Site icon Vistara News

BJP Politics : ದಾವಣಗೆರೆಯಲ್ಲಿ ʻನಿನ್ನ ಮುಗಿಸ್ತೀನಿʼ ಪಾಲಿಟಿಕ್ಸ್‌; ರೇಣುಕಾಚಾರ್ಯಗೆ ಕಾಡುತ್ತಿದೆಯಾ ಜಿ.ಎಂ ಸಿದ್ದೇಶ್ವರ್‌ ಭಯ?

Davanagere BJP Politics

ದಾವಣಗೆರೆ: ದಾವಣಗೆರೆ ಬಿಜೆಪಿ (BJP Davanagere) ಎಂದರೆ ಮುರಿದು ಬಿದ್ದ ಮನೆಯಾಗಿದೆ. ಅಲ್ಲಿನ ಸಂಸದರಾಗಿರುವ ಜಿ.ಎಂ. ಸಿದ್ದೇಶ್ವರ್‌ (MP GM Siddeshwar) ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲೂ ಹೆದರೋರಲ್ಲ. ದಾವಣಗೆರೆಯಲ್ಲಿ ಮೋದಿ ಗೀದಿ ಯಾವುದು ನಡೆಯಲ್ಲ ಎಂದು ಹೇಳುವ ಮೂಲಕ ತಮ್ದೇ ಹವಾ ಎನ್ನುವ ಪೋಸು ಕೊಟ್ಟಿದ್ದವರು ಅವರು. ಈಗ ಅವರ ಭಯ ಬಿಜೆಪಿಯ ಇತರರಿಗೂ ಕಾಡುತ್ತಿದೆಯಂತೆ. ಸ್ವತಃ ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharaya) ಅವರೇ ಈ ರೀತಿ ಹೇಳಿಕೊಂಡಿದ್ದಾರೆ.

ದಾವಣಗೆರೆಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಎಂ.ಪಿ. ರೇಣುಕಾಚಾರ್ಯ ಅವರು ಆಗಲೇ ಒಂದೂವರೆ ಕಾಲು ಬಿಜೆಪಿಯಿಂದ ಹೊರಗಿಟ್ಟಾಗಿದೆ. ಬಿ.ಎಲ್‌. ಸಂತೋಷ್‌, ಬಸವರಾಜ್‌ ಬೊಮ್ಮಾಯಿ, ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಎಲ್ಲ ನಾಯಕರನ್ನು ಬಾಯಿಗೆ ಬಂದಂತೆ ಬಯ್ಯುತ್ತಿರುವ ಅವರು ಬಿಜೆಪಿಯಿಂದ ನೋಟಿಸ್‌ ಮಾತ್ರವಲ್ಲ ವಜಾ ಮಾಡಿದರೂ ಹೆದರೊಲ್ಲ ಎಂಬ ಲೆವೆಲ್‌ಗೆ ಹೋದಂತೆ ಕಾಣಿಸುತ್ತಿದೆ. ಚನ್ನಗಿರಿ ಶಾಸಕರಾಗಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿಬಿದ್ದು ಈಗ ಮೂಲೆಗುಂಪಾಗಿದ್ದಾರೆ. ಅವರ ಪುತ್ರ ಮಲ್ಲಿಕಾರ್ಜುನ್‌ಗೂ ಬಿಜೆಪಿ ಮಣೆ ಹಾಕುತ್ತಿಲ್ಲ. ಇನ್ನು ಎಸ್‌.ಎ ರವೀಂದ್ರನಾಥ್‌ ಅವರು ಅನಾರೋಗ್ಯ ಮತ್ತು ವಯಸ್ಸಿನ ಕಾರಣ ನೀಡಿ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ.

ಇಂಥ ಹೊತ್ತಿನಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರು ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ʻಸಂಸದ ಜಿ.ಎಂ.ಸಿದ್ದೇಶ್ವರ್ ಅವರು ರಾಜಕೀಯ ಎದುರಾಳಿಗಳನ್ನು ಮುಗಿಸ್ತಾರಂತೆʼʼ ಎಂಬ ಮಾತು ಸ್ವತಃ ಮಾಜಿ ಸಚಿವ ರೆಬಲ್ ರೇಣುಕಾಚಾರ್ಯ ಅವರ ಬಾಯಲ್ಲೇ ಬಂದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ರೇಣುಕಾಚಾರ್ಯ ಅವರು ಮಾಜಿ ಶಾಸಕ ಗುರು ಸಿದ್ದನಗೌಡರ ಬಳಿ ಈ ಬಗ್ಗೆ ನೋವು ತೋಡಿಕೊಂಡಿದ್ದಾರೆ. ನಿಜವೆಂದರೆ ಮಾಜಿ ಶಾಸಕ ಗುರುಸಿದ್ದನಗೌಡರ ಕುಟುಂಬವನ್ನು ಈಗಾಗಲೇ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ.

