Site icon Vistara News

‌Zameer Ahmed : ಬಿಜೆಪಿಯವರು ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು: ಜಮೀರ್‌ ಹೇಳಿಕೆಗೆ ಬಿಜೆಪಿ ಕೆಂಡ

Zameer Ahmed khan

ಬೆಂಗಳೂರು: ಮುಸ್ಲಿಂ ಸ್ಪೀಕರ್ (Muslim Speaker) ಎದುರು ಬಿಜೆಪಿ ಶಾಸಕರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು. ಒಳ್ಳೊಳ್ಳೆಯ ಬಿಜೆಪಿ ಶಾಸಕರೂ ಹೀಗೆ ನಿಲ್ಲುವಂತೆ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (‌Zameer Ahmed Khan) ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಜೆಪಿ ಕೆಂಡವಾಗಿದೆ. ತಕ್ಷಣವೇ ಜಮೀರ್‌ ಅಹ್ಮದ್‌ ರಾಜ್ಯದ ಜನತೆ ಕ್ಷಮೆ ಕೇಳಬೇಕು. ಈ ಹೇಳಿಕೆ ಖಂಡನೀಯ ಎಂದು ಹಲವು ನಾಯಕರು ಹೇಳಿದ್ದಾರೆ. ಇನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (DR G Parameshwar) ಸೇರಿ ಕೆಲವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಕಾಂಗ್ರೆಸ್‌ನಲ್ಲಿ ನಾವು 9 ಜನ ಮುಸ್ಲಿಮರು ಗೆದ್ದಿದ್ದೇವೆ. 9 ಮಂದಿಯಲ್ಲಿ ಐದು ಮಂದಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನ್ನನ್ನು ಸಚಿವನನ್ನಾಗಿ ಮಾಡಿದೆ. ಸಲೀಂ ಅಹಮದ್‌ಗೆ ಚೀಫ್ ವಿಪ್‌ ಜವಾಬ್ದಾರಿ ನೀಡಲಾಗಿದೆ. ನಜೀರ್ ಅಹಮದ್‌ಗೆ ಸಿಎಂ ಪೊಲಿಟಿಕಲ್ ಸೆಕ್ರೆಟರಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಎಂದೂ ಮುಸ್ಲಿಮರು ಸ್ಪೀಕರ್ ಆಗಿರಲಿಲ್ಲ. ಆದರೆ, ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಿದ್ದು ನಮ್ಮ ಕಾಂಗ್ರೆಸ್‌. ಈ ಮೂಲಕ ಒಳ್ಳೊಳ್ಳೆಯ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಅಂತ ಕೈ ಮುಗಿದು ನಿಂತ್ಕೋಬೇಕು. ಹಾಗೆ ನಮ್ಮ ಪಕ್ಷ ಮಾಡಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

ಇದನ್ನೂ ಓದಿ: HD Kumaraswamy : ಹುಷಾರ್‌…! ಏನೇನೋ ಮಾತಾಡಬೇಡಿ, ಪೆನ್‌ಡ್ರೈವ್ ಠುಸ್ ಆಗಿಲ್ಲ ಎಂದ ಎಚ್‌ಡಿಕೆ

ಬಿ.ವೈ. ವಿಜಯೇಂದ್ರ‌ ಖಂಡನೆ

ಸಚಿವ ಜಮೀರ್ ಅಹಮದ್ ಖಾನ್‌ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ (BY Vijayendra) ತೀವ್ರವಾಗಿ ಖಂಡಿಸಿದ್ದಾರೆ. ಜಮೀರ್ ಅಹಮದ್ ಅವರೇ… ನೀವು ಯಾವುದೋ ಒಂದು ಕೋಮಿನ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ. ನೀವು ನಿಮ್ಮ ಅಂತರಾಳದ ಮಾತನ್ನು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಇನ್ನು ಮಂದೆ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದ್ದಾರೆ.

ಬಿಜೆಪಿಯವರು ಗೌರವ ಕೊಡುವುದಿಲ್ಲವೆಂದರೆ ಏನಾಗಲಿದೆ?: ಎಚ್‌ಡಿಕೆ ಪ್ರಶ್ನೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಭಾಧ್ಯಕ್ಷರ ಹುದ್ದೆ, ಗೌರವ ಉಳಿಯಬೇಕಾದರೆ ಆ ಸಚಿವರಿಗೆ ಕ್ಷಮೆ ಕೇಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಬೇಕು. ಬಿಜೆಪಿ ಶಾಸಕರು ನಮ್ಮ ಯು.ಟಿ. ಖಾದರ್ ಅವರಿಗೆ ಎದ್ದು ನಮಸ್ಕರಿಸಬೇಕೆಂದು ಹೇಳಿದ್ದಾರುವುದು ಸರಿಯಲ್ಲ. ಆ ಹುದ್ದೆಯನ್ನು ಧರ್ಮಕ್ಕೆ ಅಂಟಿಸಲು ಹೊರಟ್ಟಿದ್ದಾರಲ್ಲ? ಒಂದು ವೇಳೆ ಬಿಜೆಪಿಯ 66 ಶಾಸಕರು ಮುಂದಿನ ಅಧಿವೇಶನದಲ್ಲಿ ನಾವು ಎದ್ದು ನಿಂತು ನಮಸ್ಕರಿಸುವುದಿಲ್ಲ ಎಂದು ಹೇಳದರೆ ಏನಾಗುತ್ತದೆ? ಸಂವಿಧಾನದ ಆಶಯ ಏನಾಗುತ್ತದೆ? ಇದನ್ನು ಸರ್ಕಾರದವರು ಅರ್ಥ ಮಾಡಿಕೊಂಡು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ.

