Site icon Vistara News

ವಿಸ್ತಾರ ವಿಶೇಷ | ಡಿಸೆಂಬರ್‌ ಅಂತ್ಯಕ್ಕೆ ಶ್ರೀರಾಮ ಸೇನೆ 25 ಅಭ್ಯರ್ಥಿಗಳ ಘೋಷಣೆ: BJP ನಿದ್ದೆಗೆಡಿಸಿದ ಮುತಾಲಿಕ್‌ ನಡೆ

If BJP leaders come home and ask for votes in the name of Modi beat them up with slippers Pramod Muthalik

ರಮೇಶ ದೊಡ್ಡಪುರ, ಬೆಂಗಳೂರು
ಮುಂಬರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿರುವಂತೆಯೇ, ಹಿಂದು ಸಂಘಟನೆಯೂ ಈ ಬಾರಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿರುವುದು ʼಒರಿಜಿನಲ್‌ ಹಿಂದುತ್ವ ಪಕ್ಷʼ ಎಂದು ಹೇಳಿಕೊಳ್ಳುವ ಬಿಜೆಪಿಗೆ ತಣ್ಣಗೆ ಬಿಸಿ ಮುಟ್ಟಿಸಿದೆ.

2023ರಲ್ಲಿ ಚುನಾವಣೆ ನಡೆಯುವುದಕ್ಕೂ ಮುನ್ನವೇ ರಾಜ್ಯದಲ್ಲಿ ಧರ್ಮಾಧಾರಿತ ಚರ್ಚೆಗಳು ಕಾವು ಪಡೆಯುತ್ತಿವೆ. ಇದರಲ್ಲಿ ಬಿಜೆಪಿಯು ನಿಜವಾಗಿ ಹಿಂದುಗಳ ಹಾಗೂ ಹಿಂದುತ್ವ ಪರವಾಗಿರುವವರ ರಕ್ಷಣೆ ಮಾಡುತ್ತದೆಯೇ ಎಂಬ ಕುರಿತು ಶ್ರೀರಾಮ ಸೇನೆ ಪ್ರಶ್ನೆಗಳನ್ನು ಎತ್ತುತ್ತಿದೆ. ಒಂದೆಡೆ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥರನ್ನು ಹೊಗಳುತ್ತ ಬಿಜೆಪಿ ವಿರುದ್ಧ ಪ್ರಮೋದ್‌ ಮುತಾಲಿಕ್‌ ನೇರ ವಾಗ್ದಾಳಿ ನಡೆಸುತ್ತಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

25 ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ
ದತ್ತಪೀಠದಲ್ಲಿ ನವೆಂಬರ್‌ 13 ರಂದು ಮಾತನಾಡಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಹೊರತುಪಡಿಸಿ ಮತ್ಯಾರೂ ಹಿಂದುತ್ವ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಶಾಸಕರು ಹಾಗೂ ಮಂತ್ರಿಗಳು ಹಿಂದುಗಳ ಪರವಾಗಿ ಕೆಲಸ ಮಾಡುತ್ತಿಲ್ಲ. ಅವರೆಲ್ಲರೂ ಢೋಂಗಿ ಹಿಂದುತ್ವವಾದಿಗಳಾಗಿದ್ದಾರೆ.

ಹಿಂದುತ್ವಕ್ಕೆ ಹೋರಾಟ ನಡೆಸಿದವರನ್ನು ರೌಡಿ ಶೀಟರ್‌ ಮಾಡಿದ್ದಾರೆ. ಕೆಲವರು ಗೂಂಡಾ ಕೇಸ್‌ ಹಾಕಿಸಿಕೊಂಡು ಕಷ್ಟದಲ್ಲಿದ್ದಾರೆ. ಅವರ ರಕ್ಷಣೆಗೆ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಹಿಂದುತ್ವಕ್ಕೆ ಹೋರಾಟ ನಡೆಸುತ್ತ ಅನೇಕ ಯುವಕರು ಹತ್ಯೆಯಾಗಿದ್ದಾರೆ, ಕಾರ್ಯಕರ್ತರಿಗೆ ರಕ್ಷಣೆ ನೀಡಲೂ ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ 25 ಪ್ರಖರ ಹಿಂದುತ್ವವಾದಿಗಳು, ಸ್ವಾಮೀಜಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು ಎಂದು ಘೋಷಣೆ ಮಾಡಿದ್ದರು.

