Site icon Vistara News

BJP Protest: ರಾಜ್ಯದಲ್ಲಿ ಸತ್ತು ಹೋದ ಕಾಂಗ್ರೆಸ್ ಸರ್ಕಾರ; ವಿಧಾನಸೌಧಕ್ಕೆ ಬೀಗ ಜಡಿಯಲು ಹೋದ ಬಿಜೆಪಿ!

BJP protest at Gandhi statue in Bangalore

ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ‌ ರಾಜ್ಯ ಕಾಂಗ್ರೆಸ್ ಸರ್ಕಾರ‌ (Congress Government) ಸಂಪೂರ್ಣವಾಗಿ ವಿಫಲವಾಗಿ ಎಂದು ಆರೋಪಿಸಿ ರಾಜ್ಯ ಬಿಜೆಪಿ ವತಿಯಿಂದ ಬುಧವಾರ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆಯನ್ನು (BJP Protest) ನಡೆಸಲಾಯಿತು. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ ಮಾಡಿದಾಗ ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok) ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್‌ ರೈತರ ಹಾಗೂ ಜನರ ಪಾಲಿಗೆ ಸತ್ತು ಹೋಗಿದೆ. ಹೀಗಾಗಿ ನಾವೀಗ ವಿಧಾನಸೌಧದಲ್ಲಿರುವ ಸಚಿವರ ಕಚೇರಿಗಳಿಗೆ ಬೀಗವನ್ನು ಹಾಕಲು ಹೋಗುತ್ತಿದ್ದೇವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

BJP protest at Gandhi statue in Bangalore

ಬಳಿಕ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಈ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯವನ್ನು ಮಾಡಿದೆ. ರೈತರಿಗೆ ಬರ ಪರಿಹಾರ ನೀಡುತ್ತಿಲ್ಲ. ಸುಮ್ಮನೆ ಕೇಂದ್ರದ ವಿರುದ್ಧ ಮಾತನಾಡುತ್ತಿದೆ. ರಾಜ್ಯದಲ್ಲಿದ್ದು ಜನರ ಸಮಸ್ಯೆಯನ್ನು ಪರಿಹಾರ ಮಾಡುವುದು ಬಿಟ್ಟು ಸರ್ಕಾರದ ಎಲ್ಲ ಜನಪ್ರತಿನಿಧಿಗಳು ನವ ದೆಹಲಿಗೆ ಹೋಗಿ ಕುಳಿತಿದ್ದಾರೆ. ಈ ಸರ್ಕಾರ ರಾಜ್ಯದಲ್ಲಿ ಇದೆಯಾ? ಹೀಗಾಗಿ ನಾವು ವಿಧಾನಸೌಧಕ್ಕೆ ಬೀಗ ಹಾಕಲು ಹೊರಟಿದ್ದೇವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

BJP protest at Gandhi statue in Bangalore

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.‌

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ

ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರಕ್ಕೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ (Congress Government) ಧಿಕ್ಕಾರ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ರಾಜ್ಯದ ರೈತರನ್ನು ಕಣ್ಣೀರು ಹಾಕಿಸುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಲಾಯಿತು.‌

BJP protest at Gandhi statue in Bangalore

ಬಿಜೆಪಿ ನಾಯಕರ ಬಂಧನ, ಬಿಡುಗಡೆ

ಪ್ರತಿಭಟನೆಗೆ ನೀಡಲಾಗಿದ್ದ ಕಾಲಾವಕಾಶದ ಬಳಿಕವೂ ಬಿಜೆಪಿ ನಾಯಕರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಹೀಗಾಗಿ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪ್ರತಿಭಟನೆಯನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೂ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಸೇರಿದಂತೆ ಇನ್ನಿತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಬಳಿಕ ಬಿಡುಗಡೆಗೊಳಿಸಿದರು.

ಇದನ್ನೂ ಓದಿ: Congress Protest: ‘ಅಮ್ಮಾ, ತಾಯಿ ನಿರ್ಮಲಾ ನಮ್ಮ ದುಡ್ಡು ಕೊಡಮ್ಮಾ’ ಎಂದ ಸಿಎಂ ಸಿದ್ದರಾಮಯ್ಯ

ವಿಧಾನಸೌಧದೆದುರು ಹೈಡ್ರಾಮಾ

ಇನ್ನು ಪ್ರತಿಭಟನೆ ಬಳಿಕ ಬಿಜೆಪಿ ನಾಯಕರು ವಿಧಾನಸೌಧದ ಬಳಿಗೆ ಬಂದಿದ್ದು, ವಿಧಾನಸೌಧದ ಗೇಟ್‌ಗೆ ಬೀಗ ಹಾಕುವುದಾಗಿ ಪಟ್ಟುಹಿಡಿದು ಕುಳಿತರು. ಇದಕ್ಕೆ ಪೊಲೀಸರು ಅವಕಾಶವನ್ನು ನೀಡದೇ ಇದ್ದಿದ್ದರಿಂದ ಸ್ಥಳದಲ್ಲೇ ಕುಳಿತು ಆಕ್ರೋಶವನ್ನು ಹೊರಹಾಕಿದರು. ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆಯಿತು.

Exit mobile version