ವಿಷಯವೇ ಗೊತ್ತಿಲ್ಲವೆಂದ ಡಾ. ಜಿ. ಪರಮೇಶ್ವರ್

ತೆಲಂಗಾಣದ ಚುನಾವಣೆ ಪ್ರಚಾರದಲ್ಲಿ ಸಚಿವ ಜಮೀರ್ ಅಹ್ಮದ್‌ ಖಾನ್‌ ನೀಡಿದ ಹೇಳಿಕೆ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಪ್ರಶ್ನೆ ಮಾಡಿದಾಗ, ಜಮೀರ್ ಅಹಮದ್ ಹೇಳಿಕೆಯನ್ನು ನಾನು ಗಮನಿಸಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಗೊತ್ತಿಲ್ಲದೆ ಅದಕ್ಕೆ ಪ್ರತಿಕ್ರಿಯೆ ಮಾಡೋದು ಸರಿಯಲ್ಲ. ವಿಷಯ ಗೊತ್ತಿದ್ದರೆ ನಾನು ಪ್ರತಿಕ್ರಿಯೆ ಮಾಡುತ್ತಿದ್ದೆ. ವಿಷಯ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ಪ್ರತಿಕ್ರಿಯೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಜಮೀರ್ ಹೇಳಿಕೆ ಹುಚ್ಚು ಹಾಗೂ ವಿಕೃತ: ರೇಣುಕಾಚಾರ್ಯ

ಜಮೀರ್‌ ಹೇಳಿಕೆಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಒಂದು ಧರ್ಮಕ್ಕೆ ತಲೆಬಾಗಬೇಕು ಅಂದರೆ ಮುಸ್ಲಿಂರಿಗೆ ತಲೆಬಾಗಬೇಕಾ? ಜಮೀರ್ ಹೇಳಿಕೆ ಹುಚ್ಚು ಹಾಗೂ ವಿಕೃತದಿಂದ ಕೂಡಿದ್ದಾಗಿದೆ. ಹಿಂದು ಹಾಗೂ ಮುಸ್ಲಿಮರು ಸೌಹಾರ್ದಯುತವಾಗಿ ಬದುಕಬೇಕು. ನಿಮ್ಮ ಬಾಯಲ್ಲಿ ಬರುವ ಮಾತಿಂದ ಕೋಮು ಘರ್ಷಣೆಗಳು ಆಗುತ್ತಿವೆ. ಎಲುಬಿಲ್ಲದೇ ನಾಲಿಗೆಯಂತೆ ಏನೇನೋ ಮಾತಾಡೋದಲ್ಲ. ಯು.ಟಿ. ಖಾದರ್‌ಗೆ ನಾವು ತಲೆಬಾಗಲ್ಲ. ಯು.ಟಿ. ಖಾದರ್ ಸಹ ಈ ಹೇಳಿಕೆಯನ್ನು ಖಂಡಿಸಬೇಕು. ಜಮೀರ್‌ ಈ ನಾಡಿನ ಜನರಲ್ಲಿ ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಜಮೀರ್ ಹೇಳಿಕೆ ಸಮಂಜಸವಲ್ಲ: ಮಾಜಿ ಸ್ಪೀಕರ್‌ ಕೋಳಿವಾಡ

ಜಮೀರ್ ಹೇಳಿಕೆ ಸಮಂಜಸವಲ್ಲ. ಸಮುದಾಯ ಓಲೈಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ವಿಧಾನಸಭಾಧ್ಯಕ್ಷ ಸ್ಥಾನ ಸಂವಿಧಾನದತ್ತವಾಗಿದೆ. ಅಲ್ಲಿ ಕೂಡ ಯಾವುದೇ ಜಾತಿ, ಧರ್ಮ, ಪಕ್ಷ ಬರಲ್ಲ. ಈ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಮಾಜಿ ಸ್ಪೀಕರ್ ಕೋಳಿವಾಡ ವಿಸ್ತಾರ ನ್ಯೂಸ್‌ಗೆ ಹೇಳಿದ್ದಾರೆ.

ಇದನ್ನೂ ಓದಿ: HD Kumaraswamy : ವಿದ್ಯುತ್‌ ಕಳ್ಳತನ ಪ್ರಕರಣ; 68,526 ರೂಪಾಯಿ ದಂಡ ಕಟ್ಟಿದ ಎಚ್‌.ಡಿ. ಕುಮಾರಸ್ವಾಮಿ

ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದೇನು? ಇಲ್ಲಿದೆ ವಿಡಿಯೊ

ಜಮೀರ್ ಅಹ್ಮದ್ ಹೇಳಿಕೆ ಖಂಡನೀಯ: ಜಿ.ಟಿ. ದೇವೇಗೌಡ

ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಎಲ್ಲ ಪಕ್ಷದವರು ಗೌರವ ಕೊಡಬೇಕು. ಹಾಗೆಯೇ ವಿಧಾನಸಭೆ ಸಭಾಧ್ಯಕ್ಷರ ಹುದ್ದೆ ಸಾಂವಿಧಾನಿಕವಾಗಿ ಇರುತ್ತದೆ. ಎಲ್ಲ ಪಕ್ಷದವರು ಗೌರವ ಸಲ್ಲಿಸಬೇಕು. ಅದನ್ನು ರಾಜಕೀಯವಾಗಿ ಎಳೆದು ತರುವುದು ತಪ್ಪು ಮತ್ತು ಖಂಡನೀಯ ಎಂದು ಜಮೀರ್ ಅಹಮದ್ ಹೇಳಿದರು.

Exit mobile version