ಬೆಂಗಳೂರು: ಒಂದೆಡೆ ಬಸ್ ಯಾತ್ರೆ, ಬೃಹತ್ ಸಮಾವೇಶಗಳ ಮೂಲಕ ಕಾಂಗ್ರೆಸ್ ಚಟುವಟಿಕೆ ನಡೆಸುತ್ತಿದ್ದರೆ ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ ಸಂಘಟನಾತ್ಮಕ ಚಟುವಟಿಕೆಯತ್ತ ಗಮನಹರಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಜನವರಿ 21ರಿಂದ 29ರವರೆಗೆ ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನ (Vijaya Sankalpa Abhiyana) ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಈಗಾಗಲೆ ಬಿಜೆಪಿಯ ಬೂತ್ ವಿಜಯ ಅಭಿಯಾನ ಮಾಡಲಾಗಿದೆ. 2023ರ ಜನವರಿ 2 ರಿಂದ 10ರ ವರೆಗೂ ರಾಜ್ಯದೆಲ್ಲೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 58 ಸಾವಿರಕ್ಕೂ ಹೆಚ್ಚು ಬೂತ್ ಇದ್ದು, ಎಲ್ಲದರಲ್ಲೂ ಸಮಿತಿ ಮತ್ತು ಪೇಜ್ ಪ್ರಮುಖ್ ನೇಮಕ ಮಾಡಲಾಗಿದೆ. ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲಾಗಿದೆ. ಸಂಘಟನೆ ಕಟ್ಟುವ ಕೆಲಸ ಯಶಸ್ವಿಯಾಗಿದೆ.
ಇನ್ನು ಮುಂದೆ ವಿಜಯ ಸಂಕಲ್ಪ ಅಭಿಯಾನ ಪ್ರಾರಂಭಿಸಲಾಗುತ್ತಿದೆ. ಜನವರಿ 21-29ರ ವರೆಗೂ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ವಿಭಾಗವಾರು ಸಭೆ, 38 ಜಿಲ್ಲಾ ಸಂಘಟನೆ ಕೇಂದ್ರದಲ್ಲಿ ಸಭೆ ನಡೆಯುತ್ತಿದೆ. ಮುಂದಿನ ಸಭೆ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದಲ್ಲಿ ನಡೆಯಲಿದೆ. ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಿಜಯಪುರದ ಸಿಂಧಗಿಯಲ್ಲಿ ಚಾಲನೆ ನೀಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಿಎಂ, ರಾಜ್ಯಾಧ್ಯಕ್ಷರು ಸೇರಿದಂತೆ ಪ್ರಮುಖರು ಇರಲಿದ್ದಾರೆ. ಸಂಘಟನಾತ್ಮಕ ಕಾರ್ಯಕ್ರಮ, ಫಲಾನುಭವಿಗಳನ್ನು, ನಾಗರೀಕರನ್ನು ಸಂಪರ್ಕ ಮಾಡಿ ಅವರನ್ನು ಮಾತನಾಡಿಸಲಾಗುವುದು.ವಿಚಾರಗಳನ್ನು ಸವಿಸ್ತಾರವಾಗಿಸಿ, ಪ್ರತೀ ಮನೆ, ವಾಹನಗಳ ಮೇಲೆ ಸ್ಟಿಕರ್ ಅಂಟಿಸಲಾಗುವುದು.
ಡಿಜಿಟಲ್ ಪ್ರಿಂಟಿಂಗ್ ಮಾಡಿ, ಗೋಡೆ ಬರಹ ಮಾಡಿಸಲಾಗುವುದು. ಏಕಕಾಲದಲ್ಲಿ ಪ್ರತಿ ಬೂತ್‌ನಲ್ಲಿ ಕಾರ್ಯಕ್ರಮ ಮಾಡಲಾಗುವುದು. ರಾಜ್ಯ ಸಚಿವರು, ಕೇಂದ್ರ ಸಚಿವರು, ಲೋಕಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಏಕಕಾಲದಲ್ಲಿ ತೆರಳಿ ಕೆಲಸ ಮಾಡಲಾಗುವುದು. ಒಂದು ಕೋಟಿ ಜನರ ಸದಸ್ಯತ್ವ ಮಾಡಿಸುವ ಗುರಿ ಇದೆ. ಪಕ್ಷವನ್ನು ಬಲಿಷ್ಠ ಮಾಡುವ ಕೆಲಸ ಮಾಡಲಾಗುವುದು.