ಸಿ.ಟಿ. ರವಿ ನೇರ ವಾಗ್ದಾಳಿ
ದತ್ತಪೀಠದಲ್ಲಿ ಮಾತನಾಡಿದ್ದ ಪ್ರಮೋದ್‌ ಮುತಾಳಿಕ್‌, ಸಹಜವಾಗಿಯೇ ದತ್ತಪೀಠ ವಿವಾದದತ್ತಲೂ ಪ್ರತಿಕ್ರಿಯೆ ನೀಡಿದ್ದರು. ಕಳೆದ 25 ವರ್ಷದಿಂದ ಬಿಜೆಪಿಯವರು ದತ್ತಪೀಠದ ಹೆಸರಿನಲ್ಲಿ ಓಟು ಪಡೆಯುತ್ತಿದ್ದಾರೆ. ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಇವರನ್ನು ನಂಬಲು ಸಾಧ್ಯವಿಲ್ಲ. ನಾವು ರಾಜಕೀಯ ಅಧಿಕಾರ ಪಡೆದು ಗೋಹತ್ಯೆ ತಡೆಯುತ್ತೇವೆ, ಲವ್‌ ಜಿಹಾದ್‌ ತಡೆಯುತ್ತೇವೆ, ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುತ್ತೇವೆ ಎಂದಿದ್ದರು.

ಈ ವಿಚಾರ ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯಲ್ಲಿ ಸಂಚಲನ ಉಂಟುಮಾಡಿತ್ತು. ದತ್ತಪೀಠ ಹೋರಾಟದ ಮುಂಚೂಣಿಯಲ್ಲಿರುವ ಮಾಜಿ ಸಚಿವ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಕಾಲಬುಡದಲ್ಲೇ ಈ ಚರ್ಚೆ ನಡೆಯುತ್ತಿದ್ದದ್ದು ಎಚ್ಚರಿಕೆ ಗಂಟೆಯಾಗಿತ್ತು.

ಇದಾಗಿ ಎರಡೇ ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಪ್ರಮೋದ್‌ ಮುತಾಲಿಕ್‌ ವಿರುದ್ಧ ಸಿ.ಟಿ. ರವಿ ಬಹಿರಂಗವಾಗಿಯೇ ನೇರ ವಾಗ್ದಾಳಿ ನಡೆಸಿದರು. ಕೇಸರಿ ಅಲೆ ಎದುರು ಬರುವ ಎಲ್ಲರೂ ತೂರಿ ಹೋಗುತ್ತಾರೆ. ನಾವು ಕೇಸರಿ ಮೇಲೆಯೇ ರಾಜಕಾರಣ ಮಾಡುವವರು. ದತ್ತಪೀಠಕ್ಕೆ ನ್ಯಾಯ ಯಾವಾಗ ಕೊಡುತ್ತೀರಿ ಎಂದು ಮುತಾಲಿಕ್‌ ಕೇಳಿದ್ದಾರೆ. ನಾವು ವರ್ಷಕ್ಕೊಮ್ಮೆ ದತ್ತಪೀಠ ನೆನಪು ಮಾಡಿಕೊಳ್ಳುವವರಲ್ಲ. ಕಳೆದ 45 ವರ್ಷದ ಹೋರಾಟದ ಭಾಗವಾಗಿದ್ದೇವೆ. ದತ್ತಪೀಠಕ್ಕೆ ನ್ಯಾಯ ಕೊಡುವ ಕೆಲಸವನ್ನು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಂದೆರಡು ದಿನದಲ್ಲಿ ಮಾಡುತ್ತದೆ. ಇದೇ ವಾರದಲ್ಲಿ ದತ್ತಪೀಠಕ್ಕೆ ನ್ಯಾಯ ಕೊಡುವ ಆದೇಶ ಹೊರಬರುತ್ತದೆ. ಅಯೋಧ್ಯೆಯಲ್ಲಿ ರಾಮನಿಗೆ ನ್ಯಾಯ ಕೊಟ್ಟಿದ್ದು ಬಿಜೆಪಿ, ಕಾಶಿಯಲ್ಲಿ ನ್ಯಾಯ ಕೊಟ್ಟಿದ್ದು ಬಿಜೆಪಿ, ಸೋಮನಾಥದಲ್ಲಿ ನ್ಯಾಯ ಕೊಟಿದ್ದು ಬಿಜೆಪಿ, ಇದೆಲ್ಲ ಕಡೆ ಅನ್ಯಾಯ ಮಾಡಿದ್ದು ಕಾಂಗ್ರೆಸ್‌. ದತ್ತಪೀಠಕ್ಕೂ ನ್ಯಾಯ ಕೊಡುತ್ತೇವೆ ಎಂದರು.

