Site icon Vistara News

ಗುಜರಾತ್‌ ಸಿಎಂ ಆಯ್ಕೆ ವೀಕ್ಷಕರಾಗಿ ಬಿ.ಎಸ್‌. ಯಡಿಯೂರಪ್ಪ: ಅಹಮದಾಬಾದ್‌ಗೆ ಹೊರಟ ಮಾಜಿ ಸಿಎಂ

BS yediyurappa appointed as observer for gujarat leslislative party leader selection

ಬೆಂಗಳೂರು: ದಾಖಲೆಯ ಶಾಸಕರನ್ನು ಹೊಂದುವ ಮೂಲಕ ಜಯಭೇರಿ ಬಾರಿಸಿರುವ ಗುಜರಾತ್‌ ರಾಜ್ಯದ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ವೀಕ್ಷಕರಾಗಿ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಸಮಿತಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರನ್ನು ನೇಮಿಸಲಾಗಿದೆ.

ಶಾಸಕಾಂಗ ಸಮಿತಿ ನಾಯಕರನ್ನು ಆಯ್ಕೆ ಮಾಡಲು ಒಟ್ಟು ಮೂವರು ನಾಯಕರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ನೇಮಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಕೇಂದ್ರ ಸಚಿವ ಅರ್ಜುನ್‌ ಮುಂಡಾ ಹಾಗೂ ಯಡಿಯೂರಪ್ಪ ವೀಕ್ಷಕರಾಗಿರಲಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಹಾಲಿ ಸಿಎಂ ಭೂಪೇಂದ್ರ ಪಟೇಲ್‌ ಅವರನ್ನು ಹಾಡಿ ಹೊಗಳಿದ್ದರು. ಹಾಗಾಗಿ ಸದ್ಯ ಭೂಪೇಂದ್ರ ಪಟೇಲ್‌ ಅವರನ್ನೇ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.

ಗುಜರಾತ್‌ನ ಅಹಮದಾಬಾದ್‌ಗೆ ತೆರಳಿದ ಯಡಿಯೂರಪ್ಪ, ಶನಿವಾರವೂ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ವಾಪಸಾಗುವ ದಿನಾಂಕವನ್ನು ಮುಕ್ತವಾಗಿರಿಸಲಾಗಿದ್ದು, ರಾಜ್ಯ ರಾಜಕಾರಣದ ಕುರಿತೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಹಮದಾಬಾದ್‌ಗೆ ಹೊರಡುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಗುಜರಾತ್ ಸಿಎಂ ಆಯ್ಕೆ ಸಂಬಂಧ ಸಮಿತಿ ಮಾಡಿದ್ದಾರೆ. ನೀವೂ ಬರಬೇಕು ಅಂತ ನನಗೆ ಕರೆ ಬಂತು. ಹೀಗಾಗಿ ಅಹಮದಾಬಾದ್‌ಗೆ ಹೊರಟಿದ್ದೇನೆ. ಶನಿವಾರ ಮುಗಿಸಿ ಭಾನುವಾರ ವಾಪಸ್ ಬರುತ್ತೇನೆ ಎಂದರು.

ತುಮಕೂರು ಜಿಲ್ಲೆಯಲ್ಲಿ ನಡೆದ ಎರಡು ಜನ ಸಂಕಲ್ಪ ಯಾತ್ರೆಗೆ ಗೈರಾಗಿದ್ದ ಕುರಿತು ಪ್ರತಿಕ್ರಿಯಿಸಿ, ಜನ ಸಂಕಲ್ಪ ಯಾತ್ರೆಗೆ ಗೈರಾಗುವ ಪ್ರಶ್ನೆಯೇ ಇಲ್ಲ. ಅನಿವಾರ್ಯವಾಗಿ ಇವತ್ತು ಅಹಮದಾಬಾದ್‌ಗೆ‌ ಹೊರಟಿದ್ದೇನೆ. ಅಲ್ಲಿಂದ ವಾಪಸ್ ಬಂದ ಮೇಲೆ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದರು.

ಗಡಿ ವಿಚಾರದಲ್ಲಿ ಅಮಿತ್ ಶಾಗೆ ಮಹಾರಾಷ್ಟ್ರ ಸಂಸದರಿಂದ ದೂರು ವಿಚಾರದಲ್ಲಿ ಪ್ರತಿಕ್ರಿಯಿಸಿ, ಅಹಮದಾಬಾದ್‌ಗೆ ಹೋಗುತ್ತಿದ್ದೇನೆ. ಗಡಿ ವಿಚಾರದ ಬಗ್ಗೆ ವರಿಷ್ಟರ ಜತೆ ಮಾತನಾಡುತ್ತೇನೆ. ನೆಲ ಜಲ‌ ಗಡಿ ಭಾಷೆ ವಿಚಾರದಲ್ಲಿ ರಾಜಿ ಆಗುವುದಿಲ್ಲ. ಯಾರು ಯಾರಿಗೇ ದೂರು ಕೊಟ್ಟರು ಎನ್ನುವುದು ನಮಗೆ ಸಂಬಂಧ ಇಲ್ಲ. ನಮ್ಮ ರಾಜ್ಯದ ಹಿತವನ್ನು ಕಾಪಾಡುವುದು ಮುಖ್ಯ. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.

ವಿವಿಧ ಸಮುದಾಯಗಳು ಮೀಸಲಾತಿ ಬೇಡಿಕೆ ವಿಚಾರದಲ್ಲಿ ಮಾತನಾಡಿ, ಮೀಸಲಾತಿಗೆ ಹಲವರು ಬೇಡಿಕೆ ಮುಂದಿಡುತ್ತಿದ್ದಾರೆ. ಮೀಸಲಾತಿ ಕೊಡಲು ಏನು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತಿದ್ದೇವೆ. ಇವೆಲ್ಲ ಸಹಜ ಸಂಗತಿಗಳು. ಮುಂದೆ ನೋಡೋಣ ಎಂದರು.

ಇದನ್ನೂ ಓದಿ | Gujarat Election Results | ಗುಜರಾತ್‌ ಚುನಾವಣೆಯಲ್ಲಿ ಸೃಷ್ಟಿಯಾದ ದಾಖಲೆಗಳ ರಾಶಿ

Exit mobile version