ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಪುತ್ರ, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆಯ್ಕೆಯಾಗುತ್ತಿದ್ದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಸಖತ್ ಆ್ಯಕ್ಟಿವ್ ಆಗಿದ್ದಾರೆ. ಅವರೀಗ “ವಿಶ್ವಾಸ”ದ ನಡೆಯನ್ನು ಇಡುತ್ತಾರೆ. ಅಂದರೆ, ಎಲ್ಲ ಬಣದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಸಂಬಂಧ ವಿರೋಧಿ ಬಣ ಎಂದು ಗುರುತಿಸಿಕೊಂಡ ಕೆಲವು ಹಿರಿಯ ಪ್ರಮುಖರಿಗೆ ಕರೆ ಮಾಡಿ ಸಹಕಾರ ನೀಡುವಂತೆ ಕೋರಿದ್ದಾರೆ.
ಈಗಾಗಲೇ ಬಿಜೆಪಿಯಿಂದ ಬರ ಅಧ್ಯಯನ ಪ್ರವಾಸದಲ್ಲಿ ನಿರತರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಅಲ್ಲಿಂದಲೇ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದ್ದಾರೆ. ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷವು ನೂತನ ಜವಾಬ್ದಾರಿಯನ್ನು ನೀಡಿದ್ದು, ಅದನ್ನು ನಿಭಾಯಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಪ್ರಮುಖರಿಗೆ ಕರೆ ಮಾಡಿ ಕೋರಿದ್ದಾರೆ.
ಇದನ್ನೂ ಓದಿ: Karnataka Weather : ಸದ್ಯಕ್ಕೆ ಮಳೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ; ಬಿಸಿಲೇ ಎಲ್ಲ, ಚಳಿ ಇಲ್ಲವೆಂದೇನಿಲ್ಲ!
ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹಾಗೂ ವಿ. ಸೋಮಣ್ಣ (V Somanna) ಅವರಿಗೆ ಕರೆ ಮಾಡಿದ ಬಿ.ಎಸ್. ಯಡಿಯೂರಪ್ಪ, ಪಕ್ಷ ಸಂಘಟನೆ ಈಗ ಮುಖ್ಯವಾಗಿದೆ. ಮುಂದೆ ಲೋಕಸಭಾ ಚುನಾವಣೆ ಎದುರಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಒಟ್ಟಾಗಿರೋಣ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ದವಳಗಿರಿ ನಿವಾಸದತ್ತ ನಾಯಕರು, ಕಾರ್ಯಕರ್ತರ ದಂಡು
ಹಲವು ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದರೂ ಆಯ್ಕೆ ಮಾತ್ರ ಆಗುತ್ತಿರಲಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ಈಗ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವ ಬಿಜೆಪಿ ವರಿಷ್ಠರ ನಡೆಯನ್ನು ಹಲವರು ಕೊಂಡಾಡಿದ್ದಾರೆ.
ಬಿ.ವೈ. ವಿಜಯೇಂದ್ರ ಭೇಟಿಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಆಗಮಿಸಿದ್ದರು. ಬಿ.ವೈ. ವಿಜಯೇಂದ್ರ ಅವರು ಇದೇ ವೇಳೆ ತಮ್ಮ ದವಳಗಿರಿ ನಿವಾಸವನ್ನು ತಲುಪಿದ್ದಾರೆ.
ಪಕ್ಷದ ಶಕ್ತಿ ಹೆಚ್ಚಿದೆ: ಸಂಸದ ಜಿ.ಎಸ್. ಬಸವರಾಜು
ಬಿ.ವೈ. ವಿಜೇಯೇಂದ್ರ ಆಯ್ಕೆಯಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಜಾಸ್ತಿ ಆಗಿದೆ. ಅವರು ಒಳ್ಳೆಯ ಸಂಘಟನೆಗಾರ. ಚುನಾವಣೆ ಗೆಲ್ಲಿಸಿದ ಅನುಭವ ಇದೆ. ಮುಂದೆ ಸಿಎಂ ಆಗುವ ಅರ್ಹತೆ ಸಹ ಅವರಿಗೆ ಇದೆ. ಮುಂದಿನ ಲೋಕಾಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ವಿಚಾರವನ್ನು ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ತುಮಕೂರು ಸಂಸದ ಜಿ.ಎಸ್. ಬಸವರಾಜು ಹೇಳಿದರು.
ವರಿಷ್ಠರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ: ಮುರುಗೇಶ್ ನಿರಾಣಿ
ವರಿಷ್ಠರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಿಜಯೇಂದ್ರ ಒಳ್ಳೆಯ ಸಂಘಟನಗಾರ. ಈ ಹಿಂದೆ ಹಲವು ಟಾಸ್ಕ್ಗಳನ್ನು ನಿಭಾಯಿಸಿದ್ದರು. ಉಪ ಚುನಾವಣೆಗಳನ್ನು ಗೆಲ್ಲಿಸಿದ್ದರು. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಿರಿಯರು ಸಂಪೂರ್ಣ ಸಹಕಾರ ಕೊಡುತ್ತೇವೆ. ಒಬ್ಬರೋ ಇಬ್ಬರಿಗೂ ಅಸಮಾಧಾನ ಇರಬಹುದು. ಅವರನ್ನು ಸಹ ಸಹಮತಕ್ಕೆ ತೆಗೆದುಕೊಂಡು ಹೋಗುಲಾಗುವುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಹೈಕಮಾಂಡ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ: ಬಿ.ವೈ. ವಿಜಯೇಂದ್ರ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಪಿ.ಸಿ. ಮೋಹನ್, ಹೈಕಮಾಂಡ್ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ವಿಜಯೇಂದ್ರ ಅವರು ಪಕ್ಷದಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರು ಸಂಘಟನೆಯಲ್ಲಿ ಬಹಳ ಚತುರರಿದ್ದಾರೆ. ಅವರಿಗೆ ಕೊಟ್ಟ ಬೈ ಎಲೆಕ್ಸನ್ ಟಾಸ್ಕ್ಗಳನ್ನು ಉತ್ತಮವಾಗಿ ನಿಭಾಯಿಸಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯು ಅವರ ನೇತೃತ್ವದಲ್ಲಿ ನಡೆಯಲಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನವನ್ನು ಗೆಲ್ಲುತ್ತೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಲವರ ಆಸೆಗಳು ಸಹಜ. ಹಾಗಂತ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ವಿಜಯೇಂದ್ರ ಅವರಿಗಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: BY Vijayendra : ವಿಜಯೇಂದ್ರಗೆ ಭಾರಿ ಸವಾಲಿದೆ ಎಂದು ತಲೆ ಮೇಲೆ ಕೈಹೊತ್ತು ನಡೆದ ಸಿ.ಟಿ. ರವಿ!
ಇನ್ನು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಲು ಯಡಿಯೂರಪ್ಪ ಅವರ ದವಳಗಿರಿ ನಿವಾಸಕ್ಕೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಆಗಮಿಸಿ ಶುಭಾಶಯ ಸಲ್ಲಿಸಿದ್ದಾರೆ.