ಬಿಜೆಪಿ ಸಂಸದೀಯ ಮಂಡಳಿಯಲ್ಲಿ ( BJP Parliamentary Board ) ಇದೇ ಮೊದಲ ಬಾರಿಗೆ ಯಾವುದೇ ಮುಖ್ಯಮಂತ್ರಿಗೆ ಸ್ಥಾನ ಕಲ್ಪಿಸಲಾಗಿಲ್ಲ. ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ. ಎಲ್. ಸಂತೋಷ್ ಅವರನ್ನು ಹೊರತುಪಡಿಸಿ ಬೇರೊಬ್ಬ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೂಡ ಸಂಸದೀಯ ಮಂಡಳಿಯಲ್ಲಿ ಪ್ರವೇಶ ಪಡೆದಿಲ್ಲ. ಅಷ್ಟೇ ಅಲ್ಲ, ಪಕ್ಷದ ಉಪಾಧ್ಯಕ್ಷರಲ್ಲಿ ಕೂಡ ಒಬ್ಬನೇ ಒಬ್ಬ ಈ ಸಮಿತಿಯಲ್ಲಿಲ್ಲ. ಅದಕ್ಕಿಂತ ಹೆಚ್ಚು ಹುಬ್ಬೇರುವಂತೆ ಮಾಡಿದ್ದು ಕೇಂದ್ರ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಎನಿಸಿರುವ ನಿತಿನ್ ಗಡ್ಕರಿಗೆ ಕೊಕ್ ನೀಡಿರುವುದು. 2014ಕ್ಕೂ ಮೊದಲು ಮತ್ತು ಆ ನಂತರದ ಕೆಲ ಸಂದರ್ಭಗಳಲ್ಲಿ ಪ್ರಧಾನಿ ಅಭ್ಯರ್ಥಿ ಅಥವಾ ಪರ್ಯಾಯ ಎಂದೇ ಬಿಂಬಿತವಾಗಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಕೂಡ ಡ್ರಾಪ್ ಆಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಅಷ್ಟೇನು ಪ್ರಭಾವಿ ಅಲ್ಲದ ಕಾರ್ಯದರ್ಶಿಗಳಲ್ಲಿ ಇಬ್ಬರಿಗೆ ಉನ್ನತ ಮಂಡಳಿಯಲ್ಲಿ ಚಾನ್ಸ್ ಸಿಕ್ಕಿದೆ. ತೆರೆಮರೆಯಲ್ಲಿರುವ ಮತ್ತು ಕಾರಣಾಂತರಗಳಿಂದ ತೆರೆಮರೆಗೆ ಸರಿದಿದ್ದ ಕೆಲ ಮುಖಂಡರಿಗೆ ಡಿಢೀರ್ ಮುಂಚೂಣಿ ಸ್ಥಾನ ಲಭ್ಯವಾಗಿದೆ. ಈ ಅಂಶಗಳನ್ನು ಗಮನಿಸಿದರೆ ರಾಜಕೀಯ ಚದುರಂಗದಾಟ ಅಥವಾ ಸಾಂಪ್ರದಾಯಿಕ ರಾಜಕೀಯ ಲೆಕ್ಕಾಚಾರಗಳಿಗೆ ಈಗಿನ ಬಿಜೆಪಿಯಲ್ಲಿ ಗುಲಗುಂಜಿಯಷ್ಟೂ ಅವಕಾಶ ಇಲ್ಲ ಎಂಬುದು ಒಂದೆಡೆಯಾದರೆ; ಹಾಲಿ ಕೇಂದ್ರ ಸ್ಥಾನದಲ್ಲಿರುವ ಪ್ರಧಾನಿ, ಗೃಹ ಸಚಿವ, ಪಕ್ಷದ ಅಧ್ಯಕ್ಷ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಪಕ್ಷದ ರಾಜಕೀಯ ವ್ಯವಹಾರಗಳನ್ನು ತಮ್ಮ ಬಿಗಿ ಹಿಡಿತಕ್ಕೆ ಪಡೆದಿರುವುದು ಎಂಥವರಿಗೂ ಮನವರಿಕೆ ಆಗುವ ಸಂಗತಿ. ಮುಖ್ಯವಾಗಿ ಬಿಜೆಪಿ ಹೈಕಮಾಂಡ್ ಬಿಗಿ ಹಿಡಿತದ ಎದುರು ಬಾಕಿ ನಿರೀಕ್ಷೆಗಳೆಲ್ಲ ನಗಣ್ಯ ಎಂಬ ಸಂದೇಶವೂ ಇದರಿಂದ ಹೊರ ಹೊಮ್ಮುತ್ತದೆ.
