ಬೆಂಗಳೂರು: ಜನರ ಸಮಸ್ಯೆಗಳನ್ನು ಆಲಿಸಲು ಜೊತೆಯಾಗಿ ಹೋಗೋಣ; ನೀವೂ ಬನ್ನಿ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಆಹ್ವಾನ ನೀಡಿದ್ದಾರೆ.
ಶನಿವಾರ ದಾಸರಹಳ್ಳಿ ಕ್ಷೇತ್ರದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮತ್ತು ಬರಗಾಲ ಪರಿಸ್ಥಿತಿ ಅಧ್ಯಯನ ನಡೆಸಿದ ಅವರು, ಈಗ ತಾನೇ ದಾಸರಹಳ್ಳಿ ಕ್ಷೇತ್ರದ ಪರಿಶೀಲನೆ ಮಾಡಿ, ರಸ್ತೆ ಕೆಲಸ ನೋಡಿದ್ದೇವೆ. ಚಿಕ್ಕಬಾಣಾವರ ಕೆರೆ ಯಾವ ಸ್ಥಿತಿಯಲ್ಲಿದೆ ಎಂದು ನೋಡಿದ್ದೇನೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಬೆಂಗಳೂರು ನೋಡುತ್ತಿರುತ್ತಾರೆ. ರಸ್ತೆ ಹಾಳಾಗಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಕೆರೆ ಹೂಳು ತುಂಬಿದೆ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಲ್ಲ. ಈ ಕುರಿತು ಶಿವಕುಮಾರ್ ಅವರನ್ನು ಪ್ರಶ್ನಿಸುವುದಾಗಿ ತಿಳಿಸಿದರು. ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ನಗರೋತ್ಥಾನ ಅಭಿವೃದ್ಧಿ ಅಡಿಯಲ್ಲಿ 110 ಹಳ್ಳಿಗೆ ಬಿಡುಗಡೆ ಆಗಿದ್ದ ಹಣ ವಾಪಸ್ ಪಡೆದಿದ್ದಾರೆ ಎಂದು ಆಕ್ಷೇಪಿಸಿದರು.
ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೇ ಅತಿ ಹೆಚ್ಚು ತೆರಿಗೆ ನೀಡುತ್ತದೆ. ಆ ಪ್ರದೇಶವನ್ನೇ ಸರಕಾರ ಕಡೆಗಣನೆ ಮಾಡಿದೆ. ಕಾವೇರಿ ನೀರು ಸರಬರಾಜು ಸರಿಯಾಗಿ ನಡೆದಿಲ್ಲ. ಒಳಚರಂಡಿ ಸಂಪೂರ್ಣ ಹಾಳಾಗಿದೆ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಚಿಕ್ಕಬಾಣಾವರ ಕೆರೆ ಒಳಚರಂಡಿ, ತಾಜ್ಯದಿಂದ ತುಂಬಿದೆ. ಇದರ ಪುನರುಜ್ಜೀವನ ಮಾಡುವ ನಿಟ್ಟಿಗೆ ಮುಂದಾಗಬೇಕಿದೆ. ಕೆಆರ್‌ಐಡಿಎಲ್ ಮೂಲಕ ಅಭಿವೃದ್ಧಿ ಮಾಡಬೇಕಿದೆ. ಶಿವಕುಮಾರ್ ಅವರು ಉಸ್ತುವಾರಿ ಇದ್ದಾರೆ. ಇದಕ್ಕೆ ಹಣ ಕೊಡಲು ಸಾಧ್ಯವಾಗುವುದಿಲ್ಲವೇ? ಈ ಸರಕಾರ ದಿವಾಳಿ ಆಗಿದೆಯೇ ಎಂದು ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದರು.
