Site icon Vistara News

BJP Politics : ಬಿಎಸ್‌ವೈ ಸಭೆಗೆ ಸೋಮಶೇಖರ್‌, ಬೈರತಿ ಗೈರು; ಯಡಿಯೂರಪ್ಪ ನೀಡಿದ ಮಹತ್ವದ ಸುಳಿವೇನು?

BS Yediyurappa

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (BJP Politics) ನಡೆಯುತ್ತಿರುವ ಆಪರೇಷನ್‌ ಹಸ್ತ ಚರ್ಚೆ, ಬಿಬಿಎಂಪಿ ಚುನಾವಣೆ ಸಿದ್ಧತೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ತಮ್ಮದೇ ನಿವಾಸದಲ್ಲಿ ಆಯೋಜಿಸಿದ ಬೆಂಗಳೂರಿನ ಶಾಸಕರ ಮಹತ್ವದ ಸಭೆಗೆ (Bangalore BJP MLAs meeting) ಮಹಾನಗರದ 16 ಶಾಸಕರ ಪೈಕಿ ಏಳು ಬಿಜೆಪಿ ಶಾಸಕರು ಗೈರುಹಾಜರಾಗಿದ್ದರು (Seven out of 16 BJP MLAs Absent). ಅದರಲ್ಲೂ ಮುಖ್ಯವಾಗಿ ಆಪರೇಷನ್‌ ಹಸ್ತದ (Operation Hasta) ಸುಳಿಯಲ್ಲಿ ಸಿಲುಕಿದವರೆಂದು ಹೇಳಲಾದ ಮಾಜಿ ಸಚಿವರಾದ ಎಸ್‌.ಟಿ ಸೋಮಶೇಖರ್‌ (ST Somashekhar) ಮತ್ತು ಬೈರತಿ ಬಸವರಾಜ್‌ (Byrathi Basavaraj) ಅವರು ಭಾಗವಹಿಸದೆ ಇರುವುದು ಭಾರಿ ಕುತೂಹಲ ಕೆರಳಿಸಿದೆ. ಸಭೆಯ ಬಳಿಕ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ ಅವರು ನಮ್ಮ ಶಾಸಕರು ಯಾರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದರು. ಅದರ ಜತೆಗೇ ಒಬ್ಬಿಬ್ಬರು ಈ ಬಗ್ಗೆ ಯೋಚಿಸುತ್ತಿದ್ದಾರೆ, ಅದರ ಬಗ್ಗೆ ಮಾತಾಡುತ್ತೇವೆ ಎಂಬ ಸುಳಿವನ್ನೂ ಬಿಟ್ಟುಕೊಟ್ಟರು.

ರಾಜ್ಯ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲದೆ ಯಾರು ನಾಯಕತ್ವ ವಹಿಸಬೇಕು ಎನ್ನುವ ಗೊಂದಲವಿದೆ. ಅದರಲ್ಲೂ ಕಾಂಗ್ರೆಸ್‌ ಆಪರೇಷನ್‌ ಹಸ್ತದ ಹೆಸರಿನಲ್ಲಿ ಶಾಸಕರು ಮತ್ತು ಕಾರ್ಪೊರೇಟರ್‌ಗಳನ್ನು ಸೆಳೆಯುವ ಕಸರತ್ತು ನಡೆಸುತ್ತಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ ಬಿಬಿಎಂಪಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿರುವ ಕಾರ್ಯಾಚರಣೆಗಳ ನಡುವೆ ಬಿಜೆಪಿಯ ಪ್ರತಿರೋಧವೇ ಇಲ್ಲದಂಥ ಸ್ಥಿತಿ ಇತ್ತು. ಈ ಹಂತದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಅಖಾಡಕ್ಕಿಳಿದು ತಮ್ಮ ಮನೆಯಲ್ಲೇ ಬೆಂಗಳೂರಿನ ಶಾಸಕರ ಸಭೆಯಲ್ಲಿ ಆಯೋಜಿಸಿದ್ದರು.

ಶಾಸಕರು, ಸಂಸದರ ಪೈಕಿ ಯಾರು ಗೈರು? ಯಾರು ಹಾಜರು?

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಬಿಎಸ್‌ವೈ ಜತೆಗೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ ರಾಜೇಶ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಇದ್ದರು. 16 ಶಾಸಕರ ಪೈಕಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಆರ್.ಅಶೋಕ್, ಎಂ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಮುನಿರತ್ನ, ಮುನಿರಾಜು, ಎಸ್.ಆರ್.ವಿಶ್ವನಾಥ್, ಎಸ್.ರಘು, ಉದಯ್ ಗುರುಡಾಚಾರ್ ಭಾಗಿಯಾಗಿದ್ದರು. ಶಾಸಕರಾದ ಎಸ್‌.ಟಿ ಸೋಮಶೇಖರ್, ಬೈರತಿ ಬಸವರಾಜ, ಸುರೇಶ್ ಕುಮಾರ್, ರವಿ ಸುಬ್ರಮಣ್ಯ, ಕೆ.ಜಿ ರಾಮಮೂರ್ತಿ, ಸತೀಶ್ ರೆಡ್ಡಿ, ಮಂಜುಳಾ ಲಿಂಬಾವಳಿ ಭಾಗವಹಿಸಿರಲಿಲ್ಲ.

