ಚಿಕ್ಕೋಡಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎನ್ನಲಾಗುತ್ತಿರುವ ಸಚಿವ ವಿ. ಸೋಮಣ್ಣ ( V. Somanna) ಅವರನ್ನು ಕರೆದು ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅಂಕಲಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ವಿಜಯ ಸಂಕಲ್ಪ ಯಾತ್ರೆಗೆ ನಿರೀಕ್ಷೆ ಮೀರಿ ಎಲ್ಲ ಕಡೆ ಜನ ಸೇರುತ್ತಿದ್ದಾರೆ. 140ಕ್ಕೂ ಹೆಚ್ಚು ಸೀಟ್ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಮೋದಿ, ಅಮಿತ್ ಶಾ ಅವರಂತಹ ನಾಯಕರ ಮುಂದೆ ರಾಹುಲ್ ಗಾಂಧಿ ಯಾವ ಲೆಕ್ಕಕ್ಕೂ ಬರಲ್ಲ.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಅನ್ನೋದಕ್ಕೆ ಜನ ಸೇರ್ತಿರುವುದು ಸಾಕ್ಷಿ. ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗೆ ಜನ ಸೇರುತ್ತಿಲ್ಲ. ಚಿಕ್ಕೋಡಿ ಭಾಗಕ್ಕೆ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗೆ ಎರಡನೇ ಹಂತದಲ್ಲಿ 189 ಕೋಟಿ ರೂ. ಕೊಡ್ತಿದ್ದೇವೆ. ಸಮಗ್ರ ಅಭಿವೃದ್ಧಿಗೆ ಬೊಮ್ಮಾಯಿ ಸರ್ಕಾರ ಮಾಡುತ್ತಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದಿದ್ದಾರೆ ಈ ಬಾರಿ ಬಿಜೆಪಿ 65ಕ್ಕಿಂತ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂಬ ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದಲ್ಲಿದ್ದವರು ಮಾತನಾಡುವುದು ಸಹಜ. ಶಿವಕುಮಾರ್, ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅಂತಾ ಓಡಾಡ್ತಿದ್ದಾರೆ. ಅವರ ಕನಸು ಈಡೇರುವುದಿಲ್ಲ. ಡಿಕೆ ಶಿವಕುಮಾರ್ ನಮ್ಮ ಶಾಸಕರ ಜತೆ ಮಾತುಕತೆ ಮಾಡಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಅದು ಆಗೊಲ್ಲ. 140ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು.
ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ಗೆ ಸಚಿವರು, ಶಾಸಕರು ಸೇರ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಪ್ರಕಾರ ಆ ರೀತಿ ಯಾವುದಕ್ಕೂ ಅವಕಾಶ ಇಲ್ಲ. ಸೋಮಣ್ಣನವರು ಪಕ್ಷ ಬಿಡ್ತಾರೆ ಅನ್ನೋದ್ರಲ್ಲಿ ಸತ್ಯಾಂಶ ಇಲ್ಲ. ಇಲ್ಲಿಂದ ಹೋದ ಮೇಲೆ ಸೋಮಣ್ಣ ಅವರನ್ನು ಕರೆದು ಮಾತಾಡುತ್ತೇನೆ. ಆ ರೀತಿ ಎನೂ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ ಎಂದರು.