ಸರ್ಕಾರ ಸುಮ್ಮನೆ ದಿನ ದೂಡುತ್ತಿದೆ ಎಂದ ಬಿಎಸ್‌ವೈ
ಸುಮ್ಮನೆ ದಿನ ದೂಡಲಾಗುತ್ತಿದೆ. ಒಂದೇ ಒಂದು ಕಡೆ ಒಂದು ಕಿ.ಮೀ ರಸ್ತೆ ಮಾಡಿಲ್ಲ. ಸರಕಾರವು ಜನವಿರೋಧಿ ಕೆಲಸ ಮಾಡುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿದೆ. ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸುವ ಕೆಲಸ ಮಾಡುತ್ತಿಲ್ಲ. ಶಿವಕುಮಾರ್ ಅವರೇ ನಿಮ್ಮ ಜೊತೆ ನಾನು ಬರ್ತೀನಿ, ನೀವು ಬನ್ನಿ, ಈ ಜನರ ಸಮಸ್ಯೆ ಆಲಿಸೋಣ ಎಂದು ಬಿಎಸ್‌ವೈ ಸವಾಲೆಸೆದರು.
ನಮ್ಮ ಶಾಸಕರು ಕೂಡ ಪರಿಶೀಲನೆಗೆ ಬರುತ್ತಾರೆ. ವಿಪಕ್ಷ ಅನ್ನೋ ಕಾರಣಕ್ಕೆ ಕೊಟ್ಟಿರುವ ಅನುದಾನ ವಾಪಸ್ ಪಡೆಯಲಾಗುತ್ತಿದೆ. ಅದನ್ನು ಯಾವುದೇ ಕಾರಣಕ್ಕೂ ಸಹಿಸಲಾಗಲ್ಲ. ಹೋರಾಟ ಮಾಡುವ ಮೊದಲು ಸಮಸ್ಯೆ ಬಗೆಹರಿಸಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Namma Metro : ಕೆಲವೇ ವರ್ಷದಲ್ಲಿ ಬಿಡದಿವರೆಗೂ ಓಡಲಿದೆ ನಮ್ಮ ಮೆಟ್ರೋ
ಜನರ ಮಧ್ಯೆ ಕುಳಿತು ಮಾತನಾಡೋಣ: ಡಿಕೆಗೆ ಆಹ್ವಾನ
ನಮ್ಮ ಸರ್ಕಾರ ಇದ್ದಾಗ ಹೇಗೆ ಅಭಿವೃದ್ಧಿ ಆಗಿದೆ ಅಂತ ಇಲ್ಲಿನ ಜನ ಹೇಳುತ್ತಿದ್ದಾರೆ. ಈ ಸರ್ಕಾರ ಬಂದ ಮೇಲೆ ಏನಾಗಿದೆ ಎಂದು ಕೇಳಿದರಲ್ಲದೆ, ನಮ್ಮೆಲ್ಲಾ ಶಾಸಕರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಡಿಸಿಎಂ ಅವರ ಬ್ರಾಂಡ್ ಬೆಂಗಳೂರು ವಿಚಾರದ ಕುರಿತು ಕೇಳಿದಾಗ, ಸುಮ್ಮನೆ ಬೊಗಳೆ ಬಿಡೋದಲ್ಲ. ವಾಸ್ತವ ವಿಚಾರ ಮಾತಾಡಬೇಕು. ಬನ್ನಿ ಜನರ ಮಧ್ಯದಲ್ಲಿ ಕುಳಿತು ಮಾತಾಡೋಣ ಎಂದು ಆಹ್ವಾನಿಸಿದರು. ಬರ ಅಧ್ಯಯನ ವರದಿ ತಯಾರಿ ಮಾಡಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಒಂದು ವರದಿ ಕೊಡುತ್ತೇವೆ ಎಂದು ಅವರು ತಿಳಿಸಿದರು.
ಶಾಸಕ ಮುನಿರಾಜು, ಜಿಲ್ಲಾಧ್ಯಕ್ಷ ನಾರಾಯಣ, ಮುಖಂಡ ಮರಿಸ್ವಾಮಿ, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು.