ರಮೇಶ ದೊಡ್ಡಪುರ, ಬೆಂಗಳೂರು
ಗುಜರಾತ್-ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡಿವೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳುತ್ತಿರುವುದು ಪಕ್ಷದ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ. ಡಿಸೆಂಬರ್ 8ಕ್ಕೆ ಫಲಿತಾಂಶಗಳು ಹೊರಬೀಳಲಿದ್ದು, ಅದಕ್ಕೂ ಮುನ್ನವೇ ಕರ್ನಾಟಕವೂ ಸೇರಿ ಭವಿಷ್ಯದ ಚುನಾವಣೆಗಳತ್ತ ಬಿಜೆಪಿ ವರಿಷ್ಠರು ದೃಷ್ಟಿ ನೆಟ್ಟಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಗೆದ್ದರೆ ಸಾಕು. ಹಿಮಾಚಲ ಪ್ರದೇಶ, ದೆಹಲಿ ಸ್ಥಳೀಯ ಚುನಾವಣೆಯ ಹಿನ್ನಡೆ, ಮುನ್ನಡೆಯನ್ನು ಬಿಜೆಪಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಗುಜರಾತ್‌ನಲ್ಲಿ ಎಷ್ಟು ಸ್ಥಾನ ಪಡೆಯಬಹುದು, ಆಮ್ ಆದ್ಮಿ ಪಕ್ಷದ ಕತೆ ಏನಾಗಬಹುದು ಎಂಬ ಲೆಕ್ಕಾಚಾರಗಳು ಹೊರಗೆ ನಡೆಯುತ್ತಿರುವಾಗಲೇ ನವದೆಹಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಕೇಂದ್ರ ಕಚೇರಿಯಲ್ಲಿ ಎರಡು ದಿನ ಠಿಕಾಣಿ ಹೂಡಿರುವ ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ಪದಾಧಿಕಾರಿಗಳು ಮುಂದಿನ ಚುನಾವಣೆಗಳ ಲೆಕ್ಕಾಚಾರ ಮಾಡುತ್ತಿದ್ದಾರೆ.
2023ರಲ್ಲಿ ಅನೇಕ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಎದುರಾಗಲಿವೆ. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಚುನಾವಣೆ, ದಕ್ಷಿಣ ಭಾರತದ ದೃಷ್ಟಿಯಿಂದ ಪ್ರಮುಖವಾದದ್ದು. 2019ರ ಲೋಕಸಭೆ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಟ್ಟಿರುವುದರಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲೂ ಪ್ರಾಮುಖ್ಯತೆ ಪಡೆಯುತ್ತದೆ.
ಕರ್ನಾಟಕದ ಹೊರತಾಗಿ ಪ್ರಮುಖವಾಗಿ ಅನೇಕ ವರ್ಷದಿಂದ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಆಗಾಗ ಕೈತಪ್ಪುತ್ತಿರುವ ರಾಜಸ್ಥಾನ, ಛತ್ತೀಸ್‌ಗಢ, ದಕ್ಷಿಣ ಭಾರತದಲ್ಲಿ ಎರಡನೇ ದ್ವಾರವಾಗಬೇಕು ಎಂದು ಬಿಜೆಪಿ ಬಯಸಿರುವ ತೆಲಂಗಾಣ, ಈಶಾನ್ಯ ಭಾರತದ ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯ ಚುನಾವಣೆಗಳೂ ಎದುರಾಗಲಿವೆ.