ಈ ಸಮಾವೇಶ ನಡೆದು ಮೂರೇ ದಿನದಲ್ಲಿ ಧಾರ್ಮಿಕ ದತ್ತಿ ಇಲಾಖೆಯು 8 ಜನರನ್ನು ಒಳಗೊಂಡ ವ್ಯವಸ್ಥಾಪನ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿತ್ತು. ಈ ಮೂಲಕ, ಪ್ರಮೋದ್‌ ಮುತಾಲಿಕ್‌ ಹೇಳಿಕೆಯು ಬಿಜೆಪಿಯಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ ಎನ್ನುವುದನ್ನು ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಿತ್ತು.

ಇದನ್ನೇ ಓದಿ | ದತ್ತಪೀಠ ವಿವಾದ | ಒಬ್ಬ ಮುಸ್ಲಿಂ ಸೇರಿದಂತೆ 8 ಸದಸ್ಯರ ಆಡಳಿತ ಮಂಡಳಿ ರಚನೆ, ಅರ್ಚಕರ ನೇಮಕಕ್ಕೂ ಅಧಿಕಾರ

ಹಿಂದುತ್ವ ಕೇಂದ್ರಗಳಲ್ಲೇ ಸ್ಪರ್ಧೆ

25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ವಿಚಾರವನ್ನು ಪ್ರಮೋದ್‌ ಮುತಾಲಿಕ್‌ ಮತ್ತೊಮ್ಮೆ ಖಚಿತಪಡಿಸಿದ್ದಾರೆ. ಈ ಕುರಿತು ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿ, ಸದ್ಯಕ್ಕೆ ಕ್ಷೇತ್ರಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಮುಖ್ಯವಾಗಿ ಹಿಂದುತ್ವದ ಅಲೆ ಇರುವ ಕ್ಷೇತ್ರಗಳು ಎಂದುಕೊಂಡರೂ ರಾಜ್ಯಾದ್ಯಂತ ಸ್ಪರ್ಧಿಸಲು ನಮಗೆ ಅವಕಾಶವಿದೆ. ಡಿಸೆಂಬರ್‌ ಎರಡನೇ ವಾರದ ಹೊತ್ತಿಗೆ ಕ್ಷೇತ್ರಗಳ ಚಿತ್ರಣ ನಮಗೆ ಸಿಗುತ್ತದೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಎಲ್ಲ 25 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ ಎಂದರು.

