ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ (Assembly elections) ನಡೆದು 135 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಆದರೆ, ಆ ನಂತರದ ರಾಜಕೀಯ ಬೆಳವಣಿಗೆಗಳು (Karnataka Politics) ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ. ಇಷ್ಟಿದ್ದರೂ ಕಾಂಗ್ರೆಸ್ ನಿರ್ಭೀತಿಯಿಂದ ಆಡಳಿತ ನಡೆಸುತ್ತಿಲ್ಲ ಎಂಬುದು ಗೋಚರಿಸುತ್ತಿದೆ. ಪಕ್ಷದ ಆಂತರಿಕ ಭಿನ್ನಮತ, ಶಾಸಕರ ಅಸಮಾಧಾನ ಸೇರಿದಂತೆ ಪ್ರತಿಪಕ್ಷಗಳ ನಡೆ ಆಡಳಿತ ಪಕ್ಷದೊಳಗೆ ತಲ್ಲಣವನ್ನುಂಟು ಮಾಡುವಂತೆ ಮಾಡಿದೆ. ಈ ಕಾರಣಕ್ಕೆ ರಾಜ್ಯದಲ್ಲಿ “ಆಪರೇಷನ್ ವರ್ಸಸ್ ಆಪರೇಷನ್” ಪಾಲಿಟಿಕ್ಸ್ (Operation Politics) ಶುರುವಾಗಿದೆ.
ಸರ್ಕಾರ ಸುಭದ್ರವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರ (BJP and JDS leaders) ಕೆಲವು ಮಾತುಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಬಿಜೆಪಿಯ ಫೈರ್‌ಬ್ರಾಂಡ್ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮಾತು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಇನ್ನು ಆರು ತಿಂಗಳಿನಲ್ಲಿ ಸರ್ಕಾರವನ್ನು ರಚನೆ ಮಾಡುವ ಬಗ್ಗೆ ಅವರು ಮಾತನಾಡಿದ್ದರು. ಈ ಹೇಳಿಕೆಗೆ ತಳುಕು ಹಾಕಿಕೊಳ್ಳುವಂತೆ ರಾಜ್ಯದಲ್ಲಿ ನಡೆದ ಒಂದಿಲ್ಲೊಂದು ಘಟನಾವಳಿಗಳು ಪುಷ್ಟೀಕರಣ ನೀಡುತ್ತಾ ಬಂದವು. ಸಚಿವರ ಮೇಲೆ ಕಾಂಗ್ರೆಸ್ ಶಾಸಕರ (Congress MLAs) ಮುನಿಸು, ಸಿಎಂಗೆ ಬರೆದ ಪತ್ರ, ಬಹಿರಂಗ ಹೇಳಿಕೆಗಳು ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕರನ್ನು ನಿದ್ದೆಗೆಡಿಸಿತ್ತು.
ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಪದೇ ಪದೆ ಮಾತಿಗೆಳೆಯುತ್ತಿದೆ. ಹೀಗಾಗಿ ಅಸಮಾಧಾನಿತ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಈ ನಡುವೆ ಯತ್ನಾಳ್ ನೀಡಿರುವ ಹೇಳಿಕೆಯನ್ನು ರಾಜಕೀಯ ವಿಶ್ಲೇಷಣೆಯ ಓರೆಗೆ ಹಚ್ಚಿ ನೋಡಲಾಗುತ್ತಿದೆ. ಅಂದರೆ, ಈ ಮಾತನ್ನು ಯತ್ನಾಳ್ ಅವರು ವೈಯಕ್ತಿಕವಾಗಿ ಹೇಳಿದ್ದಾರೆಯೇ? ಇಲ್ಲವೇ ಯಾರಾದರೂ ಹೇಳಿಸಿದ್ದಾರೆಯೇ? ಎಂಬ ಚರ್ಚೆಗಳು ಸಹ ನಡೆದಿವೆ. ಜತೆಗೆ ಇದೇ ಮಾತನ್ನು ಬಿಜೆಪಿಯ ಹಲವು ನಾಯಕರು ಹೇಳುತ್ತಾ ಬಂದಿದ್ದಾರೆ.