ಡಿ.ಕೆ. ಶಿವಕುಮಾರ್ ಅವರನ್ನು ಸೋಮಣ್ಣ ಭೇಟಿಯಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಅವರು ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿ ಮಾಡ್ತಿದ್ದಾರೆ. ಆ ರೀತಿ ಯಾವುದಕ್ಕೂ ನಮ್ಮ ಮುಖಂಡರು ಬೆಲೆ ಕೊಡ್ತಿಲ್ಲ. ಯಾರೂ ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಹೋಗುವುದಿಲ್ಲ. ಕಾಂಗ್ರೆಸ್ ನವರಿಗೆ ಸೋಲಿನ ಭೀತಿ ಕಾಡುತ್ತಿದೆ. ಕಾಂಗ್ರೆಸ್ ನಿಂದ ಬರುವವರಿಗೆ ಸ್ವಾಗತ. ಹೋಗುವವರನ್ನ ಗೌರವಯುತವಾಗಿ ಕಳುಹಿಸಿಕೊಡ್ತೇವಿ. ಹದಿನೇಳು ಜರಲ್ಲೂ ಯಾರೊಬ್ಬರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಅಧಿಕಾರಕ್ಕೆ ಬರುವ ಪಕ್ಷ ಬಿಟ್ಟು ಯಾಕೆ ಹೋಗ್ತಾರೆ? ಅವತ್ತಿನಿಂದ ಇವತ್ತಿನ ವರೆಗೂ ಪಕ್ಷ ಕಟ್ಟಲು ಬೆನ್ನೆಲುಬಾಗಿ ಸಹಕಾರ ನೀಡಿದ್ದಾರೆ. ಯಾರೊಬ್ಬರೂ ಸಹ ಪಕ್ಷ ಬಿಟ್ಟು ಹೋಗಲ್ಲ ಎಂದರು.
ಸೋಲಿನ ಭೀತಿಯಿಂದ ರಾಜ್ಯಕ್ಕೆ ಪದೇ ಪದೇ ಮೋದಿ, ಅಮಿತ್ ಶಾ ಬರ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಹಾಗೆ ಹೇಳಲು ತೊಂದರೆ ಇಲ್ಲ. ಅವರು ಬರ್ತಾಯಿರೋದ್ರಿಂದ ಕಾಂಗ್ರೆಸ್‌ಗೆ ಸೋಲಿನ ಭೀತಿ ಜಾಸ್ತಿ ಆಗಿದೆ ಅನ್ನೋದು ನಿಜ. ಅದನ್ನ ಅವರೇ ಒಪ್ಪಿಕೊಂಡಿದ್ದಾರೆ ಅದಕ್ಕೆ ಸಂತೋಷ ಪಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: V. Somanna: ನನ್ನ ಮನಸ್ಸು, ಆರೋಗ್ಯ ಸರಿಯಿಲ್ಲ ಎಂದ ಸೋಮಣ್ಣ; ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ ಎಂದ ಡಿ.ಕೆ. ಸುರೇಶ್
ಹಾಲಿ ಕೆಲ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಕುರಿತು ಪ್ರತಿಕ್ರಿಯಿಸಿ, ಈ ವಿಚಾರಕ್ಕೆ ಸದ್ಯಕ್ಕೆ ಯಾವುದೇ ಮಹತ್ವ ಇಲ್ಲ. ಹೈಕಮಾಂಡ್ ಕುಳಿತು ಚರ್ಚೆ ಮಾಡುತ್ತೆ, ಚುನಾವಣಾ ಸಮಿತಿಯಲ್ಲಿ ಚರ್ಚೆ ಆಗುತ್ತೆ. ಅಂತಿಮವಾಗಿ ಯಾರಿಗೆ ಟಿಕೆಟ್ ಕೊಡಬೇಕು ಅಂತಾ ತೀರ್ಮಾನ ಆಗುತ್ತೆ. ಹಾಲಿ ಐದಾರು ಶಾಸಕರಿಗೆ ಟಿಕೆಟ್ ಸಿಗಲ್ಲಾ ಅನ್ನೋ ವಾತಾವರಣ ಇದೆ ಅಂತಾ ಹೇಳಿದ್ದೇನೆ. ಅಂತಿಮವಾಗಿ ಎನೇ ತೀರ್ಮಾನ ಮಾಡೋದಾದ್ರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾನು ಹೇಳಿದ್ದೇ ಕೊನೆ ಮಾತಲ್ಲ ಎಲ್ಲರಿಗೂ ಸೀಟ್ ಸಿಕ್ರೂ ಅಚ್ಚರಿ ಇಲ್ಲ ಎಂದರು. ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಆ ರೀತಿ ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಷ್ಟೆ ತಿಳಿಸಿದರು.