Site icon Vistara News

BJP protest : ಮೋದಿ ಹುಟ್ಟುಹಬ್ಬದಂದೇ ರಾಜ್ಯಾದ್ಯಂತ ಬಿಜೆಪಿ ಹೋರಾಟ ಆರಂಭ; ಕುರುಡುಮಲೆ ದೇವಳದಿಂದಲೇ ಶುರು!

BJP Protest from sept 17

ಬೆಂಗಳೂರು: ರಾಜ್ಯ ಸರ್ಕಾರದ ಬರ ನಿರ್ವಹಣೆ ವೈಫಲ್ಯ ಮತ್ತು ಕಾವೇರಿ ನೀರು ನಿರ್ವಹಣೆ ವಿಚಾರದಲ್ಲಿ ಆಗಿರುವ ಅನ್ಯಾಯ ಖಂಡಿಸಿ ಸೆಪ್ಟೆಂಬರ್‌ 17ರಿಂದಲೇ (ಭಾನುವಾರ) ಬಿಜೆಪಿ ರಾಜ್ಯವ್ಯಾಪಿ ಹೋರಾಟ (Statewide protest) ಆರಂಭವಾಗಲಿದೆ. 2023ರ ಫೆಬ್ರವರಿ 3ರಂದು ಕಾಂಗ್ರೆಸ್‌ ತನ್ನ ಪ್ರಜಾಧ್ವನಿ ಯಾತ್ರೆಯನ್ನು (Prajadhwani yatre) ಆರಂಭಿಸಿದ ಕೋಲಾರದ ಅದೇ ಕುರುಡುಮಲೆ ಗಣಪತಿ ದೇವಸ್ಥಾನದಿಂದ (Kurudumale Ganapati Temple) ಬಿಜೆಪಿಯ ಹೋರಾಟವೂ (BJP Protest) ಆರಂಭವಾಗಲಿದೆ.

ಸೆಪ್ಟೆಂಬರ್‌ 21ರಂದು ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆ, ಅಂದು ಸರ್ಕಾರ ತೆಗೆದುಕೊಳ್ಳುವ ನಿಲುವನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡುವುದಾಗಿ ಬಿಜೆಪಿ ಹೇಳಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಾದ ಸೆಪ್ಟೆಂಬರ್‌ 17ರಿಂದಲೇ ತನ್ನ ಹೋರಾಟವನ್ನು ಆರಂಭ ಮಾಡಲು ನಿರ್ಧರಿಸಿದೆ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ರಾಜ್ಯವ್ಯಾಪಿ ಪ್ರವಾಸ ಕೂಡಾ ಆರಂಭವಾಗಲಿದೆ.

ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆಯೊಂದಿಗೆ ಆರಂಭ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಹಾಗೂ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಖಂಡಿಸಿ ರೈತ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯಾದ್ಯಂತ ಪ್ರವಾಸದ ಪ್ರಾರಂಭದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 17ರಂದು ಬೆಳಗ್ಗೆ 10.30ಕ್ಕೆ ಕೋಲಾರದ ಮುಳುಬಾಗಿಲಿನ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಮಹಾಪೂಜೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ಮಹಾಪೂಜೆಯ ಬಳಿಕ ಬೆಳಗ್ಗೆ 11.00 ಗಂಟೆಗೆ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ರವಿಕುಮಾರ್‌ ತಿಳಿಸಿದರು.

ಪ್ರವಾಸದ ವೇಳಾಪಟ್ಟಿ ಶೀಘ್ರವೇ ಪ್ರಕಟ

ಬಿಜೆಪಿ ಹೋರಾಟದ ಆರಂಭವನ್ನು ಪ್ರಕಟಿಸಿದೆ. ಆದರೆ ಪ್ರವಾಸದ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಬಿಎಸ್‌ ಯಡಿಯೂರಪ್ಪ ಅವರ ಪ್ರವಾಸ ಕಾರ್ಯಕ್ರಮದಲ್ಲಿ ನಳಿನ್‍ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಮತ್ತು ಇತರ ಮುಖಂಡರು ಭಾಗವಹಿಸಲಿದ್ದಾರೆ. ಪ್ರವಾಸದ ದಿನಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ರವಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Cauvery Dispute : ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಡುತ್ತಿದೆಯಾ ಸರ್ಕಾರ?; ಬಿಜೆಪಿ ನಾಯಕರಿಂದ ಗಂಭೀರ ಆರೋಪ

ಯಾಕೆ ಈ ಹೋರಾಟ ಮತ್ತು ಪ್ರವಾಸ?

  1. ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಬರ ತೀವ್ರವಾಗಿದೆ. ವಿದ್ಯುತ್ ಕೊರತೆ ರಾಜ್ಯವನ್ನು ಮತ್ತು ರಾಜ್ಯದ ರೈತರನ್ನು ಕಾಡುತ್ತಿದೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ.
  2. ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗುವಂತಾಗಿದೆ. ಈ ವಿಚಾರಗಳನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸಲು ಪ್ರವಾಸ ನಡೆಯಲಿದೆ.
  3. ಸರಕಾರವು ಕಾವೇರಿ ನೀರಿನ ವಿಚಾರವನ್ನು ನಿಭಾಯಿಸುವಲ್ಲಿ ವಿಫಲತೆ ಅನುಭವಿಸಿದೆ. ಐಎನ್‍ಡಿಐಎ ಒಕ್ಕೂಟವನ್ನು ಸಂತುಷ್ಟಿಪಡಿಸಲು ಅದು ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುತ್ತಿದೆ.
  4. ರಾಜ್ಯದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮಿತಿ ಮೀರಿದೆ. ಈ ಎಲ್ಲ ವೈಫಲ್ಯಗಳನ್ನು ಖಂಡಿಸಿ ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರವಾಸ ನಡೆಯಲಿದೆ.

Exit mobile version