ಬಾಗಲಕೋಟೆ: ಅತಿ ಶೀಘ್ರದಲ್ಲೇ ಜಿಲ್ಲೆಗಳ ಅಧ್ಯಕ್ಷರು (BJP District Presidents) ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಬಳಿಕ ಮೊದಲು ಮಾಡಿದ ಕೆಲಸವೇ ಬೂತ್ ಅಧ್ಯಕ್ಷರ (BJP Booth President) ಮನೆಗೆ ಭೇಟಿ ನೀಡಿದ್ದಾಗಿತ್ತು. ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಉದ್ದೇಶ ಹಾಗೂ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗೆ ಯಾವ ಮನ್ನಣೆ ಕೊಡುತ್ತೇವೋ ಅದೇ ಮನ್ನಣೆಯನ್ನು ನಾವು ಬೂತ್ ಅಧ್ಯಕ್ಷರಿಗೂ ಕೊಡುತ್ತೇವೆ. ಇದು ಬಿಜೆಪಿ ಪಕ್ಷದ ವಿಶೇಷವಾಗಿದ್ದು, ಬೇರೆ ಪಕ್ಷದಲ್ಲಿ ಕಾಣಲೂ ಆಗದು ಎಂದು ಹೇಳಿದರು.
ಕ್ರಮ ತೆಗೆದುಕೊಳ್ಳುವವ ವಿಜಯೇಂದ್ರ ಅಲ್ಲ
ಪಕ್ಷ ವಿರೋಧಿ ಹೇಳಿಕೆ ನೀಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಬಿಜೆಪಿ ಕಾರ್ಯಕಾರಣಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದು ನಿಜ. ಯಾರ ವಿರುದ್ಧವೂ ಕ್ರಮ ತೆಗೆದುಕೊಂಡು ಅಧಿಕಾರ ಚಲಾಯಿಸುವವ ವಿಜಯೇಂದ್ರ ಅಲ್ಲ. ಎಲ್ಲ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಒಬ್ಬರೋ ಇಬ್ಬರೋ ಸಣ್ಣಪುಟ್ಟ ಏನೇ ವ್ಯತ್ಯಾಸ ಇದ್ದರೂ ಕರೆದು ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ಬಿ.ವೈ. ವಿಜಯೇಂದ್ರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭಾ ಚುನಾವಣೆ ನಮ್ಮ ಮುಂದಿರುವ ಗುರಿಯಾಗಿದೆ. ಪ್ರಧಾನಿ ನರೇಂಧೃ ಮೋದಿಯವರು ತಪಸ್ಸಿನ ರೀತಿಯಲ್ಲಿ ದೇಶದ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಎಲ್ಲ ಸಮಾಜಗಳಿಗೆ ಕಾರ್ಯಕ್ರಮ ಕೊಟ್ಟಿದ್ದಾರೆ. ಮೋದಿಯವರ ಅಭಿವೃದ್ಧಿ ತಪಸ್ಸಿಗೆ ಎಲ್ಲರೂ ಕೈ ಜೋಡಿಸಬೇಕು. ಈಗಾಗಲೇ ಎಲ್ಲರೂ ಕೈ ಜೋಡಿಸಿದ್ದಾರೆ. ಉಳಿದವರೂ ಕೈ ಜೋಡಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಇದು ಸರ್ಕಾರ ರೈತ ವಿರೋಧಿ ಸರ್ಕಾರ
ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದು 7 ತಿಂಗಳು ಕಳೆದಿವೆ. 7 ತಿಂಗಳಲ್ಲಿ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಸ್ಪಷ್ಟ ಆಗಿದೆ. ರಾಜ್ಯದಲ್ಲಿ ಭೀಕರ ಬರ ಇದೆ. 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ ಅನ್ನೋ ರೀತಿ ವರ್ತಿಸುತ್ತಿದೆ. ಸುವರ್ಣ ಸೌಧ ಮೂಲಕ ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಕನಸು ಬಿ.ಎಸ್. ಯಡಿಯೂರಪ್ಪ ಅವರಿಗೆ ಇತ್ತು. ಆದರೆ, ಸರ್ಕಾರ ಯಾವುದೇ ಗಂಭೀರ ಚರ್ಚೆಯನ್ನು ನಡೆಸಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡುತ್ತಾರೆ ಅಂದುಕೊಂಡಿದ್ದೆವು. ಆದರೆ, ಅದಾಗಲೇ ಇಲ್ಲ. ಇದು ಸರ್ಕಾರ ರೈತ ವಿರೋಧಿ ಸರ್ಕಾರ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಶಾಸಕರು ತಲೆ ಎತ್ತಿಕೊಂಡು ಓಡಾಡುವ ಪರಿಸ್ಥಿತಿ ಇಲ್ಲ. ಒಂದೇ ಒಂದು ರೂಪಾಯಿ ಅನುದಾನ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತಾರೆ. ನಾವು ಅದನ್ನು ವಿರೋಧ ಮಾಡುತ್ತೇವೆ ಎಂದಲ್ಲ. ಆದರೆ, ನಿಮ್ಮ ಆದ್ಯತೆಗಳೇನು? ರೈತರು, ಬಡವರು, ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ಇಲ್ಲವೇ? ಎಂದು ಬಿ.ವೈ. ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದರು.
ಇದನ್ನೂ ಓದಿ: BJP Meeting : ಬಿ.ಎಲ್ ಸಂತೋಷ್ ಸಭೆಯಿಂದಲೂ ದೂರ ಉಳಿದ ಎಸ್‌ಟಿಎಸ್, ಹೆಬ್ಬಾರ್; ಅಚ್ಚರಿ ಮೂಡಿಸಿದ ವಿ ಸೋಮಣ್ಣ!
ಸಿಎಂಗೆ ಗ್ಯಾರಂಟಿ ಯೋಜನೆಯು ನುಂಗಲಾರದ ತುತ್ತು
ಶನಿವಾರ ರಾಯಚೂರಿನಲ್ಲಿ ಮಾತನಾಡುತ್ತಾ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದನ್ನು ನಾನು ಗಮನಿಸಿದೆ. ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಗಾಬರಿಯಾಗಿದೆ ಎಂದು ಅವರು ಹೇಳಿದ್ದಾರೆ. ಗ್ಯಾರಂಟಿ ಯೋಜನೆಯು ಸ್ವತಃ ಮುಖ್ಯಮಂತ್ರಿಗಳಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರಿ ನೌಕರರಿಗೂ ಸಂಬಳ ಕೊಡುವುದಕ್ಕೆ ಇವರ ಬಳಿ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭ್ರಮೆಯಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ಕೊಡುತ್ತಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.