ಬೆಂಗಳೂರು: ಕರ್ನಾಟಕವು ಕಾಂಗ್ರೆಸ್ ಹೈಕಮಾಂಡ್ (Congress High command) ಪಾಲಿಗೆ ಎಟಿಎಂ ಆಗಲಿದೆ ಎಂದು ಚುನಾವಣೆಗೆ ಮೊದಲು ಮಾಡಿದ ಆರೋಪವನ್ನು ಬಿಜೆಪಿ ಈಗ ದೊಡ್ಡ ಮಟ್ಟದಲ್ಲಿ ಪ್ರಚಾರದ ಮುಂಚೂಣಿಗೆ ತಂದಿದೆ. ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ಗುತ್ತಿಗೆದಾರರು, ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿಯಲ್ಲಿ ನೂರು ಕೋಟಿಯಷ್ಟು ಹಣ ಸಿಕ್ಕಿದ ಬಳಿಕ ತನ್ನ ಹಿಂದಿನ ಆರೋಪಕ್ಕೆ ಮರುಜೀವ ನೀಡಿದೆ. ಇದೀಗ ಕಾಂಗ್ರೆಸ್‌ನ ಕಲೆಕ್ಷನ್ ವಂಶಾವಳಿ (Collection tree) ಎಂಬ ಹೆಸರಿನಲ್ಲಿ ಹಣ ಎಲ್ಲಿಂದ ಯಾವ ದಾರಿಯಲ್ಲಿ ಬರುತ್ತದೆ ಎಂದು ವಿವರಣೆ ನೀಡುವ ಪೋಸ್ಟರ್ ಬಿಡುಗಡೆ (Poster release) ಮಾಡಿ ಕಾಂಗ್ರೆಸ್‌ನ್ನು ಕೆಣಕಿದೆ.
ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಎಂಬ ಹೆಸರಿನಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಈ ಪೋಸ್ಟರ್‌ನಲ್ಲಿ ಎಲ್ಲ ಹಣವೂ ಸಲ್ಲುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಎಂದು ತೋರಿಸಲಾಗಿದೆ.
ದೆಹಲಿ ಕಲೆಕ್ಷನ್ ಕೇಂದ್ರ ಬಿಂದು. ರಾಹುಲ್ ಗಾಂಧಿ ಇದರ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದು ವಿವರಿಸಲಾಗಿದೆ. ಇವರಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮೂಲಕ ಹಣ ಸಂದಾಯವಾಗುತ್ತಿದ್ದು, ಅದನ್ನು ತಲುಪಿಸಲು ರಣದೀಪ್ ಸುರ್ಜೇವಾಲಾ ಮತ್ತು ಕೆ.ಸಿ ವೇಣುಗೋಪಾಲ್ ಏಜೆಂಟರು ಎಂದು ವಿವರಿಸಲಾಗಿದೆ.
ಸಿದ್ದರಾಮಯ್ಯ ಅವರಿಗೆ ಎಲ್ಲಿಂದ ದುಡ್ಡು ಬರುತ್ತದೆ?
ಸಿದ್ದರಾಮಯ್ಯ ಅವರಿಗೆ ದುಡ್ಡು ತಂದುಕೊಡುವವರು ಯಾರು ಎಂದು ಬಿಜೆಪಿ ವಿವರಣೆ ನೀಡಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತು ಸಚಿವ ಭೈರತಿ ಸುರೇಶ್ ಅವರು ಹಣ ತಂದುಕೊಡುತ್ತಾರೆ ಎಂದು ಚಿತ್ರಿಸಲಾಗಿದೆ.
ಸಿದ್ದರಾಮಯ್ಯ ವಂಶಾವಳಿಯಲ್ಲಿ ರಾಮಯ್ಯ ಮತ್ತು ಕೆಂಪಣ್ಣ (ಗುತ್ತಿಗೆದಾರರ ಸಂಘದ ಅಧ್ಯಕ್ಷರು) ಕಲೆಕ್ಷನ್ ಏಜೆಂಟ್‌ಗಳೆಂದು ಹೇಳಲಾಗಿದೆ.
ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲಿಂದ ದುಡ್ಡು ಬರುತ್ತದೆ?
ಎರಡನೇ ಭಾಗದಲ್ಲಿ ಡಿ.ಕೆ. ಮೂಲಕ ಹಣ ಸಂಗ್ರಹ ನಡೆಯುತ್ತದೆ. ಈ ಗುಂಪಿನಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಹಣ ತಲುಪಿಸುವುದು ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನೇತೃತ್ವದ ತಂಡ ಎನ್ನುವುದು ಬಿಜೆಪಿ ಆರೋಪ. ಅಂಬಿಕಾಪತಿ ತಂಡದಲ್ಲಿ ಪ್ರದೀಪ್, ಪ್ರಹ್ಲಾದ್, ಪ್ರಮೋದ್ ನೇತೃತ್ವದಲ್ಲಿ ಹಣ ಸಂಗ್ರಹ ನಡೆದಿದೆ ಎನ್ನುವುದು ಬಿಜೆಪಿ ಆರೋಪ. ಇನ್‌ಫ್ರಾಕಾನ್ ಪ್ರೈವೆಟ್ ಲಿಮಿಟೆಡ್ ಹೆಸರೂ ಕೂಡಾ ಇದೆ.
ಇದನ್ನೂ ಓದಿ : Collection Poster : ಕಲೆಕ್ಷನ್‍ನಲ್ಲೂ ಸಿಎಂ, ಡಿಸಿಎಂ ನಡುವೆ ತೀವ್ರ ಸ್ಪರ್ಧೆ: ಡಿ.ವಿ ಸದಾನಂದ ಗೌಡ
ಎಟಿಎಮ್ ಸರ್ಕಾರ ಹೆಸರಿನಲ್ಲಿ ಬಿಜೆಪಿ ಕಾಂಗ್ರೆಸ್ ಮೇಲೆ ಹಲವು ರೀತಿಯಲ್ಲಿ ದಾಳಿ ನಡೆಸುತ್ತಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪೇ ಸಿಎಂ ಎಂಬ ಪೋಸ್ಟರ್ ಅಭಿಯಾನದ ಮಾದರಿಯಲ್ಲೇ ಇಲ್ಲೂ ಕಾರ್ಯಾಚರಣೆ ನಡೆಯುತ್ತಿದೆ. ಅಂದು ಕಾಂಗ್ರೆಸ್ ಇದರಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿತ್ತು. ಅದನ್ನೇ ಬಿಜೆಪಿ ತಿರುಗುಬಾಣವಾಗಿ ಬಳಕೆ ಮಾಡಿದೆ. ಜತೆಗೆ ಇನ್ನೂ ಈ ಅಭಿಯಾನ ಮುಂದುವರಿಯಲಿದೆ. ಎಲ್ಲಾ ಜಿಲ್ಲಾ ಮಟ್ಟದಲ್ಲೂ ನಡೆಯುತ್ತದೆ ಎಂದು ತಿಳಿಸಿದೆ.