Site icon Vistara News

Brand Bangalore: ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ; ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಕುಟುಕಿದ ಬಿಜೆಪಿ

Brand Bangalore and BJP Slams DK Shivakumar and Congress Government

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಗೂ ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಕನಸಿನ “ಬ್ರ್ಯಾಂಡ್‌ ಬೆಂಗಳೂರು” (Brand Bangalore) ಯೋಜನೆ ಬಗ್ಗೆ ಬಿಜೆಪಿ ಕಿಡಿಕಾರಿದೆ. ನಗರ ಯೋಜನೆಯ ಕಲ್ಪನೆಯೇ ಇಲ್ಲದೆ ಹಾಗೂ ದೂರದೃಷ್ಟಿ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್‌ ಸರ್ಕಾರದಿಂದ (Congress Government) ಈ ಯೋಜನೆ ಹಳ್ಳ ಹಿಡಿದಿದೆ ಎಂದು ಅಸಮಾಧಾನ ಹೊರಹಾಕಿದೆ. ಅಲ್ಲದೆ, “ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ” ಎಂದು ಕಾಲೆಳೆದಿದೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಬಿಜೆಪಿ, ಕಾಂಗ್ರೆಸ್‌ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಮಳೆಯಿಂದಾಗಿ ಬೆಂಗಳೂರಿನ ಹಲವು ನಿವಾಸಿಗಳ ಮನೆ ಬಾಗಿಲಿಗೆ ಚರಂಡಿ ನೀರು ಬಂದಿದೆ. ಮೊದಲು ಬೆಂಗಳೂರಿಗರ ಸಮಸ್ಯೆ ಬಗೆಹರಿಸಿ ಎಂದು ಸಲಹೆಯನ್ನು ನೀಡಿದೆ.

ಇದನ್ನೂ ಓದಿ: ‌DK Shivakumar: ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ; ಡಿಕೆಶಿ ಹೀಗೆ ಹೇಳಿದ್ಯಾಕೆ?

ಬಿಜೆಪಿ ಪೋಸ್ಟ್‌ನಲ್ಲೇನಿದೆ?

“ನಗರ ಯೋಜನೆಯ ಕಲ್ಪನೆಯೇ ಇಲ್ಲದೆ ಹಾಗೂ ದೂರದೃಷ್ಟಿ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್‌ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ರೂಪುಗೊಂಡ ಆರು ತಿಂಗಳ ಒಳಗೆ ಹಳ್ಳ ಹಿಡಿದಿದೆ. ಅನುದಾನ ಹಾಗೂ ಮೇಲುಸ್ತುವಾರಿ ಕೊರತೆಯಿಂದ ಬಳಲುತ್ತಿರುವ ಬ್ರ್ಯಾಂಡ್ ಬೆಂಗಳೂರು ಯೋಜನೆ ಈಗ ನೇಪಥ್ಯಕ್ಕೆ ಸರಿದಿದೆ.

ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮಹಾನಗರ ಅಭಿವೃದ್ಧಿಗೆ ನೀಡಬೇಕಾದಷ್ಟು ಆರ್ಥಿಕ ನೆರವು ನೀಡಿಲ್ಲ. ಇದರಿಂದ ಸಿಲಿಕಾನ್ ಸಿಟಿ ತಗ್ಗು ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ. ಇದರ ಕೀರ್ತಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೂ ಸಲ್ಲಬೇಕು.

ಇದನ್ನೂ ಓದಿ: CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು, ಬಳಿಕ ಮೈಮರೆಯುವುದು ಕಾಂಗ್ರೆಸ್‌ ಸರ್ಕಾರಕ್ಕೆ ಹೊಸದಲ್ಲ. ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ರೂಪಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರೇ, ಮಳೆಯಿಂದಾಗಿ ಬೆಂಗಳೂರಿನ ಹಲವು ನಿವಾಸಿಗಳ ಮನೆ ಬಾಗಿಲಿಗೆ ಚರಂಡಿ ನೀರು ಬಂದಿದೆ. ಮೊದಲು ಬೆಂಗಳೂರಿಗರ ಸಮಸ್ಯೆ ಬಗೆಹರಿಸಿ ಕೃತಾರ್ಥರಾಗಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Exit mobile version