ಇದು ಜನರ ಪಕ್ಷ. ಸಮಾಜದ ಸಮಸ್ತ ಜನರನ್ನು ಪಕ್ಷಕ್ಕೆ ಸೇರುವಂತೆ ಮಾಡುವುದು ನಮ್ಮ ಗುರಿ. ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಪಕ್ಷವನ್ನು ಬಲಿಷ್ಠವಾಗಿ ಬೇರು ಮಟ್ಟದಲ್ಲಿ ಸಂಘಟನೆ ಮಾಡಲಾಗುವುದು. ಮನ್ ಕಿ ಬಾತ್ ಕಾರ್ಯಕ್ರಮವನ್ನು ಎಲ್ಲರೂ ಒಟ್ಟಿಗೆ ಕುಳಿತು ಕೇಳುವ ಕೆಲಸ ಮಾಡಲಾಗುವುದು. 90% ಬೂತ್ ಮಟ್ಟದ ಕಾರ್ಯಕರ್ತರು ಕೇಳುವ ಕೇಳುವ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೊಡುಗೆಗಳ ಕರಪತ್ರವನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಭರವಸೆ ಮತ್ತು ಯೋಜನೆ ತಿಳಿಸಲಾಗುವುದು. ಕನಿಷ್ಠ ಐದು ಲಕ್ಷ ವಾಲ್ ರೈಟಿಂಗ್, 3ಕೋಟಿ ಸ್ಟಿಕರ್ ಹಂಚುವ ಕೆಲಸ ಆಗಲಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಬಸ್ ಯಾಥ್ರೆ ಕುರಿತು ಪ್ರತಿಕ್ರಿಯಿಸಿ, ಕೆಲವರು ಬಸ್‌ನಲ್ಲಿ ಯಾತ್ರೆ ಮಾಡಿ ಕೆಲವರ ಮನೆ ತಲುಪಬಹುದು. ಆದರೆ ನಾವು ಪ್ರತಿ ಮನೆಗೆ ತಲುಪುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯದ ಯೋಜನೆ ಪಡೆದಿರುವ ಒಂದು ಕೋಟಿ ಫಲಾನುಭವಿಗಳಿದ್ದಾರೆ. ಅನೇಕ ಕಾರ್ಯಕ್ರಮಗಳ ಮೂಲಕ ಜನರ ಬಳಿ ತಲುಪಿದ್ದೇವೆ. ಅವರ ಬಳಿ ಹೋಗಿ ಮತ ಕೇಳುವ ಕೆಲಸ ಮಾಡುತ್ತೇವೆ.
ನೆರೆಯ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಎರಡು ಪಟ್ಟು ಪರಿಹಾರ ನೀಡಲಾಗಿದೆ. ಹಿಂದೆ ಮಳೆ ಆದಾಗ, ನೆರೆ ಬಂದಾಗ ಮುಖ್ಯಮಂತ್ರಿಗಳನ್ನು ಹುಡುಕಬೇಕಿತ್ತು. ನಮ್ಮ ಸರ್ಕಾರ ಬಂದ ಕೂಡಲೇ ಪರಿಹಾರ ನೀಡುವ ಕೆಲಸ ಮಾಡಿದೆವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಫಲಾನುಭವಿಗಳಿಗೆ ತಲುಪುವಾಗ 15% ಮಾತ್ರ ಸಿಗ್ತಿತ್ತು. ಅದ್ರೆ ಈಗ 100% ಫಲ ಸಿಗುವಂತೆ ಮಾಡಿದ್ದೇವೆ ಎಂದು ಹೇಳಿದರು.
