Site icon Vistara News

BJP Politics : ಶೋಭಾ ಕರಂದ್ಲಾಜೆಗೆ ಫಿಕ್ಸ್‌ ಆಯ್ತಾ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ? ಸಿಂಹ ಆಹ್ವಾನ ಕೊಟ್ರೆ, ಶಾ ವಿಶ್‌ ಮಾಡಿದ್ರು!

Shobha karandlaje and amith shah

ಬೆಂಗಳೂರು: ಕೇಂದ್ರ ಸಚಿವ ಶೋಭಾ ಕರಂದ್ಲಾಜೆ (Union Minister Shobha Karandlaje) ಅವರ ಹೆಸರೇ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿರುವ ಎಲ್ಲ ಮುನ್ಸೂಚನೆಯೂ ಕಾಣುತ್ತಿದೆ. ಲೋಕಸಭಾ ಚುನಾವಣೆ (Lok Sabha Elections 2024) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶೋಭಾ ಆಯ್ಕೆಯೇ ಸೂಕ್ತ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ಹೈಕಮಾಂಡ್‌ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಗೆ ಪುಷ್ಟಿ ನೀಡುವಂತೆ ಕೆಲವು ವಿದ್ಯಮಾನಗಳು ನಡೆದಿವೆ. ಸೋಮವಾರ (ಅಕ್ಟೋಬರ್ 23) ಶೋಭಾ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amit Shah) ಅವರು ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಇನ್ನು ರಾಜ್ಯ ರಾಜಕೀಯಕ್ಕೆ (Karnataka Politics) ಬರುವಂತೆ ತಾವು ಆಹ್ವಾನ ಕೊಡುತ್ತಿರುವುದಾಗಿ ಮೈಸೂರು – ಕೊಡಗು ಸಂಸದ ಪ್ರತಾಪ್‌ ಸಿಂಹ (MP Pratap Simha) ಆಹ್ವಾನಿಸಿದ್ದಾರೆ. ಕೊನೆಗೂ ಬಿಜೆಪಿ ರಾಜಕೀಯ (BJP Politics) ಚಟುವಟಿಕೆ ಚುರುಕುಗೊಳ್ಳುತ್ತಿದೆ.

ಲೋಕಸಮರ ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನೇಮಕಕ್ಕೆ ಬಿಜೆಪಿ ಹೈ ಕಮಾಂಡ್ ಮುಂದಾಗಿದ್ದು, ಶೀಘ್ರದಲ್ಲೇ ಶೋಭಾ ಕರಂದ್ಲಾಜೆ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ. ಒಂದು ಲೆಕ್ಕಾಚಾರದ ಪ್ರಕಾರ ಈ ವಿಜಯದಶಮಿಗೆ ರಾಜ್ಯ ಬಿಜೆಪಿಯ ಹೊಸ ನಾಯಕತ್ವ ಘೋಷಣೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: CM Siddaramaiah: ಮಹಿಷನಂತೆ ಸಿಎಂ ಸಿದ್ದರಾಮಯ್ಯ ಫೋಟೊ ತಿರುಚಿ ಪೋಸ್ಟ್; ಎಫ್‌ಐಆರ್‌ ದಾಖಲು

ಶೋಭಾ ಆಯ್ಕೆ ಹಿಂದಿನ ಲೆಕ್ಕಾಚಾರ ಏನು?

ಈಗ ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿಯನ್ನು ಬಿಜೆಪಿ ಹೈಕಮಾಂಡ್‌ ಸಮೀಪದಿಂದ ನೋಡಿದೆ. ಇನ್ನು ಈಗಾಗಲೇ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೋಭಾ, ಕೊಟ್ಟ ಟಾಸ್ಕ್‌ ಅನ್ನು ಪೂರೈಸುತ್ತಾ ಬಂದಿದ್ದಾರೆ. ಇದರ ಜತೆಗೆ ಮಹಿಳೆ ಎಂಬ ಟ್ರಂಪ್‌ ಕಾರ್ಡ್‌ ಅನ್ನು ಬಳಸಬಹುದು. ಮಹಿಳಾ ರಾಜ್ಯಾಧ್ಯಕ್ಷೆಯನ್ನು ಮಾಡಿದರೆ ಮಹಿಳೆಯರನ್ನು ಪಕ್ಷದತ್ತ ಸೆಳೆಯಬಹುದು. ಇದರ ಜತೆಯಲ್ಲಿ ಶೋಭಾ ಹಿಂದುತ್ವದ ಫೈರ್ ಬ್ರಾಂಡ್ ಕೂಡ ಆಗಿದ್ದಾರೆ.