ಶ್ರೀರಾಮ ಸೇನೆಯ ಸ್ಪರ್ಧೆಯಿಂದ ಬಿಜೆಪಿಯ ಮತಗಳು ವಿಭಜನೆಯಾಗಿ ಕಾಂಗ್ರೆಸ್‌ಗೆ ಸಹಾಯಕವಾಗುತ್ತದೆ, ಇದರಿಂದ ಹಿಂದುತ್ವಕ್ಕೆ ಹಿನ್ನಡೆಯಾಗುತ್ತದೆ ಎಂದು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸಿದ ಮೇಲೆ ಇಂತಹ ಅಪಪ್ರಚಾರಗಳನ್ನು ಅನೇಕರು ಮಾಡುತ್ತಾರೆ. ಗೆಲ್ಲಬೇಕು ಎಂಬ ಕಾರಣಕ್ಕೇ ಸ್ಪರ್ಧೆ ಮಾಡುತ್ತೇವೆ. ಬಿಜೆಪಿಯು ಹಿಂದುತ್ವವನ್ನು ರಕ್ಷಣೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪ್ರಖರ ಹಿಂದುತ್ವವಾದಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಇದರಿಂದ ಮತ ವಿಭಜನೆ ಆಗುತ್ತದೆ, ತಾವು ಸೋಲುತ್ತೇವೆ, ಹಿಂದುತ್ವಕ್ಕೆ ಹಿನ್ನಡೆ ಆಗುತ್ತದೆ ಎಂದು ಅವರು ಭಾವಿಸಿದರೆ ಅವರೇ ಪ್ರಖರ ಹಿಂದುಗಳನ್ನು ಬೆಂಬಲಿಸಲಿ. ಅವರೇ ಟಿಕೆಟ್‌ ನೀಡಲಿ. ಹಿಂದುತ್ವವಾದಿಗಳನ್ನು ಕರೆದು ಮಾತನಾಡುವ ಸೌಜನ್ಯವೂ ಅವರಿಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಶ್ರೀರಾಮ ಸೇನೆ ಟ್ರೆಂಡ್‌

ಕಳೆದ ಕೆಲವು ತಿಂಗಳುಗಳಿಂದ ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಟ್ರೆಂಡ್‌ನಲ್ಲಿದ್ದಾರೆ. ಹಿಜಾಬ್‌ ಸಂದರ್ಭದಲ್ಲಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಿತಾದರೂ ಪ್ರವೀಣ್‌ ನೆಟ್ಟಾರು ಹತ್ಯೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕಾರನ್ನು ಕಾರ್ಯಕರ್ತರೇ ಹಿಡಿದು ಅಲುಗಾಡಿಸಿದ್ದು, ಕಾರ್ಯಕರ್ತರಲ್ಲಿರುವ ಅಸಮಾಧಾನವನ್ನು ಹೊರಹಾಕಿತ್ತು.

ಆನಂತರದಲ್ಲಿ ಚಿಕ್ಕಗಳೂರು ಸೇರಿ ವಿವಿಧೆಡೆ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಸರಣಿ ರಾಜೀನಾಮೆ ನೀಡಿದ್ದರು. ಈ ಪರಿಸ್ಥಿತಿಯನ್ನು ಸುಧಾರಿಸುವಷ್ಟರಲ್ಲಿ ಬಿಜೆಪಿ ನಾಯಕರು ಸುಸ್ತಾಗಿದ್ದರು. ಹೇಗೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದುಕೊಳ್ಳುತ್ತಿರುವಾಗಲೇ ಚಾಮರಾಜಪೇಟೆ ಈದ್ಗಾ ಮೈದಾನ, ಇತ್ತೀಚೆಗೆ ವಿವಿಧ ಜಾತ್ರೆಗಳಲ್ಲಿ ಮುಸ್ಲಿಮರು ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎಂಬ ವಿಚಾರದಲ್ಲಿ ಬಿಜೆಪಿಗಿಂತಲೂ ಶ್ರೀರಾಮಸೇನೆಯೇ ಮುಂಚೂಣಿಯಲ್ಲಿ ನಿಲ್ಲುತ್ತಿದೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ನಡೆದ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮುಸ್ಲಿಮರು ಮಾರಾಟ ಮಾಡದಂತೆ ತೊಂದರೆ ನೀಡಲು ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌ ವಿರುದ್ಧವೇ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವನ್ನು ಶ್ರೀರಾಮ ಸೇನೆ ಬಳಸಿಕೊಂಡು, ಹಿಂದುತ್ವಕ್ಕೆ ಬಿಜೆಪಿ ಬದ್ಧತೆ ಹೊಂದಿಲ್ಲ ಎಂದು ಪ್ರತಿಪಾದಿಸಿತ್ತು.