ತುಸು ಹಿಂದಕ್ಕೆ ಹೋಗಿ ನೋಡೋಣ. ಈ ಹಿಂದೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಕ್ಷಾಧ್ಯಕ್ಷ, ಉಪ ಪ್ರಧಾನಿ ಆಗಿದ್ದ ಲಾಲ್ ಕೃಷ್ಣ ಆಡ್ವಾಣಿ ಆಗಿನ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಈ ಇಬ್ಬರ ಮಾತೇ ಆ ಕಾಲದಲ್ಲಿ ಸರ್ವವೇದ್ಯ ಆಗಿರುತ್ತಿತ್ತು. ಅಟಲ್ ಮತ್ತು ಆಡ್ವಾಣಿ ಕಾಲದಲ್ಲಿ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ್ ಕುಮಾರ್ ಮತ್ತು ವೆಂಕಯ್ಯ ನಾಯ್ಡು ಅವರು ಸಂಸದೀಯ ಮಂಡಳಿಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸುಷ್ಮಾ, ಜೇಟ್ಲಿ ಮತ್ತು ಅನಂತ್ ಕುಮಾರ್ ಈಗ ಬದುಕಿಲ್ಲ. ಉಪ ರಾಷ್ಟ್ರಪತಿ ಆದ ಬಳಿಕ ವೆಂಕಯ್ಯ ನಾಯ್ಡು ಅವರು ತೆರೆಮರೆಗೆ ಸರಿದಿದ್ದಾರೆ. ಮೋದಿ-ಶಾ ಜೋಡಿಯ ಪವರ್ ಫುಲ್ ನಾಯಕತ್ವದ ಅಡಿಯಲ್ಲಿ ಇದೀಗ ರೂಪುಗೊಂಡಿರುವ ಹೊಸ ಮಂಡಳಿ ಸಂಪೂರ್ಣ ಹೊಸ ಲುಕ್ ಪಡೆದುಕೊಂಡಿದೆ. ಅಚ್ಚರಿಯ ಮುಖಗಳನ್ನು ಈ ಮಂಡಳಿ ಹೊಂದಿದೆ. ಮುಂದಿನ ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಹತ್ತು ಹಲವು ಲೆಕ್ಕಾಚಾರದೊಂದಿಗೆ ಹೊಸ ಮಂಡಳಿಯ ಕುಸುರಿ-ಕೆತ್ತನೆ ಮಾಡಲಾಗಿದೆ. ರಮಣ್ ಸಿಂಗ್, ರಾಧಾ ಮೋಹನ್ ಸಿಂಗ್, ವಸುಂಧರಾ ರಾಜೆ, ದುಷ್ಯಂತ್ ಸಿಂಗ್, ರಘುಬರ್ ದಾಸ್, ದಿಲೀಪ್ ಘೋಷ್‌ರಂಥ ಘಟಾನುಘಟಿಗಳು ಉಪಾಧ್ಯಕ್ಷರಾಗಿದ್ದಾರೆ. ಆದರೆ ಇವರಲ್ಲಿ ಯಾರೊಬ್ಬರೂ ಪಕ್ಷದ ಉನ್ನತ ಮಂಡಳಿಯಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ.