ಎರಡು ದಿನ ನವದೆಹಲಿಯಲ್ಲಿ ನಡೆಯುವ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕದಿಂದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಪ್ರತಿನಿಧಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಬಿಜೆಪಿ ಅಧಿಕೃತ ಪ್ರಕಟಣೆಯೇ ತಿಳಿಸಿದೆಯಾದ್ದರಿಂದ ಕರ್ನಾಟಕ ಚುನಾವಣೆಯ ಚೌಕಟ್ಟು ರೂಪುಗೊಳ್ಳುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಗುಜರಾತ್ ಚುನಾವಣೆಯು ತಮಗೆ ರೋಲ್ ಮಾಡೆಲ್ ಆಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹೇಳಿದ್ದಾರೆ. ಗುಜರಾತ್ ಚುನಾವಣೆ ಪರಿಣಾಮ ಕರ್ನಾಟಕದಲ್ಲಿ ಆಗುತ್ತದೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಮೋಡಿ ಮಾಡುತ್ತಾರೆ. ರೈತರಿಗೆ, ಎಸ್‌ಸಿಎಸ್‌ಟಿ ಸಮುದಾಯದವರಿಗೆ, ನೇಕಾರರಿಗೆ ಅವರು ಅನುಕೂಲ ಮಾಡಿಕೊಟ್ಟಿದ್ದಾರೆ. ಗುಜರಾತ್ ನಮಗೆ ರೋಲ್ ಮಾಡೆಲ್. ಮೋದಿ, ಅಮಿತ್ ಶಾ ರೋಲ್ ಮಾಡೆಲ್. ಗೆಲ್ಲುವ ಕುದುರೆಗೆ ಮಾತ್ರ ಟಿಕೆಟ್ ಸಿಗುತ್ತದೆ. ಸರ್ವೇ ಆಧಾರದಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸಹ ಇದೇ ಮಾತನ್ನಾಡಿದ್ದಾರೆ. ಜನರು ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಲಿದ್ದಾರೆ. ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ಕೊಡುತ್ತಿದೆ. ಕರ್ನಾಟಕದ ಚುನಾವಣೆ ಮೇಲೆಯೂ ಇದು ಪರಿಣಾಮ ಬೀರಲಿದೆ. 2023ರಲ್ಲಿ ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದಿದ್ದಾರೆ.
ತಿಂಗಳಿಗೊಮ್ಮೆ ಮೋದಿ
ಈಗಾಗಲೆ ರಾಜ್ಯಕ್ಕೆ ಕೇಂದ್ರ ಸಚಿವರ, ನಾಯಕರ ಆಗಮನ ಆರಂಭವಾಗಿದೆ. ಮೂರು ದಿನಗಳ ಹಿಂದಷ್ಟೆ ರಾಜನಾಥ್ ಸಿಂಗ್ ಆಗಮಿಸಿ ತೆರಳಿದ್ದಾರೆ. ಕೇಂದ್ರ ಸಚಿವರನ್ನು ಕರ್ನಾಟಕದ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಉಸ್ತುವಾರಿಯಾಗಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಸ್. ಜೈಶಂಕರ್, ಹಾಸನ ಹಾಗೂ ಮಂಡ್ಯಕ್ಕೆ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜರ್ ನೇಮಕವಾಗಿದ್ದಾರೆ. ಅವರು ಲೋಕಸಭೆ ಜತೆಗೆ ಅದರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳತ್ತಲೂ ಗಮನ ನೀಡುತ್ತಾರೆ. ನಂತರದಲ್ಲಿ ಎಸ್‌ಸಿಎಸ್‌ಟಿ ಸಮಾವೇಶ, ಒಬಿಸಿ ಸಮಾವೇಶ, ಯುವ ಸಮಾವೇಶ, ಮಹಿಳಾ ಸಮಾವೇಶ ಆಯೋಜನೆಯಾಗಲಿವೆ. ಇವುಗಳಲ್ಲಿ ಕನಿಷ್ಠ ಎರಡಕ್ಕೆ ಮೋದಿ ಆಗಮಿಸುತ್ತಾರೆ. ಮುಂದಿನ ಮಾರ್ಚ್‌ವರೆಗೆ ಕನಿಷ್ಠ ತಿಂಗಳಿಗೊಮ್ಮೆ ಮೋದಿ ನೇರವಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅದರ ನಡುವೆ ಅನೇಕ ಬಾರಿ ವರ್ಚುವಲ್ ಸಭೆ ನಡೆಸಲಿದ್ದಾರೆ. ನವದೆಹಲಿಯಿಂದ ರಾಜ್ಯ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿ ಆಗಮಿಸಿದ ಕೂಡಲೆ ವಿಸ್ತೃತ ಯೋಜನೆ ಸಿದ್ಧವಾಗುತ್ತದೆ ಎಂದು ಮೂಲಗಳು ಹೇಳಿವೆ.
ಅಧ್ಯಕ್ಷರ ಬದಲಾವಣೆ ಜೀವಂತ?
ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ವಿಚಾರ ಮುಗಿದು ಹೋದ ಅಧ್ಯಾಯ ಎಂದು ನಂಬಲಾಗಿದೆಯಾದರೂ ಕೆಲ ಉನ್ನತ ಮೂಲಗಳ ಪ್ರಕಾರ ಅದಿನ್ನೂ ಜೀವಂತವಾಗಿದೆ. ಕರ್ನಾಟಕ ಬಿಜೆಪಿ ರಾಜ್ಯ ಅಧ್ಯಕ್ಷರು ಇಲ್ಲಿಯವರೆಗೆ ಅತಿ ಹೆಚ್ಚು ಸಂಘಟನಾತ್ಮಕ ಪ್ರವಾಸ ನಡೆಸಿದ್ದಾರೆ. ರಾಜ್ಯದ ಮೂಲೆಮೂಲೆಯನ್ನೂ ಸುತ್ತಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ವರ್ಚಸ್ಸು ಹೆಚ್ಚಳಕ್ಕೆ ಇದರಿಂದ ಸಾಧ್ಯವಾಗುತ್ತಿಲ್ಲ. ಒಂದೆಡೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಇತ್ತ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿದ್ದರು. ಒಬ್ಬರು ಮಾಸ್ ಲೀಡರ್, ಮತ್ತೊಬ್ಬರು ಸಂಘಟನಾತ್ಮಕ ಚಟುವಟಿಕೆ ಗಮನಿಸುತ್ತಿದ್ದರು. ಆದರೆ ಈಗ ಆ ಕಾಂಬಿನೇಷನ್ ಗೋಚರಿಸುತ್ತಿಲ್ಲ. ಹಾಗಾಗಿ ಪಕ್ಷಾಧ್ಯಕ್ಷರ ಬದಲಾವಣೆ ಸೂಕ್ತ ಎಂಬ ಅಭಿಪ್ರಾಯವೂ ಪಕ್ಷದಲ್ಲಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಸಾಧ್ಯತೆಯನ್ನು ವರಿಷ್ಠರು ತಳ್ಳಿ ಹಾಕಿದ್ದಾರೆ. ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾದ್ದರಿಂದ ಪಕ್ಷದ ರಾಜ್ಯ ಅಧ್ಯಕ್ಷರಾಗಿ, ರಾಜ್ಯದ ಮತ್ತೊಂದು ಪ್ರಬಲ ಸಮುದಾಯ ಒಕ್ಕಲಿಗರನ್ನು ತರುವ ಚಿಂತನೆ ಇದೆ. ಈ ಲೆಕ್ಕಾಚಾರದಲ್ಲಿ ಮೊದಲಿಗೆ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಅದೇ ಸಮುದಾಯದ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶವಿದೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೆಸರೂ ಕೇಳಿಬರುತ್ತಿದೆ.
ಮುಖ್ಯವಾಗಿ ಹಳೆ ಮೈಸೂರಿನ ಮತಗಳತ್ತ ಬಿಜೆಪಿ ಹೆಚ್ಚು ಗಮನ ನೀಡಿದೆ. ಈ ಪ್ರದೇಶದಲ್ಲಿ ಸೀಟುಗಳನ್ನು ಗೆಲ್ಲದೇ ಇದ್ದರೆ ಮತ್ತದೇ ಅತಂತ್ರ ವಿಧಾನಸಭೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಒಕ್ಕಲಿಗ ಸಮುದಾಯಕ್ಕೆ ಪ್ರಥಮ ಆದ್ಯತೆ. ಇದರ ಜತೆಗೆ, ಬಿಜೆಪಿಯ ಸಾಂಪ್ರದಾಯಿಕ ಹಿಂದುತ್ವ ಮತಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಸಮಾಧಾನ ಇದೆ. ಬಿಜೆಪಿ ಇನ್ನಷ್ಟು ಆಕ್ರಮಣಕಾರಿಯಾಗಿ ಹಿಂದುತ್ವ ಪ್ರತಿಪಾದಿಸಬೇಕು ಎಂಬ ಒತ್ತಾಯವಿದೆ. ಈ ಲೆಕ್ಕದಲ್ಲಿ ನೋಡಿದರೆ ಸಿ.