Site icon Vistara News

‌Yathindra Siddaramaiah : ಹೆಲೋ ಅಪ್ಪ..! ಶ್ಯಾಡೋ ಸಿಎಂ ಪೋಸ್ಟರ್‌ ಬಿಟ್ಟ ಬಿಜೆಪಿ!

BJP releases shadow CM poster on Yathindra Siddaramaiah

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ (‌Yathindra Siddaramaiah) ಹಸ್ತಕ್ಷೇಪ ಹೆಚ್ಚಾಗಿದ್ದು, ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ಲಭ್ಯವಾಗಿರುವ ವಿಡಿಯೊ ಸಾಕ್ಷಿ ಬಗ್ಗೆ ಈಗ ಪ್ರತಿಪಕ್ಷಗಳು ಮುಗಿಬಿದ್ದಿವೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ವೇಳೆ ಬಿಜೆಪಿ ತನ್ನ ಸೋಷಿಯಲ್‌ ಮೀಡಿಯಾ (Social Media) ಎಕ್ಸ್‌ ಖಾತೆಯಲ್ಲಿ ಪೋಸ್ಟರ್‌ ಒಂದನ್ನು ಹರಿಬಿಟ್ಟಿದ್ದು, ಯತೀಂದ್ರ ಸಿದ್ದರಾಮಯ್ಯ ಅವರನ್ನು “ಶ್ಯಾಡೋ ಸಿಎಂ” (Shadwo CM) ಎಂದು ಕರೆದಿದೆ. ಇದಕ್ಕೆ ಹೆಲೋ ಅಪ್ಪ..! ಎಂದಷ್ಟೇ ಶೀರ್ಷಿಕೆಯನ್ನು ಬರೆದಿದೆ.

ಈಗ ಬಿಜೆಪಿ ಹರಿಬಿಟ್ಟಿರುವ ಶ್ಯಾಡೋ ಸಿಎಂ ಪೋಸ್ಟ್‌ ಸಖತ್‌ ವೈರಲ್‌ ಆಗಿದೆ. ಶ್ಯಾಡೋ ಸಿಎಂ ಪೋಸ್ಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೊವನ್ನು ಚಿಕ್ಕದಾಗಿ ಹಾಕಿ ಅವರ ನೆರಳನ್ನು ದೊಡ್ಡದು ಮಾಡಿ ಅದರಲ್ಲಿ ಯತೀಂದ್ರ ಸಿದ್ದರಾಮಯ್ಯ ಮೂಡುವಂತೆ ಮಾಡಿದ್ದಾರೆ. ಜತೆಗೆ ಆ ಫೋಟೊ ಒಳಗೆ ಸಿಎಂ ಸಿದ್ದರಾಮಯ್ಯ ಅವರ ಲೆಟರ್‌ ಹೆಡ್‌ ಇರುವ ಪತ್ರಗಳನ್ನು ಮಸುಕು ಮಸುಕಾಗಿ ಹಾಕಲಾಗಿದೆ. ಜತೆಗೆ “Shadow CM The Yathindra” ಎಂಬುದಾಗಿ ಬರೆಯಲಾಗಿದೆ. ಈ ಮೂಲಕ ಬಿಜೆಪಿಯು ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಕಾಲೆಳೆದಿದೆ.

ಇದನ್ನೂ ಓದಿ: Yathindra Siddaramaiah: ಯತೀಂದ್ರ‌ ವರ್ಗಾವಣೆ ದಂಧೆ; ಮಾನ ಇದ್ದರೆ ಸಿಎಂ ರಾಜೀನಾಮೆ ಕೊಡಲಿ ಎಂದ ಎಚ್‌ಡಿಕೆ

ಏನಿದು ಪ್ರಕರಣ?

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್‌ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್‌ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟು ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವ ಅವರಿಗೆ ಸೂಚಿಸಿದ್ದಾರೆ. ಈ ವಿಡಿಯೊ ಈಗ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ.

Exit mobile version