ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ಈಗಾಗಲೇ ತಂತ್ರಗಾರಿಕೆಯನ್ನು ಶುರು ಮಾಡಿವೆ. ಈ ಬಾರಿ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಮಾಡಿಕೊಂಡಿರುವುದರಿಂದ ರಾಜ್ಯದಲ್ಲಿ ಚಿತ್ರಣ ಬದಲಾಗಿದೆ. ಅಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP Karnataka) 25 + 1 ಸೀಟುಗಳನ್ನು ಗೆದ್ದು ಬೀಗಿತ್ತು. ಈಗ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವತ್ತ ಪ್ಲಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಈ ಗುರಿ ಮುಟ್ಟಲು ಕೆಲವು ಕ್ಷೇತ್ರಗಳು ಸಮಸ್ಯೆಯಾಗುತ್ತಿದ್ದು, ಎರಡೂ ಪಕ್ಷಗಳ ಮುಖಂಡರಿಗೆ ತಲೆನೋವಾಗಿದೆ.
ಒಂದು ವೇಳೆ ಈ ಕ್ಷೇತ್ರಗಳಲ್ಲಿ ಎದ್ದಿರುವ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಕ್ಷೇತ್ರಗಳು ಕೈ ತಪ್ಪುವ ಭೀತಿ ಎದುರಾಗಿದೆ. ಇದನ್ನು ಬಗೆಹರಿಸಿಕೊಳ್ಳುವುದು ಸದ್ಯದ ಟಾಸ್ಕ್ ಆಗಿದೆ ಎಂದು ಹೇಳಲಾಗುತ್ತಿದೆ. ಅಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೇರಾನೇರ ಪೈಪೋಟಿ ನಡೆಸಿದ್ದ ಕ್ಷೇತ್ರಗಳದ್ದೇ ತಲೆನೋವಾಗಿ ಪರಿಣಮಿಸಿದೆ.
ರಾಜಧಾನಿಯಲ್ಲಿ ನಾಯಕರು ಒಂದುಗೂಡಿದರೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮಾತ್ರ ಇನ್ನೂ ಒಂದಾಗುತ್ತಿಲ್ಲ. ಅಲ್ಲದೆ, ನಾಯಕರ ಹೇಳಿಕೆಗಳಿಂದಲೂ ಕಾರ್ಯಕರ್ತರು ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಸಮಸ್ಯೆ ತಲೆದೋರಿದೆ.
ಆ ಕ್ಷೇತ್ರಗಳು ಯಾವುವು..? ಅವುಗಳಲ್ಲಿ ಕಾರ್ಯಕರ್ತರ ಒಗ್ಗೂಡಿಸಲು ರಾಜ್ಯ ನಾಯಕರು ಪ್ಲ್ಯಾನ್ ಅನ್ನು ಸಹ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಒಬ್ಬೊಬ್ಬರೇ ಬಹಿರಂಗ ಹೇಳಿಕೆಯನ್ನು ನೀಡಲು ಪ್ರಾರಂಭಿಸಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ ಅವರಿಂದ ಬಹಿರಂಗ ಮಾತನಾಡಿ, ಹಾಸನ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಬೇಕೆಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬದ ವಿರುದ್ಧ ರಾಜಕೀಯ ಮಾಡಿಕೊಂಡು ಬಂದಿರುವ ಪ್ರೀತಂಗೌಡ, ಹಾಸನವನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದರು. ಈ ನಡುವೆ ಕೆ.ಆರ್ ಪೇಟೆಯಲ್ಲೂ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಭಿನ್ನಾಭಿಪ್ರಾಯ ಶುರುವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಚಿವ ನಾರಾಯಣ ಗೌಡ, ಮಂಡ್ಯ ಬಿಜೆಪಿಗೆ ಬಿಟ್ಟು ಕೊಡುವಂತೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಇನ್ನು ತುಮಕೂರು ಜಿಲ್ಲೆಯಲ್ಲಿ ಮಾಜಿ ಸಚಿವ ಮಾಧುಸ್ವಾಮಿ ಅವರಿಂದ ವಿರೋಧ ಕೇಳಿಬಂದಿದೆ. ನಾವು ಒಂದಾದರೂ ಬೂತ್ ಮಟ್ಟದ ಕಾರ್ಯಕರ್ತರು ಒಂದಾಗಲ್ಲ ಅಂತ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಕಡಿಮೆಯಾಗದ ಅಸಹನೆ
ಇನ್ನು ಹಾಸನ ಮತ್ತು ಸಕಲೇಶಪುರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಬೆಂಬಲಿಗರು ಒಂದಾಗುವುದೇ ಕಷ್ಟ. ದೇವದುರ್ಗದಲ್ಲಿ ಶಿವನಗೌಡ ನಾಯಕ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ಯುದ್ಧ ಮುಗಿಯುತ್ತಿಲ್ಲ. ಹೀಗೆ ರಾಜ್ಯದಲ್ಲಿ ಹದಿನೈದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಇದೆ.
ಅಖಾಡಕ್ಕೆ ಧುಮುಕಲು ಸಿದ್ಧರಾದರಾ ಎಚ್‌ಡಿಕೆ, ವಿಜಯೇಂದ್ರ?
ಭಿನ್ನಾಭಿಪ್ರಾಯ ಶಮನಕ್ಕೆ ರಾಜ್ಯ ಬಿಜೆಪಿ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಚುನಾವಣೆಯೊಳಗೆ ಭಿನ್ನಾಭಿಪ್ರಾಯವನ್ನು ಬಗೆಹರಿಸದಿದ್ದರೆ ಅದರ ಲಾಭ ಕಾಂಗ್ರೆಸ್‌ಗೆ ಆಗುತ್ತಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕಾಂಗ್ರೆಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಅಲರ್ಟ್ ಆಗಿರುವ ಮೈತ್ರಿ ಪಕ್ಷಗಳ ನಾಯಕರು ಕಾರ್ಯಕರ್ತರನ್ನು ಒಂದುಗೂಡಿಸುವ ಪ್ರಯುತ್ನದಲ್ಲಿದ್ದಾರೆ.
ಇದನ್ನೂ ಓದಿ: Congress Protest : ದಯವಿಟ್ಟು ಪ್ರತಿಭಟನೆಗೆ ಬನ್ನಿ; ಬಿಜೆಪಿ ಸೇರಿ ಎಲ್ಲ ಸಂಸದರಿಗೆ ಸಿಎಂ ಪತ್ರ
ಹೀಗಾಗಿ ಬೂತ್ ಮಟ್ಟದ ಕಾರ್ಯಕರ್ತರು ಒಂದಾಗಿ ಚುನಾವಣೆ ಎದುರಿಸಲು ಪ್ಲ್ಯಾನ್ ಅನ್ನು ರೂಪಿಸಲಾಗುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖುದ್ದು ಅಖಾಡಕ್ಕೆ ಇಳಿದು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.