Site icon Vistara News

BS Yediyurappa : ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪರಿಗೆ ಝಡ್ ಕೆಟಗರಿ‌ ಭದ್ರತೆ

BS Yediyurappa and Z category security

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.‌ ಯಡಿಯೂರಪ್ಪ (Former Chief Minister BS Yediyurappa) ಅವರಿಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ)ವು ಝಡ್ ಕೆಟಗರಿ‌ ಭದ್ರತೆಯನ್ನು (Z category security) ನೀಡಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ವತಿಯಿಂದ ಭದ್ರತೆಯನ್ನು ಒದಗಿಸಲಾಗುತ್ತಿದೆ. ಈ ಭದ್ರತೆಯು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬೆದರಿಕೆ ಇರುವ ಬಗ್ಗೆ ಕೇಂದ್ರ ಇಂಟೆಲಿಜೆನ್ಸ್ ಬ್ಯೂರೋ (Central Intelligence Bureau) ನೀಡಿರುವ ವರದಿಯನ್ವಯ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿ.ಎಸ್.‌ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಹೀಗಾಗಿ ಇವರ ಹಿಂದೆ ಈಗ ಝಡ್‌ ಕೆಟಗರಿಯ ಭದ್ರತೆ ಇರಲಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದ್ದ ಬಿಎಸ್‌ವೈ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಇನ್ನೂ ಟೇಕಾಫ್‌ ಆಗಿಲ್ಲ. ಅಲ್ಲದೆ, ಆಡಳಿತ ನಡೆಸಲು ವೈಫಲ್ಯವಾಗಿದೆ ಎಂದು ಆರೋಪ ಮಾಡಿದ್ದ ಬಿ.ಎಸ್.‌ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಘೋಷಿಸಿದ್ದರು.

ಜತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತ – ಗೆದ್ದಂತಹ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಮಾಡುತ್ತಾ ಬಂದಿದ್ದಾರೆ. ಬಿಜೆಪಿಯಲ್ಲಿ ಅಸಮಾಧಾನಗೊಂಡ ಶಾಸಕರ ಮನವೊಲಿಕೆ ಮಾಡುವಲ್ಲಿಯೂ ಯಶಸ್ವಿಯಾಗಿರುವ ಬಿಎಸ್‌ವೈ, ಮುಂದಿನ ಲೋಕಸಭಾ ಚುನಾವಣೆಗೆ ಒಗ್ಗಟ್ಟಾಗಿ ಮುನ್ನಗ್ಗಬೇಕು ಎಂದು ಕರೆಕೊಟ್ಟಿದ್ದರು.

ಕೇಂದ್ರ ಬಿಜೆಪಿಯಲ್ಲಿ ಸ್ಥಾನ ಕೊಟ್ಟಿದ್ದ ವರಿಷ್ಠರು

ಬಿ.ಎಸ್.‌ ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅಲ್ಲದೆ, ರೈತ ಹೋರಾಟದಿಂದ ಸಿಎಂ ಸ್ಥಾನದವರೆಗೂ ಬಂದಿರುವ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಕಾರಣಾಂತರಗಳಿಂದ ಆ ಹುದ್ದೆಯನ್ನು ಬಿಟ್ಟುಕೊಟ್ಟಿದ್ದರು. ಜತೆಗೆ ಚುನಾವಣಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು. ಇನ್ನು ಕರ್ನಾಟಕದ ಮಾಸ್‌ ಲೀಡರ್‌ ಹಾಗೂ ಲಿಂಗಾಯತ ಸಮುದಾಯದ ಪ್ರಬಲ ನಾಯಕರೂ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಬಿಎಸ್‌ವೈಗೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಡಿದ್ದಾರೆ. ಅಲ್ಲದೆ, ಕೇಂದ್ರೀಯ ಚುನಾವಣಾ ಸಮಿತಿ (ಸಿಇಸಿ) ಸದಸ್ಯರನ್ನಾಗಿಯೂ ನೇಮಿಸಲಾಗಿದೆ. ಈ ಮೂಲಕ ಯಾವುದೇ ರಾಜ್ಯದಲ್ಲಿ ಟಿಕೆಟ್‌ ಹಂಚಿಕೆ ಮಾಡುವಾಗ ಯಡಿಯೂರಪ್ಪ ಅವರ ಅಭಿಪ್ರಾಯವೂ ಮುಖ್ಯವಾಗುತ್ತದೆ.

ಈಗ ಝಡ್‌ ಕೆಟಗರಿ ಭದ್ರತೆ

ಈಗ ಮಾಜಿ ಸಿಎಂಗೆ ಬೆದರಿಕೆ ಇರುವ ಬಗ್ಗೆ ವರದಿ ಬಂದಿರುವ ಹಿನ್ನೆಲೆಯಲ್ಲಿ ಝಡ್‌ ಕೆಟಗರಿ ಭದ್ರತೆಯನ್ನು ನೀಡಲಾಗಿದೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಈ ಹಿಂದೆ ಸರ್ಕಾರದಿಂದ ಕೆಎಸ್‌ಆರ್‌ಪಿ ಸೆಕ್ಯುರಿಟಿಯನ್ನು ನೀಡಲಾಗಿತ್ತು.

ಇದನ್ನೂ ಓದಿ: Mallikarjun Kharge: ಮಲ್ಲಿಕಾರ್ಜುನ ಖರ್ಗೆ ಐಐಸಿಸಿ ಅಧ್ಯಕ್ಷರಾಗಿ 1 ವರ್ಷ; ಏಳು-ಬೀಳುಗಳೇನು?

ಏನಿದು ಝಡ್‌ ಭದ್ರತೆ?

ಯಾವುದೇ ಒಬ್ಬ ವ್ಯಕ್ತಿಯು ಝಡ್ ಭದ್ರತೆಯನ್ನು ಪಡೆದರೆ, ಅವರಿಗೆ ಒಟ್ಟು 22 ಸಿಬ್ಬಂದಿ ತಂಡ ರಕ್ಷಣೆ ನೀಡುತ್ತದೆ. ಈ ಭದ್ರತಾ ತಂಡದಲ್ಲಿ ಸಿವಿಲ್ ಪೊಲೀಸ್ ಸಿಬ್ಬಂದಿ ಮತ್ತು ಕನಿಷ್ಠ 4 ರಿಂದ 5 ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಎಸ್‌ಜಿ) ಇರುತ್ತಾರೆ.

Exit mobile version