Site icon Vistara News

BK Hariprasad : ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ಶಕ್ತಿ ಪ್ರದರ್ಶನ; ಖಾಕಿ ಚಡ್ಡಿ ಹಾಕಿಕೊಂಡ ಸಮಾಜವಾದಿ ಎಂದು ಗೇಲಿ

BK Hariprasad and CM Siddaramaih

ಬೆಂಗಳೂರು: ತಮಗೆ ಮಂತ್ರಿ ಸ್ಥಾನ ಸಿಗದ ಸಿಟ್ಟಿನಲ್ಲಿ ಕುದಿಯುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರು ಶನಿವಾರ ಅರಮನೆ ಮೈದಾನದಲ್ಲಿ (Palace Grounds) ತಮಗೆ ಅಪಮಾನ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaamaiah) ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು. ತಮಗೆ ಸಚಿವ ಸ್ಥಾನ ಸಿಗದೆ ಇರುವುದು ಅತಿ ಹಿಂದುಳಿದ ವರ್ಗಗಳಿಗೆ (Most Backward Communities) ಮಾಡಿದ ಅಪಮಾನ ಎಂದು ಬಿಂಬಿಸಿರುವ ಹರಿಪ್ರಸಾದ್‌ ಅವರು ನಾರಾಯಣಗುರು ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ (Pranavanda swameeji) ಅವರನ್ನು ಮುಂದಿಟ್ಟುಕೊಂಡು ಶನಿವಾರ ಅರಮನೆ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳೂ ಸೇರಿದಂತೆ ಎಲ್ಲರೂ ಹರಿಪ್ರಸಾದ್‌ ಅವರನ್ನು ಅವಗಣಿಸಲಾಗಿದೆ ಎಂಬ ಮಾತನ್ನೇ ಆಡಿದ್ದು ಸಭೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿತ್ತು.

ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace grounds) ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆ ನಡೆಯಿತು. ಪ್ರಣವಾನಂದ ಸ್ವಾಮಿಯವರು, ಅತಿ ಹಿಂದುಳಿದ ಸಮುದಾಯಗಳ ಹಲವು ಮಠಾಧೀಶರು, ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ಆಂಧ್ರ ಪ್ರದೇಶ ವಸತಿ ಸಚಿವ ಜೋಗಿ ರಮೇಶ್, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ್, ಮಾಜಿ ಸಚಿವ ಶಿವಮೂರ್ತಿ ನಾಯಕ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ನೆಲ ನರೇಂದ್ರಬಾಬು, ಆಮ್‌ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಚಂದ್ರು ಸೇರಿ ಹಲವರು ಭಾಗವಹಿಸಿದ್ದರು.

ಮಾತನಾಡಿದ ಎಲ್ಲರೂ ಬಿ.ಕೆ. ಹರಿಪ್ರಸಾದ್‌ ಅವರಿಗೆ ರಾಜಕೀಯವಾಗಿ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು. ಪ್ರಣವಾನಂದ ಸ್ವಾಮೀಜಿಯವರು ʻನೀವೇ ಎಷ್ಟು ವರ್ಷ ಮುಖ್ಯಮಂತ್ರಿ ಆಗಿರ್ತೀರಿ. ನಾವೇನು ಇಲ್ಲಿ ಕಾದುಕೊಂಡೇ ಸಾಯ್ಬೇಕಾʼʼ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಕೇಳಿದ್ದರು. ಜ್ಞಾನ ಪ್ರಕಾಶ ಸ್ವಾಮೀಜಿ ಅವರು ದಲಿತರು ಯಾಕೆ ಸಿಎಂ ಆಗಬಾರದು ಎಂಬ ಪ್ರಶ್ನೆ ಎತ್ತಿದರು.

ಇದೆಲ್ಲದರ ನಂತರ ಮಾತನಾಡಿದ ಬಿ.ಕೆ. ಹರಿಪ್ರಸಾದ್‌ ಅವರು ಕೂಡಾ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನೇ ಪರೋಕ್ಷವಾಗಿ ಟಾರ್ಗೆಟ್‌ ಮಾಡಿದರು. ಸಿದ್ದರಾಮಯ್ಯ ಅವರು ಒಳಗೆ ಖಾಕಿ ಚಡ್ಡಿ ಹಾಕಿಕೊಂಡ ಸಮಾಜವಾದಿ ಎಂದು ಕೂಡಾ ಅವರು ಆಕ್ಷೇಪಿಸಿದರು.