ರಾಜ್ಯದ ಬಿಜೆಪಿ ಆಡಳಿತದಲ್ಲಿ ಸಮಸ್ಯೆ ಇದೆ ಎಂದು ಕಾಂಗ್ರೆಸ್ ಪುಸ್ತಕ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ರಾಜ್ಯದಲ್ಲಿ ಸಮಸ್ಯೆ ಇರುವುದೇ ಕಾಂಗ್ರೆಸ್. ಈಗ ಬಸ್ ಯಾತ್ರೆ ಹೋಗುತ್ತಿದ್ದಾರೆ, ಬಸ್ಸಿನ ಸಂಖ್ಯೆಯಲ್ಲಿ ಶಾಸಕರು ಬರುತ್ತಾರೆ. ನಂತರ ಇನ್ನೂ ಕಡಿಮೆ ಗೆಲ್ಲುತ್ತಾರೆ. ಕಾಂಗ್ರೆಸ್‌ನವರು 50ಕ್ಕಿಂತ ಕಡಿಮೆ ಶಾಸಕರು ಗೆಲ್ಲಲಿದ್ದಾರೆ. ನನಗೇನು ಲಾಭ ಎಂದು ನೋಡುವ ಲೀಡರ್‌ಗಳು ಕಾಂಗ್ರೆಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿರುವವರೆಲ್ಲ ಲಾಭದ ಲೀಡರ್‌ಗಳು ಎಂದರು.
ಇದನ್ನೂ ಓದಿ | BJP National Executive Meeting | ಜನವರಿ 16ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಬಿಎಸ್‌ವೈ, ಬೊಮ್ಮಾಯಿ ಭಾಗಿ
ಜನರಿಗೆ ಯಾವ ಪ್ರಣಾಳಿಕೆ ನೀಡುತ್ತೀರ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ಸಾಧನೆ, ಫಲಾನುಭವಿಗಳನ್ನು ಮಾತನಾಡಿಸುವ ಕೆಲಸ ಮಾಡುತ್ತೇವೆ. ಡಿಜಿಟಲ್ ಸ್ಟಿಕರ್ ಅಂಟಿಸುವ, ಕರಪತ್ರ ಅಂಟಿಸುವ ಕೆಲಸ ಮಾಡುತ್ತೇವೆ. ಸದ್ಯದಲ್ಲೆ ಬಜೆಟ್ ಕೂಡ ಹತ್ತಿರಬರುತ್ತಿದೆ. ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ತಯಾರಿ ಮಾಡುತ್ತೇವೆ. ಉಚಿತ ವಿದ್ಯುತ್ ಕುರಿತು ಪ್ರತಿಕ್ರಿಯಿಸಿ, ಕತ್ತಲಲ್ಲಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ. ಇವರು ಎಲ್ಲಿಂದ ಉಚಿತ ವಿದ್ಯುತ್ ನೀಡುತ್ತಾರೆ? ಎಂದು ಪ್ರಶ್ನಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಪ್ರತಿಕ್ರಿಯಿಸಿ, ಸೂಕ್ತ ಕಾಲದಲ್ಲಿ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ. ಎಲ್ಲದಕ್ಕೂ ಒಂದು ಕಾಲ ಅಂತ ಇರುತ್ತದೆ. ಜನರೂ ಪಾಠ ಕಲಿಸುತ್ತಾರೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಇದರ ಬಗ್ಗೆ ಕಡಿಮೆ ಮಾತಾಡಿದಷ್ಟೂ ಒಳ್ಳೆಯದೇ ಎಂದರು.
ಇದನ್ನೂ ಓದಿ | ಕೆಂಪೇಗೌಡರ ಸಮಾಧಿ ಪೂಜೆ ಮಾಡಿ ಹೋದ ಕುಮಾರಸ್ವಾಮಿ ನಾಪತ್ತೆಯಾಗಿದ್ದರು: ಕೆಲಸ ಮಾಡಿದವರು ನಾವು ಎಂದ ಅಶ್ವತ್ಥನಾರಾಯಣ