ಬೆಂಗಳೂರು: ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದೆ ನಡೆದಿದ್ದ ಕರ ಸೇವಕರ (Kara Sevaks) ಪ್ರತಿಭಟನೆ ಕೇಸ್ ಅನ್ನು ರೀಓಪನ್ (Case Reopen) ಮಾಡಿ ಬಂಧನ ಮಾಡಿರುವ ಪ್ರಕರಣವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ನಾನು ಕರಸೇವಕ ನನ್ನನ್ನು ಬಂಧಿಸಿ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಮುಂಭಾಗ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok), ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ (N Ravikumar), ಸಂಸದ ಪಿ.ಸಿ. ಮೋಹನ್ (MP PC Mohan) ನೇತೃತ್ವದಲ್ಲಿ ಭಾರಿ ಪ್ರತಿಭಟನೆ (BJP Protest) ನಡೆಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಮಮಂದಿರ ಹೋರಾಟದಲ್ಲಿ ನಾನು ಭಾಗಿಯಾಗಿದ್ದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕರಾಳ ಛಾಯೆ ಮೂಡಿಸಿದೆ. ರಾಮ ಭಕ್ತರನ್ನು ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಕರ ಸೇವಕರು ಎಲ್ಲೆಲ್ಲಿ ಇದ್ದಾರೋ ಅವರನ್ನು ಹುಡುಕಿ ಜೈಲಿಗೆ ಹಾಕಿ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿದೆ. ಆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೂಚನೆಯಿಂದ ನೀಚತನಕ್ಕೆ ಇಳಿದಿದ್ದೀರಾ ಎಂದು ಪ್ರಶ್ನೆ ಮಾಡಿದರು.
ತಾಕತ್ತು, ಧೈರ್ಯ ಇದ್ದರೆ ನನ್ನನ್ನು ಬಂಧಿಸಿ
ನಾನೂ ಕರ ಸೇವಕ. ತಾಕತ್ತು, ಧೈರ್ಯ ಇದ್ದರೆ ನನ್ನನ್ನು ಬಂಧಿಸಿ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡಾ ಹೋರಾಟದಲ್ಲಿ ಭಾಗಿಯಾದವರು. ನಿಮಗೆ ಬಂಧಿಸಲು ತಾಕತ್ತು ಇದೆಯೇನ್ರೀ? ಕಾಂಗ್ರೆಸ್ನವರೇ ನಿಮಗೆ ನಾಚಿಕೆ ಆಗಲ್ವೇನ್ರೀ? ನಿಮ್ಮ ಎಲ್ಲ ಜೈಲುಗಳನ್ನು ಓಪನ್ ಮಾಡಿ ನಮ್ಮನ್ನೆಲ್ಲ ಅರೆಸ್ಟ್ ಮಾಡಿ ನೋಡೋಣ. ಕಾಂಗ್ರೆಸ್ನ ಕಾಮಾಲೆ ಕಣ್ಣಿಗೆ ಏನೂ ಕಾಣಿಸುವುದಿಲ್ಲ. ಒಂದು ಟೀಮ್ ಮಾಡಿಕೊಂಡು ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಜೈಲಿಗೆ ಹೋಗಿದ್ದರಲ್ಲವೇ ಅವರಿಗೆ ಏನು ಶಿಕ್ಷೆ ಕೊಡಬೇಕು? ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದರು.
ಶಾಸಕ ಸುರೇಶ್ ಕುಮಾರ್ ಪ್ರತಿಭಟನೆ
ರಾಜಾಜಿನಗರ ಪೊಲೀಸ್ ಠಾಣೆ ಎದುರು ಶಾಸಕ ಸುರೇಶ್ ಕುಮಾರ್ ಪ್ರತಿಭಟನೆ ನಡೆಸಿದ್ದಾರೆ. “ನಾನು ಕರಸೇವಕ ನನ್ನನ್ನು ಬಂಧಿಸಿ” ಪ್ಲೆಕಾರ್ಡ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಹಿಂದು ವಿರೋಧಿ ಸರ್ಕಾರವಾಗಿದೆ. ಕರ್ನಾಟಕದಲ್ಲಿ ಹಿಂದುಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಹಿಂದುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಸಹ ಕರಸೇವಕನಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಸವಾಲು ಹಾಕಿದ್ದಾರೆ.
ಗುರುವಾರ (ಜ. 4) ಸುನಿಲ್ ಕುಮಾರ್ ಬೆಂಗಳೂರಿನ ಸದಾಶಿವ ನಗರದ ಠಾಣೆಯ ಬಳಿ ಪ್ರತಿಭಟನೆ ಮಾಡಿದ್ದರು. ಮಾಜಿ ಸಚಿವ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಬಿಜೆಪಿ ರಾಜ್ಯಾದ್ಯಂತ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ. ಅಲ್ಲದೆ, ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿ ಶ್ರೀಕಾಂತ್ರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಏನಿದು ಪ್ರಕರಣ?
ಕರಸೇವೆಗೂ ಮುನ್ನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯೂ ಗಲಾಟೆಗಳು ನಡೆದಿದ್ದವು. ಈ ವೇಳೆ ಹುಬ್ಬಳ್ಳಿ ನಗರದಲ್ಲಿ ಸಂಭವಿಸಿದ್ದ ಗಲಭೆಯಲ್ಲಿ ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹಿಂದು ಕಾರ್ಯಕರ್ತರು ಆ ವೇಳೆ ಕೆಲ ಕಾಲ ತಲೆಮರೆಸಿಕೊಂಡಿದ್ದರು. ಬಳಿಕ ಪ್ರಕರಣವು ಯಾವುದೇ ವಿಚಾರಣೆ ಕಾಣದೆ ಹಾಗೇ ಉಳಿದಿತ್ತು. ಪ್ರಕರಣ ತಿಳಿಯಾದಾಗ ಎಂದಿನಂತೆ ಎಲ್ಲರೂ ಮನೆಯಲ್ಲಿದ್ದರು.
30 ವರ್ಷದ ಹಳೇ ಕೇಸ್?
ಪ್ರಕರಣ ದಾಖಲಾದಾಗ ಆರೋಪಿತರು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ಈಗ 31 ವರ್ಷಗಳ ಹಳೇ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರು ಜೀವ ಕೊಟ್ಟಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳ ಏಕಾಏಕಿ ಹುಡುಕಾಟ ಆರಂಭವಾಗಿದೆ. 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.
ಇದನ್ನೂ ಓದಿ: N Ravikumar: ಮಂಗಳೂರು ಮೀನು ಮಾರುಕಟ್ಟೆಗೆ ಎನ್. ರವಿಕುಮಾರ್ ಭೇಟಿ; ಸಮಸ್ಯೆ ಹೇಳಿಕೊಂಡ ಮಹಿಳಾ ಮೀನುಗಾರರು
ಉಳಿದ ಆರೋಪಿಗಳಿಗೆ ಹುಡುಕಾಟ
ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಪೊಲೀಸರು ಒಪ್ಪಿಸಿದ್ದರು. ಇನ್ನುಳಿದ ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ. ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ. ರಾಮ ಜನ್ಮಭೂಮಿ (Ram Janmabhoomi) ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿರುವ ಹೊತ್ತಿನಲ್ಲಿ ರಾಜ್ಯದಲ್ಲಿ ಈಗ ಕರಸೇವಕರ ಬಂಧನಕ್ಕೆ ಮುಂದಾಗಿರುವ ಪ್ರಕರಣವು ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.