ಅಧಿಕಾರಕ್ಕೆ ಬಂದ ಮೇಲೆ ನಮ್ಮ ನೆನಪಾಗಲಿಲ್ಲ

ʻʻನಮ್ಮ ಸಮುದಾಯ ಅತಂತ್ರವಾಗಿದೆ. ಇದು ಅತಂತ್ರ ಸಮುದಾಯದ ವೇದಿಕೆʼʼ ಎಂದು ಹೇಳುತ್ತಲೇ ಮಾತು ಆರಂಭಿಸಿದ ಹರಿಪ್ರಸಾದ್‌, ʻʻಚುನಾವಣೆ ಬರುವಾಗ ಘೋಷಣೆ ಮಾಡಿದ್ದೇ ಮಾಡಿದ್ದು. ಅಧಿಕಾರಕ್ಕೆ ಬಂದರೆ ಹಾಗೆ ಮಾಡುತ್ತೇವೆ, ಅಧಿಕಾರ ಕೊಡುತ್ತೇವೆ ಎಂದರು. ಆದರೆ, ಅಧಿಕಾರ ಬಂದ ಮೇಲೆ ಅತೀ ಹಿಂದುಳಿದ ವರ್ಗಗಳು ನೆನಪೇ ಆಗಿಲ್ಲ. ಅಧಿಕಾರ ಸಿಕ್ಕ ತಕ್ಷಣವೇ ಸಮುದಾಯಕ್ಕೆ ಕೊಡಬೇಕಾಗಿರುವುದು ಇನ್ನೂ ಸಿಕ್ಕಿಲ್ಲʼʼ ಎಂದರು ಹೇಳಿದರು. ಜತೆಗೆ ʻʻಸಮುದಾಯದ ಶಕ್ತಿ ಏನು ಎನ್ನುವುದನ್ನು ನಾವೇ ಇನ್ನೂ ತಿಳಿದುಕೊಂಡಿಲ್ಲʼʼ ಎಂದರು.

ಪರಮೇಶ್ವರ್‌ ಸಿಎಂ ಮಾಡಬಹುದಿತ್ತಲ್ವ?

ದಲಿತರು ಯಾಕೆ ಸಿಎಂ ಆಗಬಾರದು ಎಂಬ ಜ್ಞಾನಪ್ರಕಾಶ್‌ ಸ್ವಾಮೀಜಿ ಅವರ ಮಾತಿಗೆ ಉತ್ತರಿಸಿದ ಹರಿಪ್ರಸಾದ್‌ ಅವರು, ʻʻಅತಿ ಹೆಚ್ಚಿನ ಸಮಯ ಡಾ.ಜಿ ಪರಮೇಶ್ವರ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಸಿಎಂ ಮಾಡುವುದಕ್ಕೆ ಎಲ್ಲ ರೀತಿಯ ಅರ್ಹತೆ ಇದ್ದವರು ಅವರು. ಅವರನ್ನು ಸಿಎಂ ಮಾಡುವುದು ಬಿಡಿ, ಹಿಂದೆ ಡಿಸಿಎಂ ಸ್ಥಾನದಿಂದ ಡಿಪ್ರಮೋಟ್ ಮಾಡಲಾಯಿತು. ಅರ್ಹತೆ ಇರುವ ಪರಮೇಶ್ವರ್ ಅವರನ್ನೇ ಸಿಎಂ ಮಾಡಲು ಸಾಧ್ಯವಾಗಿಲ್ಲ ಅಂದರೆ ಇನ್ನು ಸಿಎಂ ಮಾಡ್ತಾರಾʼʼ ಎಂದು ಕೇಳಿದರು.

ʻʻಸಿಎಂ ಬಿಡಿ ಈಗಲೂ ಡಿಸಿಎಂ ಮಾಡುವಾಗ ದಲಿತರನ್ನು ಮಾಡಬಹುದಿತ್ತು, ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡಬಹುದಿತ್ತುʼʼ ಎಂದು ಹರಿಪ್ರಕಾಶ್‌ ಹೇಳಿದರು.

ʻʻನಾನು ಸರ್ಕಾರ ಮಾಡಿದ್ದೇನೆ. ಹೇಗೆ ಬೇಕಾದರೂ‌ ತೀರ್ಮಾನ ಮಾಡ್ತೀನಿ ಅಂದ್ರೆ ಜನರೂ ಕೂಡ ತೀರ್ಮಾನ ಮಾಡ್ತಾರೆʼʼ ಎಂದು ಸಿದ್ದರಾಮಯ್ಯ ಅವರಿಗೆ ನೇರ ಎಚ್ಚರಿಕೆ ನೀಡಿದ ಹರಿಪ್ರಸಾದ್‌, ಶಿಕ್ಷಣ ಕ್ಷೇತ್ರದಲ್ಲಿ ಮಾಫಿಯಾ ಮಾಡಿಕೊಂಡು ಇರುವವರು ಹೆಂಡ ಸಾರಾಯಿ ಬಗ್ಗೆ ಮಾತಾಡ್ತಾರೆ. ರಾಜ್ಯ ನಡೆಯಬೇಕಾದರೆ ೩೬ ಸಾವಿರ ಕೋಟಿ ತೆರಿಗೆ ಕಟ್ಟುವ ಅಬಕಾರಿ ಇಲಾಖೆ ಮುಖ್ಯ ಅನ್ನೋದು ನೆನಪಿರಲಿ. ಸೈಟು ಕಳ್ಳತನ ಮಾಡಿ ಮಾರುವವನು ನನ್ನ ಬಗ್ಗೆ ಮಾತಾಡ್ತಾನೆ. ಆದರೂ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ನಾನುʼʼ ಎಂದು ಹೇಳಿದರು.

