪ

ಬಿಎಸ್‌ವೈ ಅವರನ್ನು ಭೇಟಿ ಮಾಡಿ ಹೊರಗೆ ಬಂದ ಬಳಿಕ ಮಾತನಾಡಿದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು, ʻʻನಾನು ಬಿಜೆಪಿ ಬಿಡುವುದಿಲ್ಲ.. ಕಾಂಗ್ರೆಸ್ ನಾಯಕರು ನನ್ನನ್ನ ಸಂಪರ್ಕ ಮಾಡಿಲ್ಲʼʼ ಎಂದರು.

ʻʻಹುಬ್ಬಳ್ಳಿ ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ಪಕ್ಷ ಬಿಟ್ಟಿದ್ದಾರೆ. ನನ್ನ ಮತ್ತು ಶೆಟ್ಟರ್ ಮನೆ ಒಂದೇ ಬೀದಿಯಲ್ಲಿ ಇದೆ. ಹಾಗಾಗಿ ಜತೆಗೇ ಇರುತ್ತೇವೆ ಅಷ್ಟೆ. ಆದರೆ, ನಾನು ಪಕ್ಷ ಬಿಡುವ ಮನಸ್ಸಿನಲ್ಲಿ ಇಲ್ಲ. ಪಕ್ಷ ಸಂಘಟನೆ ಬಗ್ಗೆ ಬಿಎಸ್‌ವೈ ಚರ್ಚೆ ಮಾಡಿದ್ದಾರೆʼʼ ಎಂದರು.

ʻʻಬಿಜೆಪಿ ಬಿಟ್ಟ ನಾಯಕರ ಘರ್ ವಾಪ್ಸಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆʼʼ ಎಂದು ಹೇಳಿದ ಅವರು, ಜೆಡಿಎಸ್‌ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂದರು.

ಯಡಿಯೂರಪ್ಪರನ್ನು ಸರಿಯಾಗಿ ನಡೆಸಿಕೊಂಡರೆ ಒಳ್ಳೆದಾಗುತ್ತದೆ ಎಂದ ರೇಣುಕಾ

ಬಿಎಸ್‌ವೈ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ ಅವರು, ʻʻರಾಜ್ಯ ಬಿಜೆಪಿಯಲ್ಲಿ ಕೆಲವು ಸಮಸ್ಯೆಗಳಿವೆ. ಕೆಲ ನಾಯಕರ ನಡೆ ಬಗ್ಗೆ ಅಸಮಾಧಾನ ಇದೆ. ಆ ವಿಚಾರವನ್ನ ನಾನು ಹೇಳಿದ್ದೇನೆʼʼ ಎಂದರು.

ʻʻಬಹಿರಂಗವಾಗಿ ನಾನು ಏನೂ ಹೇಳುವುದಿಲ್ಲ. ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆಯೂ ಮಾತನಾಡಲ್ಲ. ಆದರೆ ಒಂದು ಮಾತು ಸ್ಪಷ್ಟವಾಗಿ ಹೇಳುತ್ತೇನೆ. ಯಡಿಯೂರಪ್ಪ ರಾಜ್ಯ ಬಿಜೆಪಿಗೆ ಅನಿವಾರ್ಯ. ಪಕ್ಷ ಕಟ್ಟಿದ್ದು ಯಡಿಯೂರಪ್ಪ. ಅವರ ನೇತೃತ್ವದಲ್ಲಿ ನಡೆದ ಚುನಾವಣೆ ಗೆದ್ದಿದ್ದೇವೆ. ಹೀಗಾಗಿ ಮುಂದೆ ಸಹ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಉತ್ತಮ. ಯಡಿಯೂರಪ್ಪ ಸರಿಯಾಗಿ ನಡೆಸಿಕೊಳ್ಳಬೇಕು. ನಡೆಸಿಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆʼʼ ಎಂದು ಹೇಳಿದರು. ತಮಗೆ ಕಾಂಗ್ರೆಸ್‌ ಪಕ್ಷದಿಂದ ಆಹ್ವಾನ ಬಂದಿಲ್ಲ ಎಂದು ಹೇಳಿದರು ರೇಣುಕಾಚಾರ್ಯ. ʻʻಲೋಕಸಭಾ ಚುನಾವಣೆಯ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆʼʼ ಎಂದು ಅವರು ನುಡಿದರು.

ಇದನ್ನೂ ಓದಿ: BS Yediyurappa : ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ ಅನಿವಾರ್ಯವಾದ ಬಿಎಸ್‌ವೈ; ಬಿ.ಎಲ್‌. ಸಂತೋಷ್‌ ಪ್ಲ್ಯಾನ್‌ ಉಲ್ಟಾ!

ಸೋಮಶೇಖರ್‌, ಹೆಬ್ಬಾರ್‌ ಜತೆಗೂ ಬಿಎಸ್‌ ವೈ ಮಾತುಕತೆ?

ಪಕ್ಷವನ್ನು ನಿಧಾನಕ್ಕೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಬಿ.ಎಸ್.‌ ಯಡಿಯೂರಪ್ಪ ಅವರು ಈಗಾಗಲೇ ಕಾಂಗ್ರೆಸ್‌ ಕಡೆಗೆ ಪಾದ ಬೆಳೆಸಿರುವ ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಮತ್ತು ಇತರ ಆಪರೇಷನ್‌ನಲ್ಲಿ ಬಿಜೆಪಿಗೆ ಬಂದ ನಾಯಕರ ಜತೆ ಮುಂದಿನ ಹಂತದಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದ್ದು, ಅವರ ಭರವಸೆ ಕೊಟ್ಟರೆ ಹೊರಗೆ ಕಾಲಿಟ್ಟವರೂ ಒಳಗೆ ಬರಬಹುದು ಎಂಬ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

Exit mobile version