ಹೀಗೆ ಉಚ್ಚಾಟನೆ ಮಾಡಿರುವ ಸಂದರ್ಭದಲ್ಲಿ ಗುರುಸಿದ್ಧನಗೌಡರಿಗೆ ಕರೆ ಮಾಡಿ ಮಾತಾಡಿರುವ ರೇಣುಕಾಚಾರ್ಯ ದ್ವೇಷ ರಾಜಕಾರಣ ನಡೆಯುತ್ತಿರುವ ಬಗ್ಗೆ ಚರ್ಚೆ ಮಾಡಿದ್ದಾರೆ.

ʻʻನಿಮಗೆ ಗೊತ್ತಿಲ್ಲದ ರಾಜಕೀಯ ಏನ್ ಗೌಡ್ರೇ. ನನ್ನನ್ನೂ ತೆಗಿತಾರೆ, ನಿಮ್ಮನ್ನೂ ತೆಗಿತಾರೆ. ಮಾಡಾಳ್ ವಿರೂಪಾಕ್ಷಪ್ಪನನ್ನು ಬೇರೆ ಬೇರೆ ಕಾರಣಕ್ಕೆ ತೆಗೆದರು. ಮಾಜಿ ಸಚಿವ ಎಸ್.ಎ ರವೀಂದ್ರನಾಥ್ ಗೆ ಆರೋಗ್ಯ ಸರಿ ಇಲ್ಲ. ಎಲ್ಲರನ್ನೂ ತೆಗೆದು ಇವರು ಬಿಜೆಪಿಯನ್ನು ಹೇಗೆ ಕಟ್ತಾರೋ ಗೊತ್ತಿಲ್ಲʼʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: MP Renukacharya : ಕರ್ನಾಟಕ ಬಿಜೆಪಿ ಮುಕ್ತ ಆಗೋ ಪರಿಸ್ಥಿತಿ ಬಂದಿದೆ ಎಂದ ರೇಣುಕಾಚಾರ್ಯ!

ಹಾಗಂತ ಸಿದ್ದೇಶ್ವರ್‌ ಅವರಿಗೆ ದ್ವೇಷ ಸಾಧಿಸಿ ಉಚ್ಚಾಟನೆ ಮಾಡಿಸುವಷ್ಟು ಸಾಮರ್ಥ್ಯ ಪಕ್ಷದ ಮಟ್ಟದಲ್ಲಿ ಇದ್ದಂತೆ ಕಾಣುತ್ತಿಲ್ಲ. ಸ್ವತಃ ಅವರೇ ಟಾರ್ಗೆಟ್‌ ಆಗಿದ್ದಾರೆ. ಒಂದು ಕಡೆ ಶಾಮನೂರು ಕುಟುಂಬ, ಇನ್ನೊಂದು ಕಡೆ ಬಿಜೆಪಿಯವರೇ ಅವರನ್ನು ಕಾಡುತ್ತಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ಬಿಜೆಪಿಯ ನಾಯಕರಲ್ಲಿ ಭಾರಿ ಆತಂಕ ಮನೆ ಮಾಡಿದೆ. ಇದರ ನಡುವೆಯೇ ಹಲವರು ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆಪರೇಷನ್‌ ಹಸ್ತ ಏನಾದರೂ ನಡೆದರೆ ದಾವಣಗೆರೆಯಲ್ಲಿ ದೊಡ್ಡ ಜಾತ್ರೆಯೇ ನಡೆಯಬಹುದು ಎನ್ನುವುದು ಅಲ್ಲಿ ಚಾಲ್ತಿಯಲ್ಲಿರುವ ಜೋಕ್‌. ಇದನ್ನೆಲ್ಲ ನೋಡಿಕೊಂಡು ಸ್ವತಃ ಶಾಮನೂರು ಶಿವಶಂಕರಪ್ಪ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಇಳಿದರೆ ಹೇಗೆ ಎಂಬ ಉತ್ಸಾಹವೂ ಹುಟ್ಟಿಕೊಂಡಿದೆಯಂತೆ.

Exit mobile version