ಈ ಮೇಲೆ ಹೇಳಿದ ಎಲ್ಲ ನಾಯಕರು ಪ್ರತಿನಿಧಿಸುವ ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ಹೊಸ ತಲೆಮಾರಿನ ನಾಯಕತ್ವ ಮುಂಚೂಣಿಗೆ ಬರುತ್ತದೆ ಎಂಬ ಸಂದೇಶ ಹೊರ ಹೊಮ್ಮಿಸಿದ್ದರೂ ಇರಬಹುದು.
ಬಿ ಎಸ್ ವೈ ಗೂಗ್ಲಿ
ಎಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿರುವುದು ಬಿ ಎಸ್ ಯಡಿಯೂರಪ್ಪ ನೇಮಕದ ಮಾಸ್ಟರ್ ಸ್ಟ್ರೋಕ್!
ಹೊಸ ಮಂಡಳಿಯಲ್ಲಿ ಸಹಜವಾಗಿಯೇ ಪಕ್ಷಾಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಥಾನ ಪಡೆದಿದ್ದಾರೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಕೂಡ ಪ್ರಮುಖರಾಗಿದ್ದಾರೆ. ಇವರನ್ನು ಹೊರತುಪಡಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಇತರ ಕೆಲವು ಹೆಸರುಗಳು ರಾಜಕೀಯ ವಲಯದಲ್ಲಿ ಬೆರಗು ಮೂಡಿಸಿವೆ. ಹಾಗೆ ನೋಡಿದರೆ ದಶಕಗಳ ಕಾಲ ಕರ್ನಾಟಕ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ನಿಂತು, ಪ್ರಬಲ ಪ್ರಾದೇಶಿಕ ನಾಯಕರಾಗಿ ಹೈಕಮಾಂಡ್ ಎದುರು ತಲೆ ಎತ್ತಿ ನಿಲ್ಲುತ್ತಿದ್ದವರು ಯಡಿಯೂರಪ್ಪ. ಅವರ ವಿಷಯದಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಬಿಜೆಪಿ ಹೈಕಮಾಂಡ್ ಹತ್ತು ಸಲ ಆಲೋಚನೆ ಮಾಡುತ್ತಿತ್ತು. ದಿಲ್ಲಿ ವರಿಷ್ಠರ ಜತೆ ಯಡಿಯೂರಪ್ಪ ಅವರದ್ದು ಸದಾ ಲವ್ ಅಂಡ್ ಹೇಟ್ ಸಂಬಂಧವೇ ಅಗಿತ್ತು ಎಂಬುದೂ ಅಷ್ಟೇ ಸತ್ಯ. ಅಂಥ ಬಲಾಢ್ಯ ನಾಯಕನನ್ನು ಅಧಿಕಾರದಿಂದ ಕದಲಿಸುವ ಧೈರ್ಯ ತೋರಿದ್ದು ಇದೇ ಬಿಜೆಪಿ ವರಿಷ್ಠರು. ಅವರದೇ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಗೆ ತಂದರು. ಅಷ್ಟೇ ಅಲ್ಲ ಮುಂದೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆಗೆ ನಿಲ್ಲಲೂ ಅವಕಾಶ ನಿರಾಕರಿಸಿದರು. ಇಷ್ಟೆಲ್ಲ ಆದ ಬಳಿಕ ಇಲ್ಲಿಗೆ ಯಡಿಯೂರಪ್ಪ ಅವರ ಶಕೆ ಕೊನೆಗೊಂಡಿತು ಎಂತಲೇ ಎಲ್ಲ ಭಾವಿಸಿಬಿಟ್ಟಿದ್ದರು. ಆದರೀಗ ಅದೇ ಯಡಿಯೂರಪ್ಪ ಅವರಿಗೆ ಇದೀಗ ಬಿಜೆಪಿ ಉನ್ನತ ಸಂಸದೀಯ ಮಂಡಳಿಯಲ್ಲಿ ರತ್ನಗಂಬಳಿ ಹಾಸಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ಕೆಲವು ತಿಂಗಳು ಬಾಕಿ ಇರುವಾಗ ಬಿಎಸ್ವೈಗೆ ಕೇಂದ್ರದಲ್ಲಿ ಉನ್ನತ ಸ್ಥಾನಮಾನ ನೀಡಿರುವುದು ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿಗಳಿಗೆ ನಡುಕ ತಂದಿದ್ದರೆ, ಅದಕ್ಕಿಂತ ಮುಖ್ಯವಾಗಿ ಅಧಿಕಾರಕ್ಕೆ ಬಂದೇ ಬಿಟ್ಟೆವು ಎನ್ನುತ್ತಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಮರ್ಮಾಘಾತವನ್ನೇ ನೀಡಿದಂತಾಗಿದೆ ಎಂದು ವ್ಯಾಖ್ಯಾನಿಸಬಹುದಾಗಿದೆ.