ಟಿ. ರವಿ ಹಾಗೂ ಶೋಭಾ ಕರಂದ್ಲಾಜೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಒಬಿಸಿ ಸಮಯದಾಯದತ್ತಲೂ ಬಿಜೆಪಿ ಕಣ್ಣಿಟ್ಟಿದ್ದು, ಅದರ ಜತೆಗೆ ಹಿಂದುತ್ವ, ಯುವ ಮುಖವಾಗಿಯೂ ಇರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೆಸರು ಕೇಳಿಬರುತ್ತಿದೆ. ಆದರೆ ಈಗಿನ ನರೇಂದ್ರ ಮೋದಿ, ಅಮಿತ್ ಶಾ ಕಾರ್ಯವೈಖರಿಯನ್ನು ನೋಡಿದರೆ ಅಚ್ಚರಿಯ ರೀತಿಯಲ್ಲಿ ಒಬ್ಬರನ್ನು ಅಧ್ಯಕ್ಷರಾಗಿ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಸದ್ಯ ನವದೆಹಲಿಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಬಹುತೇಕ ಅಲ್ಲಿಯೇ ರಾಜ್ಯಾಧ್ಯಕ್ಷರ ವಿಚಾರ ತೀರ್ಮಾನ ಆಗುತ್ತದೆ. ಡಿಸೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಪ್ರಕೋಷ್ಠಗಳ ಸಮಾವೇಶ ನಡೆಯಲಿದೆ. ಈ ವೇಳೆಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಡಿಸೆಂಬರ್ 19ರಿಂದ 30ರವರೆಗೆ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತದೆ. ಕೇಂದ್ರದಲ್ಲಿಯೂ ಡಿಸೆಂಬರ್ 7ರಿಂದ 29ರವರೆಗೆ ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ಶಾಸಕರು, ಸಚಿವರು ಅಧಿವೇಶನದಲ್ಲಿದ್ದು ಪ್ರತಿಪಕ್ಷಗಳನ್ನು ಎದುರುತ್ತಾರೆ, ಇತ್ತ ಸಂಘಟನಾತ್ಮಕವಾಗಿ ಅನೇಕ ಚಟುವಟಿಕೆಗಳು ನಡೆಯಬೇಕಿದೆ. ಡಿಸೆಂಬರ್ 18ರೊಳಗೆ ರಾಜ್ಯ ಅಧ್ಯಕ್ಷರ ಬದಲಾವಣೆ ಆಗದಿದ್ದರೆ ಅಲ್ಲಿಂದ ಮುಂದೆ ಬದಲಾವಣೆಯನ್ನು ನಿರೀಕ್ಷಿಸುವಂತಿಲ್ಲ ಎಂದು ರಾಜ್ಯ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹಾಲಿಗಳಲ್ಲಿ ಆತಂಕ
ಅನೇಕ ಬಿಜೆಪಿ ನಾಯಕರು ಹೇಳುವಂತೆ ಕರ್ನಾಟಕದಲ್ಲೂ ಅನೇಕ ಹಾಲಿ ಶಾಸಕರಿಗೆ, ಕೆಲವು ಸಚಿವರಿಗೂ ಟಿಕೆಟ್ ಕೈತಪ್ಪುತ್ತದೆ. ಗುಜರಾತ್‌ನಲ್ಲಿ ಹಾಲಿ 37 ಶಾಸಕರಿಗೆ ಟಿಕೆಟ್ ಕೈತಪ್ಪಿತ್ತು. ಕರ್ನಾಟಕದಲ್ಲಿ ಹಿರಿಯರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಎಸ್. ಸುರೇಶ್ ಕುಮಾರ್, ವಿ. ಸೋಮಣ್ಣ, ತಿಪ್ಪಾರೆಡ್ಡಿ, ಎಸ್. ಎ. ರವೀಂದ್ರನಾಥ್, ನೆಹರು ಓಲೇಕಾರ್, ಹಾಲಪ್ಪ ಆಚಾರ್, ಎಂ.ಪಿ. ಕುಮಾರಸ್ವಾಮಿ, ಕೆ.ಜಿ. ಬೋಪಯ್ಯ ಸೇರಿ ಅನೇಕರಿಗೆ ಟಿಕೆಟ್ ಕೈತಪ್ಪಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿವೆ. ಈ ಕ್ಷೇತ್ರಗಳಲ್ಲಿ ಕೆಲವು ಕಡೆ ಅವರವರ ಪುತ್ರರಿಗೆ, ಇನ್ನು ಕೆಲವೆಡೆ ಯುವ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತಿದೆ.
ಇದನ್ನೂ ಓದಿ | Bhaskardas Ekkaru | ರಾಷ್ಟ್ರಮಟ್ಟದಲ್ಲಿ ಅಲೆಮಾರಿಗಳಿಗೆ ಭಾಸ್ಕರದಾಸ್ ಎಕ್ಕಾರು ಧ್ವನಿಯಾಗಿದ್ದರು: ನಳಿನ್ ಕುಮಾರ್ ಕಟೀಲ್