ಸಂಸದರ ಪೈಕಿ ಸಂಸದರಾದ ಡಿ.ವಿ ಸದಾನಂದಗೌಡ, ಪಿಸಿ ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಉಪಸ್ಥಿತರಿದ್ದರೆ, ಸಂಸದ ತೇಜಸ್ವಿ ಸೂರ್ಯ ಗೈರಾಗಿದ್ದರು.

ಏಳು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಸಭೆಯ ಉದ್ದೇಶವಾಗಿತ್ತು.

  1. ಬಿಬಿಎಂಪಿ ಕಾಂಟ್ರಾಕ್ಟರ್‌ಗಳ ಆರೋಪದ ಬಗ್ಗೆ ಹೋರಾಟ
  2. ಬೆಂಗಳೂರಿನ ನಾಯಕರಾದ ಆರ್. ಅಶೋಕ್, ಡಾ. ಸಿ. ಎನ್. ಅಶ್ವತ್ಥನಾರಾಯಣ ನಡುವೆ ಸಮನ್ವಯ
  3. ಅಸಮಾಧಾನಿತ ಶಾಸಕರೊಂದಿಗೆ ಮಾತುಕತೆ
  4. ಬಿಬಿಎಂಪಿ ‌ಚುನಾವಣೆಗೆ ಸಿದ್ಧತೆ
  5. ಲೋಕಸಭೆ ಚುನಾವಣೆ ಕುರಿತು ಚರ್ಚೆ
  6. ನಾಯಕರಷ್ಟೆ ಅಲ್ಲದೆ ಸ್ಥಳೀಯ ನಾಯಕರು ಪಕ್ಷ ಬಿಡದಂತೆ ನೋಡಿಕೊಳ್ಳುವ ಹೊಣೆ
  7. ಗ್ಯಾರಂಟಿಗಳ‌ ಅನುಷ್ಠಾನದಿಂದ ಆಗಿರುವ ತೊಂದರೆಗಳ ಕುರಿತು ಪ್ರಬಲ ಹೋರಾಟ ರೂಪಿಸುವುದು

ಸಭೆಯ ಬಳಿಕ ನಾಯಕರು ಹೇಳಿದ್ದೇನು?

ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ.. ಆದರೆ..: ಯಡಿಯೂರಪ್ಪ

ಸಭೆಯಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಿದೆ. ಆಗಸ್ಟ್‌ 23ರಂದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಆಯೋಜಿಸಲಾಗುವುದು. ಐದಾರು ಸಾವಿರ ಜನರು ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಸಭೆಯ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ʻʻಈ ಸರ್ಕಾರ ಪಾಪರ್ ಆಗಿದೆ. ಎಲ್ಲ ಕೆಲಸ ಕಾರ್ಯಗಳೂ ಸ್ಥಗಿತವಾಗಿವೆʼʼ ಎಂದು ಅವರು ಆರೋಪಿಸಿದರು.

ಬಿಜೆಪಿಯ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಲೇ ಇನ್ನೊಂದು ಸುಳಿವು ನೀಡಿದರು ಯಡಿಯೂರಪ್ಪ. ಒಬ್ಬಿಬ್ಬರು ಪಕ್ಷ ಬಿಡುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಅದರ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ಗೆ ಹೋಗಬಹುದು ಎಂಬ ಚರ್ಚೆಯಲ್ಲಿರುವ ಎಸ್‌.ಟಿ. ಸೋಮಶೇಖರ್‌ ಮತ್ತು ಬೈರತಿ ಬಸವರಾಜ್‌ ಅವರ ಅನುಪಸ್ಥಿತಿ ಈ ಮಾತನ್ನು ಪುಷ್ಟೀಕರಿಸುತ್ತಿತ್ತು.

ಇದನ್ನೂ ಓದಿ : Commission Politics : 40 ಪರ್ಸೆಂಟ್‌ ಹಗರಣದ ತನಿಖೆಗೆ ಆದೇಶ; ತಿಂಗಳೊಳಗೆ ವರದಿ ಸಲ್ಲಿಕೆಗೆ ಸೂಚನೆ

ಪಕ್ಷ ಬಿಡುವುದೆಲ್ಲ ಸುಳ್ಳು ಸುದ್ದಿ ಎಂದ ಬಸವರಾಜ ಬೊಮ್ಮಾಯಿ

ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ʻʻಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ಸರ್ಕಾರ ತನ್ನ ಲೋಪ ಮುಚ್ಚಿಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ದೂರು ನೀಡಿದ ಗುತ್ತಿಗೆದಾರರನ್ನೇ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ತಮ್ಮ ವಿರುದ್ಧ ದನಿ ಎತ್ತುವವರ ದನಿ ಅಡಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು. ಕಾಂಗ್ರೆಸ್‌ ಮಾಧ್ಯಮಗಳ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದನ್ನು ಅವರು ಆಕ್ಷೇಪಿಸಿದರು.

ಆರ್. ಅಶೋಕ್ ಅವರು ಮಾತನಾಡಿ, ಸರ್ಕಾರ ಈ ರಾಜ್ಯವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದ ಕಡೆಯಿಂದ ಯಾವುದೆ ಬಿಲ್‌ ತಡೆ ಹಿಡಿದಿರಲಿಲ್ಲ. ಆದರೆ, ಸರ್ಕಾರ ಈಗ ಕಮಿಷನ್ ದಂಧೆಗಾಗಿ ಧಮ್ಕಿ ಹಾಕುತ್ತಿದೆ ಎಂದು ದೂರಿದರು.

Exit mobile version