ಅಸ್ಸಾಂನಲ್ಲಿ ಸೋನಾವಾಲ್
ಕರ್ನಾಟಕ ಮಾತ್ರವಲ್ಲ ಅತ್ತ ಅಸ್ಸಾಂನಲ್ಲೂ ಇದೇ ಕತೆ. ಕರ್ನಾಟಕದಲ್ಲಿ ಯಡಿಯೂರಪ್ಪ ಆದರೆ ಅಸ್ಸಾಂನಲ್ಲಿ ಇಂಥದ್ದೇ ಮತ್ತೊಂದು ಹೆಸರು ಸರ್ಬಾನಂದ ಸೋನಾವಾಲ್. ಅಲ್ಲೂ ಅಷ್ಟೇ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿ ಜಯ ದಾಖಲಿಸಿದ ನಂತರ ಸೋನಾವಾಲ್ ಅವರನ್ನು ಸಿಎಂ ಹುದ್ದೆಯಿಂದ ಬದಲಿಸಿ ಬಲಾಢ್ಯ ಹಿಮಂತ ಬಿಸ್ವ ಶರ್ಮ ಅವರನ್ನು ಬಿಜೆಪಿ ಹೈಕಮಾಂಡ್ ಸಿಎಂ ಕುರ್ಚಿಯಲ್ಲಿ ಪ್ರತಿಷ್ಠಾಪಿಸಿತ್ತು. ಹಿಮಂತ ಅವರು ಅತ್ಯಂತ ಆಕ್ರಮಣಕಾರಿ ನಡೆ ಮತ್ತು ಪ್ರಗತಿಪರ ಆಡಳಿತದ ನೀಡುವಲ್ಲಿ ಛಾಪು ಮೂಡಿಸಿದ್ದಾರೆ. ಅದರ ಫಲವಾಗಿ ಅಸ್ಸಾಂನಲ್ಲಿ ಬಿಜೆಪಿ ದಿನೇದಿನೆ ಬಲಿಷ್ಠಗೊಳ್ಳುತ್ತಿರುವುದೂ ನಿಜ. ದಿಲ್ಲಿ ವಲಯದಲ್ಲೂ ಹಿಮಂತ ಉತ್ತಮ ಹಿಡಿತ/ಪ್ರಭಾವ ಹೊಂದಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬಳಿಕ ಬಿಜೆಪಿಯ ಅತ್ಯಂತ ಪ್ರಭಾವಿ ಸಿಎಂ ಆಗಿ ಹಿಮಂತ ಬಿಸ್ವ ಶರ್ಮ ಹೊರಹೊಮ್ಮುತ್ತಿದ್ದಾರೆ. ಆದರೆ ನಿರ್ಣಾಯಕ ಸಂಸದೀಯ ಮಂಡಳಿಯಲ್ಲಿ ಮಾತ್ರ ಈಗ ಸರ್ಬಾನಂದ ಸೋನಾವಾಲ್ ಅವರು ಸ್ಥಾನ ಪಡೆದಿದ್ದಾರೆ. ಸಿಎಂ ಸ್ಥಾನ ಕಳೆದುಕೊಂಡ ನಂತರ ಅಷ್ಟೇನೂ ಪ್ರಭಾವಿ ಅಲ್ಲದ, ಲೋ ಪ್ರೊಫೈಲ್ ಖಾತೆಗಳೊಂದಿಗೆ ಕೇಂದ್ರ ಸಂಪುಟದಲ್ಲಿ ಹತ್ತರ ಜತೆ ಹನ್ನೊಂದು ಎಂಬಂತಿದ್ದ ಸೋನಾವಾಲ್ ಈಗ ಇದ್ದಕ್ಕಿದ್ದಂತೆ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುವ ಪ್ಲ್ಯಾನ್ ಕೂಡ ಇವರ ನೇಮಕದ ಹಿಂದಿರುವುದು ಒಂದೆಡೆಯಾದರೆ, ಬಿಜೆಪಿ ವರಿಷ್ಠರು ಸದಾ ಪರ್ಯಾಯದ ಹುಡುಕಾಟದಲ್ಲಿ ಇರುತ್ತಾರೆಂಬ ಸಂದೇಶವೂ ಇದರಲ್ಲಿ ಅಡಗಿದೆ ಎನ್ನಬಹುದು.
ಒಬಿಸಿ ಮೋರ್ಚಾದಲ್ಲಿರುವ ತೆಲಂಗಾಣದ ಕೆ ಲಕ್ಷ್ಮಣ್ ಅವರ ನೇಮಕದ ಹಿಂದೆ ಮುಂದಿನ ತೆಲಂಗಾಣ ಚುನಾವಣೆಯ ಗುರಿ ಇದ್ದೇ ಇದೆ. ಇವರ ಆಯ್ಕೆಯೂ ಅನಿರೀಕ್ಷಿತ. ಇನ್ನು ಪಂಜಾಬ್ ನಿಂದ ಇಕ್ಬಾಲ್ ಸಿಂಗ್ ಲಾಲ್ಪುರ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇವರು ನಿವೃತ್ತ ಐಪಿಎಸ್ ಅಧಿಕಾರಿ. 2012ರಲ್ಲಿ ಬಿಜೆಪಿ ಸೇರಿದ್ದರು. ಪಂಜಾಬ್‌ನ ಸಿಖ್ ಸಮುದಾಯಕ್ಕೆ ಬಿಜೆಪಿಯನ್ನು ಕಂಡರೆ ಅಷ್ಟಕಷ್ಟೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಇಕ್ಬಾಲ್ ಸಿಂಗ್ ಹೊಸ ಆಶಾ ಕಿರಣವಾಗಿ ಕಂಡಿರಬೇಕು!
ಮೋದಿ ಸಹೋದರಿಗೆ ಸ್ಥಾನ!
