Site icon Vistara News

ದೆಹಲಿಯತ್ತ ಹೊರಟ ಬಸವರಾಜ ಬೊಮ್ಮಾಯಿ: ಸಂಭಾವ್ಯ ಹೊಸ ಸಚಿವರ ಪಟ್ಟಿ ಸಿದ್ಧ; ಹಾಲಿ ಸಚಿವರಲ್ಲಿ ಆತಂಕ

cabinet expansion may happen soon

ಬೆಂಗಳೂರು: ಮಹಾರಾಷ್ಟ್ರ ಗಡಿಯೊಂದಿಗೆ ನಡೆದಿರುವ ಕಾನೂನು ವ್ಯಾಜ್ಯದ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನ ನವದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಹಾಗೂ ಬುಧವಾರದ ಪ್ರವಾಸದ ವೇಳೆ ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅನೇಕ ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಕುರಿತು ಮಾತುಕತೆ ನಡೆಸಲು ತಮ್ಮ ಬಳಿ ಎರಡು ಪಟ್ಟಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಒಯ್ಯುತ್ತಿದ್ದಾರೆ. ಸಂಪುಟ ವಿಸ್ತರಣೆಗೆ ಮಾತ್ರ ಒಪ್ಪಿದರೆ, ಹೊಸದಾಗಿ ಸೇರ್ಪಡೆ ಆಗುವ ಐವರ ಹೆಸರು, ಸಂಪುಟ ಪುನಾರಚನೆಗೆ ಒಪ್ಪಿದರೆ ಹೊಸಬರ ಜತೆಗೆ ಕೈಬಿಡಬೇಕಾದ ಸಚಿವರ ಪಟ್ಟಿಯೊಂದಿಗೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರ ಅವಧಿ ಹಾಗೂ ನಂತರ ಬೊಮ್ಮಾಯಿ ಅವಧಿಯಲ್ಲೂ ಸಚಿವರಾದ ಕೆಲವರನ್ನು ಚುನಾವಣೆ ಸಮಯದಲ್ಲಿ ಸಂಘಟನೆಗೆ ನಿಯೋಜನೆ ಮಾಡಲು ಚಿಂತನೆ ನಡೆಸಲಾಗಿದೆ.

ಸಂಪುಟ ಪುನಾರಚನೆ ಆದರೆ, ಹಿರಿಯ ಸಚಿವರಾದ ವಿ.ಸೋಮಣ್ಣ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಅಂಗಾರ, ಶಶಿಕಲಾ ಜೊಲ್ಲೆ ಅವರುಗಳಿಗೆ ಕೊಕ್‌ ನೀಡುವ ಸಾಧ್ಯತೆಯಿದೆ.

ಇವರ ಸ್ಥಾನಕ್ಕೆ ವಿವಿಧ ಲೆಕ್ಕಾಚಾರಗಳಲ್ಲಿ ಹತ್ತು ಜನರನ್ನು ಸಚಿವರಾಗಿಸುವ ಸಾಧ್ಯತೆಯಿದೆ. ಅನೇಕ ದಿನಗಳಿಂದ ಬಾಕಿ ಉಳಿದಿರುವ ರಮೇಶ್ ಜಾರಕಿಹೊಳಿ, ಕೆ.ಎಸ್. ಈಶ್ವರಪ್ಪ ( ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರರಕಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಹಿನ್ನೆಲೆ), ಸಿ.ಪಿ. ಯೋಗೀಶ್ವರ್(ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಚುರುಕುಗೊಳಿಸಲು), ಬಸನಗೌಡ ಪಾಟೀಲ್ ಯತ್ನಾಳ್ (ಪಂಚಮಸಾಲಿ), ರಾಜುಗೌಡ (ಎಸ್‌ಟಿ), ಪೂರ್ಣಿಮಾ ಶ್ರೀನಿವಾಸ್‌(ಒಬಿಸಿ), ಪ್ರೀತಂಗೌಡ(ಒಕ್ಕಲಿಗ), ರಾಮದಾಸ್ (ಬ್ರಾಹ್ಮಣ) ಸಚಿವರಾಗಿ ಮಾಡಬಹುದು ಎಂದು ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ.

ಆದರೆ ಕೇವಲ ಸಂಪುಟ ವಿಸ್ತರಣೆ ಸಾಕು ಎಂದು ವರಿಷ್ಠರು ಬಯಸುವುದಾದರೆ ರಮೇಶ್ ಜಾರಕಿಹೊಳಿ, ಕೆ.ಎಸ್. ಈಶ್ವರಪ್ಪ, ಸಿ.ಪಿ. ಯೋಗೀಶ್ವರ್‌, ಬಸನಗೌಡ ಪಾಟೀಲ್ ಯತ್ನಾಳ್, ರಾಜುಗೌಡ, ರವಿಕುಮಾರ್, ಪಿ.ರಾಜೀವ್ ಅವರುಗಳಲ್ಲಿ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಸೇರಿ ಈ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ವರಿಷ್ಠರ ಮುಂದೆ ಇಡಲಾಗುತ್ತದೆ. ವರಿಷ್ಠರೂ ತಮ್ಮ ಪಟ್ಟಿಯನ್ನು ಹೊಂದಿರುವ ಸಾಧ್ಯತೆ ಇದೆ. ಅವರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ.

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಅವರಿನ್ನೂ ಸಮಯ ನೀಡಿಲ್ಲ. ಸಮಯ ನೀಡಿದರೆ ಭೇಟಿಯಾಗುತ್ತೇನೆ ಎಂದಿದ್ದಾರೆ.

ಸದ್ಯ ಪಟ್ಟಿಯನ್ನು ವರಿಷ್ಠರಿಗೆ ನೀಡಿದರೂ ಈಗಲೇ ತೀರ್ಮಾನ ಆಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಸದ್ಯ ಗುಜರಾತ್‌ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಗೃಹಸಚಿವ ಅಮಿತ್‌ ಷಾ, ಸ್ವತಃ ಜೆ.ಪಿ. ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ನಿರತರಾಗಿದ್ದಾರೆ. ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ಚುನಾವಣೆ ಫಲಿತಾಂಶಗಳು ಡಿಸೆಂಬರ್‌ 8ರಂದು ಹೊರಬೀಳಲಿವೆ. ಅಲ್ಲಿ ರಾಜಕೀಯ ಸ್ಥಿತಿಗತಿಗಳನ್ನು ನೋಡಿಕೊಂಡು ತಕ್ಷಣವೇ ಇಡೀ ಗಮನ ಕರ್ನಾಟಕದ ಕಡೆಗೆ ಹೊರಳಲಿದೆ. ಯಾವಾಗ ವರಿಷ್ಠರು ತೀರ್ಮಾನ ಮಾಡಿ ಅಂತಿಮ ಪಟ್ಟಿ ಕಳಿಸಿಕೊಡುತ್ತಾರೆ ಎನ್ನುವುದು ಕಾದುನೋಡಬೇಕು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ | Cabinet Expansion | ಗುಜರಾತ್​ ಚುನಾವಣೆ ಬಳಿಕ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಎಂದ ಸಿಎಂ ಬೊಮ್ಮಾಯಿ

Exit mobile version