Site icon Vistara News

BK Hariprasad : ಗೋಧ್ರಾ ಹೇಳಿಕೆ ಸಮರ್ಥಿಸಿದ ಹರಿಪ್ರಸಾದ್‌; ಮಂಪರು ಪರೀಕ್ಷೆ ಸವಾಲಿಗೆ ಸಿದ್ಧ

BK Hariprasad Godhra Challenge

ನವ ದೆಹಲಿ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಲೋಕಾರ್ಪಣೆಯ (Rama Mandir) ಆಸುಪಾಸಿನಲ್ಲಿ ಗೋದ್ರಾ ಮಾದರಿಯ ದಾಳಿ (Godhra type attack) ನಡೆಯುವ ಸಾಧ್ಯತೆಗಳಿವೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾದ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (BK Hariprasad) ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಮಂಪರು ಪರೀಕ್ಷೆಯ (Narco Test) ಬಿಜೆಪಿ ಸವಾಲು ಸ್ವೀಕರಿಸುವುದಾಗಿ ಹೇಳಿದ್ದಾರೆ. ಜತೆಗೆ ಕೆಲವೊಂದು ಷರತ್ತು ವಿಧಿಸಿದ್ದಾರೆ.

ಹರಿಪ್ರಸಾದ್‌ ಅವರಿಗೆ ಗೋಧ್ರಾ ಮಾದರಿ ದಾಳಿಯ ಬಗ್ಗೆ ಕೆಲವೊಂದು ನಿರ್ದಿಷ್ಟ ಮಾಹಿತಿಗಳು ಗೊತ್ತಿರುವಂತೆ ಕಾಣುತ್ತಿದೆ. ಹೀಗಾಗಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಹೇಳಿತ್ತು. ಬಿಜೆಪಿ ನಾಯಕರ ಈ ಸವಾಲನ್ನು ತಾನು ಸ್ವೀಕರಿಸಲು ಸಿದ್ಧ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಆದರೆ, ತನ್ನ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡಾ ಮಂಪರು ಪರೀಕ್ಷೆಗೆ ಒಳಪಡಬೇಕು ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ 40 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಹಿರಿಯ ಬಿಜೆಪಿ ನಾಯಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅರೋಪ ಮಾಡಿದ್ದಾರೆ. ಇದು ಕೂಡಾ ಗಂಭೀರ ವಿಷಯವಲ್ಲವೇ? ಹೀಗಾಗಿ ನನ್ನನ್ನು, ಯತ್ನಾಳ್‌ ಮತ್ತು ವಿಜಯೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದರು ಬಿ.ಕೆ ಹರಿಪ್ರಸಾದ್‌.

ಮೊದಲನೇ ಬಾರಿಗೆ ಸಿ.ಟಿ ರವಿ ಅವರು ಸತ್ಯ ಹೇಳಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವುದು ಸಿ.ಟಿ ರವಿ ಅವರ ಹೇಳಿಕೆ. ಹೀಗಾಗೀ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದಿರುವ ಬಿ.ಕೆ. ಹರಿಪ್ರಸಾದ್‌, ಈ ಮಂಪರು ಪರೀಕ್ಷೆಗಳು ಮಂಪರು ಪರೀಕ್ಷೆ ಲೈವ್ ಆಗಿ ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂಬ ಷರತ್ತು ವಿಧಿಸಿದ್ದಾರೆ.

ವಿರೋಧ ಪಕ್ಷದ ನಾಯಕರಾದ ಆರ್‌. ಅಶೋಕ್‌ ಅವರು ನನ್ನನ್ನು ಬಂಧಿಸಬೇಕು ಎಂದು ಹೇಳಿದ್ದಾರೆ. ಆದರೆ, ನನ್ನ ಬಂಧನಕ್ಕೂ ಮುನ್ನ ಇದೇ ಅಶೋಕ್‌ ಅವರು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಯಾಕೆ ಅರೆಸ್ಟ್ ಆಗಿದ್ದರು ಅಂತಾ ಮೊದಲು ಹೇಳಿ ಬಿಡಲಿ ಎಂದು ಹೇಳಿದರು.

ʻʻನಾನು ಯಾವುದೇ ಕ್ರಿಮಿನಲ್‌ ಕೇಸ್, ಭ್ರಷ್ಟಾಚಾರದ ಆರೋಪ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ. ರಾಜ್ಯದಲ್ಲಿ ಜನರು ಶಾಂತವಾಗಿರಬೇಕು ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕೊಡುವುದ್ರಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕಾಗಿ ಮಂಪರು ಪರೀಕ್ಷೆ ಆಗಲಿ ನಾನು ಸಿದ್ಧವಾಗಿದ್ದೇನೆʼʼ ಎಂದು ಹರಿಪ್ರಸಾದ್‌ ಹೇಳಿದರು.

ನಾವು ಲೋಕಸಭೆ ಚುನಾವಣೆ ಉದ್ದೇಶದಿಂದ ಭಾರತ್ ಜೋಡೊ ನ್ಯಾಯ್ ಯಾತ್ರೆ ಮಾಡುತ್ತಿಲ್ಲ. ಪಕ್ಷ ಮೊದಲ ಹಂತದಲ್ಲೇ ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ ಎಂದೇ ಹೇಳಿದೆ. ದ್ವೇಷ ಮತ್ತು ಅಸೂಯೆಯ ವಾತಾವರಣ ಸರಿಪಡಿಸಲು ಯಾತ್ರೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದರು.

ʻʻಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಗ್ರಸ್ತ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ. ಲಕ್ಷದ್ವೀಪ ಸೇರಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡ್ತಾರೆ. ಜನರ ನೋವಿನ ಬಗ್ಗೆ ಬಿಜೆಪಿ ಅವರಿಗೆ ಅರಿವು ಇಲ್ಲ. ಅವರು ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಗೊತ್ತಿಲ್ಲ.”” ಎಂದು ಹೇಳಿದರು ಹರಿಪ್ರಸಾದ್‌.

ʻʻಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ನಲ್ಲಿ ಏನಾದರೂ ಘಟನೆ ಆದರೆ ಮಾತನಾಡುತ್ತಾರೆ. ಆದರೆ, ಮಣಿಪುರದ ಬಗ್ಗೆ ಮಾತನಾಡುವುದಿಲ್ಲʼʼ ಎಂದು ಹರಿಪ್ರಸಾದ್‌ ಪ್ರಶ್ನೆ ಮಾಡಿದರು.

ಜನಗಣತಿ ವರದಿ ಸಲ್ಲಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರದಿ ಅಂತಿಮ ಆಗಿದೆ. ಅದನ್ನು ಶೀಘ್ರವಾಗಿ ಬಹಿರಂಗ ಗೊಳಿಸಬೇಕು. ಸಾಧಕ ಬಾಧಕ ಪರಿಶೀಲಿಸಿ ಬದಲಾಯಿಸಬಹುದು ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಿಸುವ ಹಕ್ಕು ಇದೆ, ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದು ಬಿ ಕೆ ಹರಿಪ್ರಸಾದ್ ಹೇಳಿಕೆ ನೀಡಿದರು.

Exit mobile version