ಇನ್ನು ಪಕ್ಷದ ಕಾರ್ಯದರ್ಶಿ ಹುದ್ದೆಯಲ್ಲಿರುವ ಹರಿಯಾಣದ ಸುಧಾ ಯಾದವ್‌ಗೆ ಸಂಸದೀಯ ಮಂಡಳಿಯಲ್ಲಿ ಅನೀರೀಕ್ಷಿತವಾಗಿ ಸ್ಥಾನ ಸಿಕ್ಕಿದೆ. ಸುಧಾ ಯಾದವ್ ಅವರ ಪತಿ ಭಾರತೀಯ ಸೇನೆಯಲ್ಲಿದ್ದರು. ಗಡಿಯಲ್ಲಿ ಪಾಕ್ ಪಡೆಗಳ ಗುಂಡೇಟಿಗೆ ಬಲಿಯಾಗಿದ್ದರು. ಮುಂದೆ ಸುಧಾ ಯಾದವ್ ಬಿಜೆಪಿ ಸೇರಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದರು. ವಿಶೇಷ ಎಂದರೆ ಆ ಸಂದರ್ಭದಲ್ಲಿ ನರೇಂದ್ರ ಮೋದಿ ಹರಿಯಾಣದ ಉಸ್ತುವಾರಿ ಆಗಿದ್ದರು. ಆಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸುಧಾ ಯಾದವ್ ಅವರ ಮೊದಲ ಪ್ರಚಾರ ಭಾಷಣದ ವೇಳೆ ತಮ್ಮ ಬಳಿ ಇದ್ದ 11 ರೂ.ಯನ್ನು ಮೋದಿ ದೇಣಿಗೆ ನೀಡಿ, ಆರ್ಥಿಕ ಸಹಾಯ ಮಾಡುವಂತೆ ಪಕ್ಷದ ಕಾರ್ಯಕರ್ತರಲ್ಲೂ ಕೋರಿದ್ದರು. ನನ್ನ ತಾಯಿ ನನಗೆ 11 ರೂ. ನೀಡಿ ಇದನ್ನು ಒಳ್ಳೆಯ ಕೆಲಸಕ್ಕೆ ಬಳಸು ಎಂದಿದ್ದರು. ಈ ಹಣವನ್ನು ನಾನೀಗ ನನ್ನ ತಂಗಿ ಸುಧಾ ಯಾದವ್ ಚುನಾವಣೆ ಖರ್ಚಿಗೆ ನೀಡಿದ್ದೇನೆ ಎಂದಿದ್ದರು ಮೋದಿ. ಅಂದು ಕೇವಲ ಅರ್ಧ ಗಂಟೆಯಲ್ಲಿ 7.5 ಲಕ್ಷ ರೂ. ಸಂಗ್ರಹವಾಗಿತ್ತು!
ಇನ್ನು 16 ಮಂದಿಯ ಚುನಾವಣೆ ಸಮಿತಿಯಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ಭೂಪೇಂದ್ರ ಯಶದವ್, ಗುಜರಾತ್‌ನ ಓಂ ಮಾಥುರ್ ಸ್ಥಾನ ಪಡೆದಿದ್ದಾರೆ.
ಹೊಸ ಮಂಡಳಿ ಮತ್ತು ಸಮಿತಿಯ ನೇಮಕದಲ್ಲಿ ಮತ್ತೊಂದು ಮಹತ್ವದ ಸಂಗತಿ ಗಮನಿಸಬೇಕು. ಅಧಿಕಾರ ಚಲಾಯಿಸಲು 75 ವರ್ಷವೇ ಮಿತಿ ಎಂಬ ಅಲಿಖಿತ ನಿಯಮ ಮಾಡಿಕೊಂಡಿರುವ ಬಿಜೆಪಿ, ಬಿ ಎಸ್ ಯಡಿಯೂರಪ್ಪ ಮತ್ತು ಸತ್ಯನಾರಾಯಣ ಜಾಟಿಯಾ ಅವರಿಗೆ 75 ವರ್ಷ ದಾಟಿದರೂ ಉನ್ನತ ಸಮಿತಿಯಲ್ಲಿ ಸ್ಥಾನ ಕಲ್ಪಿಸಿದೆ! ಅಂದರೆ ಶಾ-ಮೋದಿ ಜೋಡಿ, ಏನು ಮಾಡಿದರೂ ನಡೆಯುತ್ತದೆ ಮೋಡಿ.!!
ಇದನ್ನೂ ಓದಿ | ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ, ಚುನಾವಣಾ ಸಮಿತಿಗಳಲ್ಲಿ ಸ್ಥಾನ ಕಳೆದುಕೊಂಡ ನಿತಿನ್ ಗಡ್ಕರಿ !