Site icon Vistara News

Karnataka Budget 2024: ಫೆ.16ಕ್ಕೆ ರಾಜ್ಯ ಬಜೆಟ್ ಬೇಡ: ಮುಂದಕ್ಕೆ ಹಾಕುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

BJP delegation meets Governor

ಬೆಂಗಳೂರು: ಫೆಬ್ರವರಿ 16ರಂದು ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಇದೆ. ಈ ಚುನಾವಣೆ ದಿನದಂದು ಕಾಂಗ್ರೆಸ್‌ ಸರ್ಕಾರ ರಾಜ್ಯ ಬಜೆಟ್ (Karnataka Budget 2024) ಮಂಡಿಸುವುದು ಸರಿಯಲ್ಲ. ಇದು ಮಾದರಿ ನೀತಿಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ (Model Code of Conduct and Representation of the People Act) ಪ್ರಕಾರ ಇದು ನ್ಯಾಯಬದ್ಧವಲ್ಲ. ಹೀಗಾಗಿ ಬಜೆಟ್ ಮಂಡನೆ ದಿನಾಂಕವನ್ನು ಮುಂದಕ್ಕೆ ಹಾಕಬೇಕು ಎಂದು ರಾಜ್ಯ ಬಿಜೆಪಿಯು (BJP Karnataka) ರಾಜ್ಯಪಾಲರ ಕದ ತಟ್ಟಿದೆ. ರಾಜ್ಯಪಾಲರಿಗೆ ಈ ಬಗ್ಗೆ ಮನವಿ ಮಾಡಿದ್ದು, ಮಧ್ಯಪ್ರವೇಶ ಮಾಡುವಂತೆ ಕೇಳಿಕೊಂಡಿದೆ.

ರಾಜಭವನದಲ್ಲಿ ಈ ಕುರಿತು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗವು, ಅಂದು ಬೆಂಗಳೂರಿನ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಇರುವುದರಿಂದ ಯಾವುದೇ ಕಾರಣಕ್ಕೂ ರಾಜ್ಯ ಬಜೆಟ್‌ ಮಂಡನೆ ಮಾಡುವುದು ಸರಿಯಲ್ಲ. ಹೀಗಾಗಿ ದಿನಾಂಕವನ್ನು ಮುಂದಕ್ಕೆ ಹಾಕಬೇಕು ಎಂದು ಮನವಿ ಮಾಡಿದೆ.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಚುನಾವಣಾ ಆಯೋಗವು ಬೆಂಗಳೂರಿನ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16ರಂದು ಚುನಾವಣೆ ನಡೆಯಲಿದೆ ಎಂದು ಜನವರಿ 23ರಂದೇ ಚುನಾವಣಾ ದಿನವನ್ನು ನಿಗದಿಪಡಿಸಿತ್ತು. ಆದರೆ, ಈಗ ಮತದಾನದ ದಿನವೇ ರಾಜ್ಯ ಸರ್ಕಾರ ಬಜೆಟ್ ಮಂಡನೆಗೆ ಮುಂದಾಗಿದೆ ಇದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಜೆಟ್ ಮಂಡನೆ ದಿನಾಂಕವನ್ನು ಮುಂದಕ್ಕೆ ಹಾಕಲು ಕೋರಿಕೆ

ಮಾದರಿ ನೀತಿಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ ಪ್ರಕಾರ ಇದು ನ್ಯಾಯಬದ್ಧವಲ್ಲ. ಬಜೆಟ್ ದಿನವೇ ಚುನಾವಣೆ ಮಾಡುವ ಬದಲು ಬಜೆಟ್ ಮಂಡನೆ ದಿನಾಂಕವನ್ನು ಮುಂದಕ್ಕೆ ಹಾಕಲು ಕೋರಲಾಗಿದೆ. ಬಿಜೆಪಿ, ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ಕೊಡಲು ಕೋರಿದ್ದೇವೆ ಎಂದು‌ ಡಾ. ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದರು.

ಬಜೆಟ್ ಮಂಡನೆ ದಿನವನ್ನು ಮುಂದೂಡಬೇಕು. ಚುನಾವಣೆ ದಿನವೇ ಬಜೆಟ್ ಮಂಡಿಸದಂತೆ ಸೂಚಿಸಲು ಕೋರಿದ್ದೇವೆ. ರಾಜ್ಯ ಸರ್ಕಾರಕ್ಕೆ ಈ ಕುರಿತು ಸೂಚಿಸುವುದಾಗಿ ರಾಜ್ಯಪಾಲರೂ ತಿಳಿಸಿದ್ದಾರೆ. ಇದಲ್ಲದೆ ಚುನಾವಣಾ ಆಯೋಗಕ್ಕೂ ಮನವಿ ಕೊಡಲಿದ್ದೇವೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.

ಆ ದಿನ ಬಜೆಟ್ ಮಂಡಿಸಿದರೆ ಅದು ಮತದಾನದ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಈಗ ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ್ ವಿವರ ನೀಡಿದರು.

ಇದನ್ನೂ ಓದಿ: CM Siddaramaiah : ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ

ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ ಕುಮಾರ್, ಮಾಜಿ ಸಚಿವರು ಮತ್ತು ರಾಜ್ಯ ಉಪಾಧ್ಯಕ್ಷರಾದ ಬೈರತಿ ಬಸವರಾಜ್, ಹರತಾಳು ಹಾಲಪ್ಪ, ಮಾಜಿ ಸಚಿವ ಮುನಿರತ್ನ, ಯುವಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜ್, ಇತರ ಪ್ರಮುಖರು ಜತೆಗೂಡಿ ಈ ಮನವಿಯನ್ನು ಸಲ್ಲಿಸಿದರು.

Exit mobile version