ಬಿಜೆಪಿಯಲ್ಲಿ ಲೆಕ್ಕಾಚಾರ, ಕಾತರ
ಪ್ರಮೋದ್‌ ಮುತಾಲಿಕ್‌ ಘೋಷಣೆ ಕುರಿತು ಬಿಜೆಪಿಯಲ್ಲಿ ಭಾರೀ ಆತಂಕ ಇಲ್ಲದಿದ್ದರೂ ಎಷ್ಟರ ಮಟ್ಟಿಗೆ ಅವರು ಪಕ್ಷಕ್ಕೆ ಪೆಟ್ಟು ನೀಡಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ. 25 ಕ್ಷೇತ್ರಗಳನ್ನು ಎಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಇದೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಪದಾಧಿಕಾರಿಯೊಬ್ಬರು, ಅನೇಕ ಕ್ಷೇತ್ರಗಳಲ್ಲಿ ವಿವಿಧ ಕಾರಣಕ್ಕೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಇದು ಪ್ರತಿ ಬಾರಿ ಇರುತ್ತದೆ. ಆದರೆ ಈ ಬಾರಿ ಶ್ರೀರಾಮ ಸೇನೆ ಚುನಾವಣೆ ಕಣಕ್ಕೆ ಇಳಿಯುವುದಾಗಿ ಹೇಳಿರುವುದು, ಟಿಕೆಟ್‌ ಆಕಾಂಕ್ಷಿಗಳಲ್ಲಿ ಆಸೆ ಹುಟ್ಟಿಸಬಹುದು. ಅತ್ಯಂತ ಕಡಿಮೆ ಅಂತರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಇದು ಸಂಕಷ್ಟ ತಂದೊಡ್ಡಬಲ್ಲದು. ಚುನಾವಣೆಯಲ್ಲಿ 4-5 ಸೀಟ್‌ಗಳೂ ಬಹುಮುಖ್ಯವಾದ ಸಂದರ್ಭದಲ್ಲಿ ಒಂದು ಜಾಗ್ರತೆಯನ್ನು ವಹಿಸುತ್ತೇವೆ. ಆದರೆ ಶ್ರೀರಾಮ ಸೇನೆಯ ಅಭ್ಯರ್ಥಿಗಳು ಜಯಗಳಿಸುವ ಸಾಧ್ಯತೆ ಇಲ್ಲಿವರೆಗೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಯುವ ಹಿಂದುತ್ವ ಮತದಾರರು ಬಿಜೆಪಿಯಿಂದ ಮತ್ತಷ್ಟು ಸ್ಪಷ್ಟ ಹೆಜ್ಜೆಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಅರಿವಿದೆ. ಮುಂಬರುವ ದಿನಗಳಲ್ಲಿ ಹಿಂದುತ್ವಕ್ಕೆ ಪೂರಕವಾದ ನಿರ್ಧಾರಗಳನ್ನು ಪಕ್ಷ ಹಾಗೂ ಸರ್ಕಾರವೂ ಕೈಗೊಳ್ಳಲಿದೆ ಎಂದಿದ್ದಾರೆ.

ಇದನ್ನೂ ಓದಿ | Election 2023 | 25 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆಯ ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ: ಮುತಾಲಿಕ್‌ ಘೋಷಣೆ

Exit mobile version