ಬೆಂಗಳೂರು: ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (Local Body Elections) ಹೊಸ ಮತದಾರರ ಜೊತೆಗೇ ಹೊಸ ನಾಯಕತ್ವ ಸೃಷ್ಟಿ ಮಾಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ (BJP Karnataka), ಯುವಮೋರ್ಚಾ ವತಿಯಿಂದ “ನಮೋ ಯುವ ಭಾರತ ಫೆಲೋಶಿಫ್” (Namo Yuva Bharath Fellowship) ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದೆ. ಇದರ ಭಾಗವಾಗಿ ಯುವಜನರಿಗಾಗಿ ರೀಲ್ಸ್ ಸ್ಪರ್ಧೆ (Reels Competition) ಏರ್ಪಡಿಸಲಾಗಿದ್ದು, ಅದರಲ್ಲಿ ಟಾಪ್ 10 ರೀಲ್ಸ್ ಮಾಡಿದವರಿಗೆ ಮೋದಿ ಅವರ ಕರ್ನಾಟಕ ಪ್ರವಾಸದ ವೇಳೆ ಭೇಟಿಗೆ ಅವಕಾಶ ಒದಗಿಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ (BJP Yuva Morcha) ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಅವರು ತಿಳಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ನಮೋ ಯುವ ಭಾರತ ಫೆಲೋಶಿಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಕರು ರಾಜಕೀಯಕ್ಕೆ ಬರಬೇಕೆಂಬ ಅಪೇಕ್ಷೆ ಪ್ರಧಾನಿ ನರೇಂದ್ರ ಮೋದಿ ಅವರದು. ಕಾಲೇಜುಗಳಲ್ಲಿ ಇವತ್ತು ಎಲ್ಲೂ ಯಾವುದೇ ಚುನಾವಣೆ ನಡೆಯುತ್ತಿಲ್ಲ. ಯುವಕರು ರಾಜಕೀಯ ಸಂಪರ್ಕದಿಂದ ದೂರು ಇದ್ದಾರೆ ಎಂದು ವಿವರಿಸಿದರು. “ನಮೋ ಯುವ ಭಾರತ ಫೆಲೋಶಿಫ್” ಮುಂದಿನ ಒಂದು, ಒಂದೂವರೆ ತಿಂಗಳ ಕಾಲ ನಡೆಯಲಿದೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವದಲ್ಲಿ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ಯುವಜನತೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ವಿವಿಧ ಯೋಜನೆಗಳು, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಯುವಜನತೆಗೆ ಕಿರುಚಿತ್ರಗಳ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಎಂದು ವಿವರ ನೀಡಿದರು. ಟಾಪ್ 10 ರೀಲ್‍ಗಳಿಗೆ ನರೇಂದ್ರ ಮೋದಿಜೀ ಅವರ ಭೇಟಿಯ ಅವಕಾಶ ಲಭಿಸಲಿದೆ ಎಂದು ಧೀರಜ್ ಮುನಿರಾಜು ತಿಳಿಸಿದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಯುವಕರಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸುವ ಪಕ್ಷ ಬಿಜೆಪಿ ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು ಕಳೆದ 65 ವರ್ಷಗಳಲ್ಲಿ ಮಾಡಿದ ಅವಾಂತರಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿಯ ವಿವಿಧ ಮೋರ್ಚಾಗಳು ಮಾಡಲಿವೆ ಎಂದರು. ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಅವರೂ ವಿವರಣೆ ನೀಡಿದರು.
ಇದನ್ನೂ ಓದಿ : Lok Sabha Election 2024: ಮೈಸೂರು ಬಿಜೆಪಿ ಅಭ್ಯರ್ಥಿಯಾಗಿ ಒಡೆಯರ್? ಹೈಕಮಾಂಡ್ ಮಟ್ಟದಲ್ಲಿ ಭಾರಿ ಚರ್ಚೆ!
ಏನಿದು ರೀಲ್ಸ್ ಸ್ಪರ್ಧೆ? ಹಾಗೆ ಮಾಡಬೇಕು? ಕಾನ್ಸೆಪ್ಟ್ ಏನು?
- ನರೇಂದ್ರ ಮೋದಿ ಅವರ ವಿವಿಧ ಯೋಜನೆಗಳು, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಯುವಜನತೆಗೆ ಕಿರುಚಿತ್ರಗಳ ಸ್ಪರ್ಧೆ ಏರ್ಪಡಿಸಲಾಗುತ್ತಿದೆ.
- 90 ಸೆಕೆಂಡ್‍ಗಳ ರೀಲ್ ಮಾಡಬೇಕು.
- ಮಹಿಳೆ, ಯುವಜನತೆ, ಅನ್ನದಾತ, ಬಡವ ಎಂಬ 4 ವಿಭಾಗ ಮಾಡಿದ್ದು, ಈ ವಿಭಾಗಕ್ಕೆ ಮೋದಿ ಅವರ ಕೊಡುಗೆಯನ್ನು ಬಿಂಬಿಸಬೇಕು.
- ರೀಲ್ ಮಾಡಿ ‘ಮೈ ಫಸ್ಟ್ ವೋಟ್ ಫಾರ್ ನಮೋ’ ಮೂಲಕ ಇನ್‍ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟರ್ ಹ್ಯಾಂಡಲ್‍ನಡಿ ಟ್ಯಾಗ್ ಮಾಡಬೇಕು.
- ಗರಿಷ್ಠ ಲೈಕ್ ಪಡೆಯುವ 10 ರೀಲ್‍ಗಳನ್ನು ಆಯ್ಕೆ ಮಾಡಿ ಮೋದಿಜೀ ಅವರು ಕರ್ನಾಟಕಕ್ಕೆ ಬಂದಾಗ ಅವರನ್ನು ಮುಖತಃ ಭೇಟಿ ಮಾಡಲು ಅಕಾಶ ನೀಡಲಾಗುತ್ತದೆ.
- ಎಲ್ಲ ರೀಲ್‍ಗಳನ್ನು ‘ಬಿಜೆವೈಎಂ ಕರ್ನಾಟಕ’ ಪೇಜಿನಲ್ಲಿ ಪೋಸ್ಟ್ ಮಾಡಲಾಗುತ್ತದೆ.
- ಉತ್ತಮವಾದ ಟಾಪ್ 3 ರೀಲ್‍ಗಳನ್ನು ವಿಜಯೇಂದ್ರರ ಪೇಜ್ ಹಾಗೂ ಇತರ ಗಣ್ಯರ ಪೇಜ್‍ಗಳಲ್ಲಿ ಹಂಚಲಾಗುತ್ತದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ಕಾರ್ಯದರ್ಶಿ ಶ್ರೀಮತಿ ಅಂಬಿಕಾ ಹುಲಿನಾಯ್ಕರ್, ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.