ಹಾಗಾದರೆ ಬಿಜೆಪಿ ಲೆಕ್ಕಾಚಾರವೇನು?
ಈಗ ಬಿಜೆಪಿ ಸಹ ಕೆಲವು ಲೆಕ್ಕಾಚಾರದಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಸಮಾಧಾನಿತ ಶಾಸಕರು ಕಾಂಗ್ರೆಸ್‌ಗೆ ಕೈ ಕೊಟ್ಟರೆ ಬಿಜೆಪಿ, ಜೆಡಿಎಸ್ ಹಾಗೂ ಅಸಮಾಧಾನಿತರನ್ನೊಳಗೊಂಡ ಸರ್ಕಾರವನ್ನು ರಚನೆ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. 135ರ ಸಂಖ್ಯೆಯನ್ನು ಅಲ್ಪಮತಕ್ಕೆ ಇಳಿಯುವಂತೆ ನೋಡಿಕೊಂಡರೆ ಸರ್ಕಾರ ರಚನೆ ಸುಲಭವಾಗುತ್ತದೆ. ಕನಿಷ್ಠ 30 ಶಾಸಕರು ಕಾಂಗ್ರೆಸ್ ಬಿಟ್ಟು ಬಂದರೆ ಹೊಸ ಸಮ್ಮಿಶ್ರ ಸರ್ಕಾರ ರಚನೆ ಸುಲಭ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಬಳಿಕ ರಾಷ್ಟ್ರೀಯ ನಾಯಕರು (BJP National Leaders) ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಏನು ಬೇಕಿದ್ದರೂ ಮಾಡುತ್ತಾರೆ ಎಂಬ ವಿಶ್ವಾಸದಲ್ಲಿ ಈಗ ರಾಜ್ಯ ಬಿಜೆಪಿ ನಾಯಕರು ಇದ್ದಾರೆ ಎನ್ನಲಾಗಿದೆ.
ಈ ಲೆಕ್ಕಾಚಾರದ ಮೇಲೆ ಕಣ್ಣಿಟ್ಟ ಕೈ ನಾಯಕರು
ಒಂದು ಕಡೆ ಆಪರೇಷನ್ ಕಮಲದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್ ಸಹ ಅಲರ್ಟ್ ಆಗಿದೆ. ಅದಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ನಡೆಸಲು ಸಿದ್ಧತೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಆಲರ್ಟ್ ಆಗಿದ್ದಾರೆ. ಲೋಕಸಭೆಗೂ ಮೊದಲೇ ಜೆಡಿಎಸ್ ಮತ್ತು ಬಿಜೆಪಿಗೆ ಚೆಕ್‌ಮೇಟ್ ಕೊಡಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಏನು ಕಾಂಗ್ರೆಸ್ ಪ್ಲ್ಯಾನ್?
ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಲು ಕೊಡಬಾರದು. ಇನ್ನಷ್ಟು ಸುಭದ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ತಂತ್ರಗಾರಿಕೆ ಹೆಣೆಯುತ್ತಿರುವ ಕಾಂಗ್ರೆಸ್, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ. ಹಾಗಾಗಿ ಕಳೆದ ಬಾರಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿ ಸರ್ಕಾರ ರಚನೆಗೆ ಕಾರಣರಾದವರೇ ಇವರ ಮೊದಲ ಟಾರ್ಗೆಟ್ ಆಗಿದ್ದಾರೆ. ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್ ಸೇರಿದಂತೆ ಬಿಜೆಪಿ ಅಸಮಾಧಾನಿತ ಶಾಸಕರನ್ನು ಸೆಳೆಯುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಈಗಾಗಲೇ ಹಲವು ನಾಯಕರು ಡಿ.ಕೆ. ಶಿವಕುಮಾರ್ ಅವರನ್ನು ಹಲವು ಕಾರಣಗಳಿಗೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಡಿಕೆಶಿ ಸಹ ಪರೋಕ್ಷವಾಗಿ ಮಾತನಾಡುವ ಮೂಲಕ ಬಿಜೆಪಿಯವರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಜತೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಶಾಸಕರನ್ನು ಸಹ ಸೆಳೆಯಬಹುದು ಎಂಬ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಇದರ ಜತೆಗೆ ಜೆಡಿಎಸ್‌ನ ಅಸಮಾಧಾನಿತ ಶಾಸಕರನ್ನೂ ಸೆಳೆಯಲು ಕೈ ನಾಯಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಸನ, ಮೈಸೂರು, ತುಮಕೂರು ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಗೆದ್ದ ಶಾಸಕರನ್ನು ಸೆಳೆಯುವ ತಂತ್ರಗಾರಿಕೆಯೂ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: HD Kumaraswamy : 2 ದಿನ ಕಾಯಿರಿ, ಬಿಬಿಎಂಪಿ ಕರ್ಮಕಾಂಡ ಮುಂದಿಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಇದು ನಿಜಕ್ಕೂ ಸಾಧ್ಯವೇ?
ಹಾಗಾದರೆ ಸರ್ಕಾರವನ್ನು ಕೆಡಗುವುದು ನಿಜಕ್ಕೂ ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ. ಹಾಗೆ ನೋಡಿದರೆ ಅಷ್ಟು ಸುಲಭವಲ್ಲ. ಈಗಾಗಲೇ ಕಾಂಗ್ರೆಸ್ ಬಳಿ 135 ಸ್ಥಾನ ಇದೆ. ಸಂಪೂರ್ಣ ಬಹುಮತಕ್ಕೆ 113 ಸ್ಥಾನಗಳು ಸಾಕು. ಬಹುಮತದ ಹೊರತಾಗಿಯೂ 22 ಶಾಸಕರು ಕಾಂಗ್ರೆಸ್‌ನಲ್ಲಿ ಹೆಚ್ಚುವರಿಯಾಗಿದ್ದಾರೆ. ಸರ್ಕಾರವನ್ನು ಅಭದ್ರ ಮಾಡಬೇಕು ಎಂದರೆ ಕನಿಷ್ಠ 30 ಶಾಸಕರು ಅತ್ತ ಕಡೆಯಿಂದ ಇತ್ತ ಬರಬೇಕು. ಆಗ ಸರ್ಕಾರದ ಸ್ಥಾನ 105ಕ್ಕೆ ಕುಸಿಯುತ್ತದೆ. ಹಾಗೆ ಪಕ್ಷ ಬಿಟ್ಟು ಬಂದ ಎಲ್ಲರಿಗೂ ಸಚಿವ ಸ್ಥಾನವನ್ನು ಕೊಡುವುದು ಕಷ್ಟ ಸಾಧ್ಯ. ಅದರಲ್ಲೂ ಬಿಜೆಪಿ-ಜೆಡಿಎಸ್‌ನಲ್ಲಿರುವ ಕೆಲವರಿಗಾದರೂ ಸಚಿವ ಸ್ಥಾನವನ್ನು ಕೊಡಬೇಕು. ಈ ಕಾರಣದಿಂದಾಗಿ ಬಂದವರನ್ನು ಸಮಾಧಾನ ಪಡಿಸುವುದು ಸಹ ಕಷ್ಟಸಾಧ್ಯ. ಆದ್ದರಿಂದ ಆಪರೇಷನ್ ಕಮಲ ನಡೆಯುವುದು ಬಹುತೇಕ ಕಷ್ಟ ಎಂಬ ಮಾತೂ ಸಹ ಚಾಲ್ತಿಯಲ್ಲಿದೆ.