ಅರಸು ಕಾರಿನಲ್ಲಿ ಕುಳಿತರೆ ಆಗಲ್ಲ, ಚಿಂತನೆ ಇರಬೇಕು

ʻʻದೇವರಾಜ ಅರಸು ಕಾರಿನಲ್ಲಿ ಕುಳಿತರೆ ನೀವು ದೇವರಾಜ ಅರಸು ಆಗೋದಿಲ್ಲ. ದೇವರಾಜ ಅರಸು ಚಿಂತನೆ ಇರಬೇಕುʼʼ ಎಂದು ನೇರವಾಗಿ ಅಟ್ಯಾಕ್‌ ಮಾಡಿದ ಹರಿಪ್ರಸಾದ್‌ ಅವರು, ʻʻಸ್ಕ್ರೀನಿಂಗ್ ಕಮಿಟಿ ಮೀಟಿಂಗ್ ನಲ್ಲಿ ನಾನು ಅರಸು ಮೊಮ್ಮಗ ಸೂರಜ್ ಹೆಗ್ಡೆಗೆ ಎಂಎಲ್ಸಿ ಮಾಡಿ ಅಂದೆ ಮಾಡಲಿಲ್ಲʼʼ ಎಂದು ಹೇಳಿದರು.

ಪಂಚೆ, ವಾಜ್‌ ಮತ್ತು ಖಾಕಿ ಚಡ್ಡಿ: ಹರಿಪ್ರಸಾದ್‌ ಆಕ್ರೋಶ

ಸಿದ್ದರಾಮಯ್ಯ ಅವರ ಹೆಸರು ಹೇಳದೆ ಇದ್ದರೂ ಮಾತು ಮಾತಿಗೂ ಸಿಎಂ ಅವರನ್ನು ತನ್ನ ಮೊನಚು ಮಾತುಗಳಿಂದ ಖಂಡಿಸಿದ ಹರಿಪ್ರಸಾದ್‌, ʻʻಹಿಂದಿನ ಯಾವ ಸಿಎಂಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಯಾರೂ ಜಾತಿ ರಾಜಕಾರಣ ಮಾಡಲಿಲ್ಲʼʼ ಎಂದರು.

ʻʻಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಅಂತ ಹೇಳಿದರೆ ಆಗೋದಿಲ್ಲʼʼ ಎಂದು ಸಿದ್ದರಾಮಯ್ಯ ಅವರ ಹ್ಯುಬ್ಲೊಟ್‌ ವಾಚ್‌ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪ ಮಾಡಿದರು.

ಪ್ರಣವಾನಂದ ಸ್ವಾಮೀಜಿ ಹೇಳಿದ್ದೇನು?

ʻʻಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವ ಸಮುದಾಯ ಅಲ್ಲ. ಈ ರಾಜ್ಯಕ್ಕೆ ಕೊಡುಗೆ ಕೊಟ್ಟ ಸಮುದಾಯ ಅದು. ಆದರೆ ಆ ಸಮುದಾಯದ ನಾಯಕರನ್ನು ಇಂದು ಷಡ್ಯಂತ್ರದಿಂದ ತುಳಿಯಲಾಗಿದೆ. ದೇವರಾಜು ಅರಸು ಸಿಎಂ ಆದಾಗ ಬಂಗಾರಪ್ಪ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಾರದು ಅಂತ ದೆಹಲಿಯಿಂದ ಪತ್ರ ಬರುತ್ತದೆ. ಆದರೂ ದೇವರಾಜ್ ಅರಸು ಅವರು ಬಂಗಾರಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಂಡರು. ಆದರೆ ಈಗ ಇಲ್ಲಿಂದ ಲೆಟರ್ ಹೋಗುತ್ತದೆ. ಇಂಥವರಿಗೆ ಸಚಿವ ಸ್ಥಾನ ಕೊಡಬಾರದು ಅಂತ ಇಲ್ಲಿಂದ ದೆಹಲಿಗೆ ಪತ್ರ ಹೋಗುತ್ತದೆ. ಪರಿಸ್ಥಿತಿ ಹೇಗೆ ಬದಲಾಗಿದೆ ನೋಡಿʼʼ ಎಂದು ಬಿ.ಕೆ. ಹರಿಪ್ರಸಾದ್‌ ಅವರ ಹೆಸರನ್ನು ಹೇಳದೆಯೇ ಸ್ವಾಮೀಜಿ ನುಡಿದರು.

Exit mobile version