ಯಾರಿಂದಲೂ ತಕರಾರು ಬಾರದು

ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷೆ ಮಾಡುವುದರಿಂದ ಯಾರಿಂದಲೂ ಯಾವುದೇ ತಕರಾರು ಬರುವುದಿಲ್ಲ. ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಸೇರಿದಂತೆ ಅವರ ಬಣದವರ ವಿರೋಧವೂ ಇರುವುದಿಲ್ಲ. ಹೀಗಾಗಿ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಪಕ್ಷದಲ್ಲೂ ಕೂಡ ಹಿರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲವನ್ನೂ ಅಳೆದು ತೂಗಿ ಈ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಮಿತ್‌ ಶಾ ಕರೆ

ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಬೆನ್ನಲ್ಲೆ ಅವರಿಗೆ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ. ಈ ವೇಳೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಶಾ ಕರೆ ಮಾಡಿದ ವೇಳೆ ಶೋಭಾ ಮೈಸೂರಿನಲ್ಲಿ ಮಾವುತರು ಮತ್ತು ಕಾವಾಡಿಗಳಿಗೆ ಉಪಾಹಾರ ಬಡಿಸುತ್ತಿದ್ದರು. ಹುಟ್ಟುಹಬ್ಬದ ವಿಶ್‌ ಜತೆಗೆ, “ನಿಮಗೆ ಎಲ್ಲವೂ ಒಳ್ಳೆಯದಾಗಲಿ” ಎಂದು ಶುಭಾ ಹಾರೈಸಿದ್ದಾರೆ.

ನನಗೆ ಮಾಹಿತಿ ಇಲ್ಲ ಎಂದ ಶೋಭಾ ಕರಂದ್ಲಾಜೆ

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆ ಆಗಿದ್ದೇನೆ. ಕೃಷಿ ಇಲಾಖೆ ಕೆಲಸದಲ್ಲಿ ಖುಷಿಯಿಂದ ಇದ್ದೇನೆ. ಕೇಂದ್ರ ನಾಯಕರು ಸಕಾಲಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Kerala JDS: ಜೆಡಿಎಸ್‍ಗೆ ಭಾರೀ ಆಘಾತ! ಬಿಜೆಪಿ ಜೆತೆಗಿನ ಮೈತ್ರಿ ತಿರಸ್ಕರಿಸಿ, ಸ್ವತಂತ್ರ ಅಸ್ತಿತ್ವ ಎಂದ ಕೇರಳ ಘಟಕ

ನಾನು ಆಹ್ವಾನ ಕೊಟ್ಟಿದ್ದೇನೆ: ಪ್ರತಾಪ್‌ ಸಿಂಹ

ಸಂಸದ ಪ್ರತಾಪ್ ಸಿಂಹ ಅವರು ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ರಾಜಕಾರಣಕ್ಕೆ ಆಹ್ವಾನಿಸಿದ್ದಾರೆ. ಶೋಭಾ ಅವರು ಕೇಂದ್ರ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾರ್ಯಕರ್ತರು ಅವರನ್ನು ರಾಜ್ಯಕ್ಕೆ ಬರುವಂತೆ ಕೋರಿದ್ದಾರೆ. ಅವರ ಹುಟ್ಟುಹಬ್ಬದ ದಿನ ನಾನು ಸಹ ಆಹ್ವಾನ ಕೊಟ್ಟಿದ್ದೇನೆ. ಲೋಕಸಭಾ ಚುನಾವಣೆಯನ್ನು ನನ್ನ ದೇವರು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಗೆಲ್ಲುತ್ತೇವೆ. ಬೇರೆ ತೀರ್ಮಾನಗಳ ಬಗ್ಗೆ ಮಾತನಾಡಲು ನಾನು ಚಿಕ್ಕವನು ಎಂದು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version