ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್ ಹಸ್ತ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿಯಿಂದ ಕೆಲವು ಹಾಲಿ ಹಾಗೂ ಮಾಜಿ ಶಾಸಕರು ಪಕ್ಷ ಬಿಡುತ್ತಾರೆ ಎಂಬ ಬಗ್ಗೆಯೂ ಸುದ್ದಿಯಾಗಿತ್ತು. ಅಲ್ಲದೆ, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ (BJP Politics) ಎಂಬಂತೆ ಚರ್ಚೆ ಹುಟ್ಟಿಕೊಂಡ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅಖಾಡಕ್ಕೆ ಧುಮುಕಿದ್ದರು. ಈಗ ಬಿಜೆಪಿ ಕೋರ್ ಕಮಿಟಿ ಸಭೆ (BJP core committee meeting) ನಡೆಸಿ, ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಆಗುತ್ತಿರುವ ತಾತ್ಸಾರದ ವಿರುದ್ಧ ಕೆಂಡಕಾರಿದ್ದಾರೆ. ಆಡಳಿತ ಪಕ್ಷಕ್ಕೆ ನಾವೇ ಆಹಾರವಾಗುವುದು ಎಂದರೆ ಏನು? ಅವರ ವೈಫಲ್ಯ ಮುಚ್ಚಿಕೊಳ್ಳಲು ಆಪರೇಷನ್ ಭೂತವನ್ನು ಛೂ ಬಿಟ್ಟಿದ್ದಾರೆ. ಇನ್ನಾದರೂ ಸಜ್ಜಾಗಿ, ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಿ, ಈಗ ಸರ್ಕಾರದ ಚಳಿ ಬಿಡಿಸುವ ಕಾಲ ಬಂದಿದೆ. ಸರ್ಕಾರದ ವೈಫಲ್ಯವನ್ನು 224 ಕ್ಷೇತ್ರದಲ್ಲೂ ಜನರಿಗೆ ಮುಟ್ಟಿಸಲು ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯು ಕೆಲವು ಗಂಟೆಗಳ ಕಾಲ ನಡೆದಿದ್ದು, ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಂಭೀರ ಚರ್ಚೆ ಮಾಡಲಾಗಿದೆ. ಆಪರೇಷನ್ ಹಸ್ತದ ಬಗ್ಗೆ ಮುಖ್ಯವಾಗಿ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ನಾವಿನ್ನು ಸುಮ್ಮನೆ ಕೂರುವಂತಿಲ್ಲ. ಕಾಂಗ್ರೆಸ್‌ಗೆ ತಿರುಗೇಟು ಕೊಡಬೇಕು. ಈಗ ಕಾಂಗ್ರೆಸ್ ಪಕ್ಷದ ನಾಯಕರು ಯಾರನ್ನು ಸಂಪರ್ಕ ಮಾಡಿದ್ದಾರೋ ಅವರನ್ನು ಸಮಾಧಾನ ಮಾಡುವ ಕೆಲಸ ನಮ್ಮಿಂದ ಆಗಬೇಕು. ಅದನ್ನು ಯಾವ ನಿಟ್ಟಿನಲ್ಲಿ ಮಾಡಬೇಕು ಎಂಬ ಬಗ್ಗೆ ಈ ವೇಳೆ ಚರ್ಚೆ ನಡೆದಿದೆ.
ಇದನ್ನೂ ಓದಿ: Operation Hasta : ಸಸ್ಪೆಂಡ್ ಮಾಡಿದಾಕ್ಷಣ ಎಲ್ಲವೂ ಬದಲಾಗಲ್ಲ: ಎಸ್.ಟಿ. ಸೋಮಶೇಖರ್ ಖಡಕ್ ರಿಯಾಕ್ಷನ್
ಇನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾವು ಬೇರೆ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಬೇಕು. ಪ್ರಮುಖ ನಾಯಕರು ಯಾರೂ ಆ್ಯಕ್ಟಿವ್ ಆಗಿ ಸಂಘಟನೆ ಮಾಡುತ್ತಿಲ್ಲ. ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಗರಂ ಆಗಿದ್ದರು ಎಂದು ತಿಳಿದುಬಂದಿದೆ.
ಕಾಂಗ್ರೆಸ್‌ನವರು ನಮ್ಮನ್ನು ದಿಕ್ಕು ತಪ್ಪಿಸಲೆಂದೇ ಆಪರೇಷನ್ ಹಸ್ತ ವಿಚಾರವನ್ನು ಹರಿಬಿಟ್ಟಿದ್ದಾರೆ. ಒಂದಿಬ್ಬರ ಅಸಮಾಧಾನವನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡಬೇಕಾ? ಪ್ರತಿಪಕ್ಷ ಎಂದರೆ ಹೇಗಿರಬೇಕು? ಎಂಬ ಬಗ್ಗೆ ಬಿ.ಎಸ್. ಯಡಿಯೂರಪ್ಪ ಕಿವಿ ಮಾತು ಹೇಳಿದ್ದಾರೆ.
ಕಾವೇರಿ ವಿಚಾರ ಕೈಗೆತ್ತಿಕೊಳ್ಳುವಲ್ಲಿ ವಿಳಂಬ
ಕಾವೇರಿ ವಿಷಯ ಕೇವಲ ಹಳೇ ಮೈಸೂರು ಭಾಗಕ್ಕೆ ಮಾತ್ರ ಸಿಮೀತವಲ್ಲ. ಅದನ್ನು ಬೇಗ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಪಕ್ಷ ಒಂದು ನಿಲುವು ತೆಗೆದುಕೊಳ್ಳುವ ವಿಚಾರದಲ್ಲಿ ತಡ ಮಾಡಿದೆ. ಕಾವೇರಿ ವಿಚಾರ ಹತ್ತು ದಿನಗಳ ಹಿಂದೆ ಕೈಗೆತ್ತಿಕೊಂಡಿದ್ದರೆ ಆಪರೇಷನ್ ಹಸ್ತ ಸುದ್ದಿಯೇ ಆಗುತ್ತಿರಲಿಲ್ಲ. ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ. ಸರ್ಕಾರದ ವೈಫಲ್ಯಗಳನ್ನು ಇಟ್ಟುಕೊಂಡು 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆ ಮಾಡಿ ಎಂದು ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದರು.
ಇದನ್ನೂ ಓದಿ: Gruha Lakshmi Scheme : ಆಗಸ್ಟ್ 30ಕ್ಕೆ ಗೃಹಲಕ್ಷ್ಮಿ ದುಡ್ಡು ಬರುತ್ತೆ, ನಿಮ್ಗೂ ಹಣ ಬೇಕೆಂದ್ರೆ ತಕ್ಷಣವೇ ಹೀಗೆ ಮಾಡಿ!
ಯಾರು ಯಾರು ಭಾಗಿ
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಕೇಂದ್ರ ಮಾಜಿ ಸಚಿವ ಸದಾನಂದಗೌಡ, ಮಾಜಿ ಸಚಿವರಾದ ಸಿ.ಟಿ ರವಿ, ಗೋವಿಂದ ಕಾರಜೋಳ, ಶ್ರೀರಾಮುಲು, ಆರ್. ಅಶೋಕ್, ಅಶ್ವಥ್ ನಾರಾಯಣ, ಕೆ.ಎಸ್. ಈಶ್ವರಪ್ಪ ಭಾಗಿಯಾಗಿದ್ದರು.