Site icon Vistara News

BS Yediyurappa: ಬಿ.ಎಸ್.‌ ಯಡಿಯೂರಪ್ಪ ಮತ್ತೆ ಸ್ಪರ್ಧಿಸಿ ಸದನಕ್ಕೆ ಬರಲಿ: ಡಿ.ಕೆ. ಶಿವಕುಮಾರ್

DK Shivakumar and BS Yediyurappa

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಹ ಯಾವುದಾದರೂ ಕ್ಷೇತ್ರವನ್ನು ಆಯ್ಕೆ‌ ಮಾಡಿಕೊಂಡು, ಸದನಕ್ಕೆ‌ ಬಂದು‌ ಮಾತನಾಡಲಿ. ನಮಗೆ ಯಾವುದೇ ಅಭ್ಯಂತರವಿಲ್ಲ. ಬಿಜೆಪಿ (BJP Karnataka) ಪಕ್ಷದಲ್ಲಿನ ಸಮನ್ವಯತೆ ಕೊರತೆ, ಆ ಪಕ್ಷದ ದೌರ್ಬಲ್ಯ ಮತ್ತು ವೈಫಲ್ಯ ಎದ್ದು ಕಾಣುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ‌ ನೀಡಿದ ಡಿ.ಕೆ. ಶಿವಕುಮಾರ್‌, ರಾಜ್ಯದ ಜನ 65 ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿರುವುದು ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದು. ಆದರೆ ಇವರು ಸದನದಲ್ಲಿ ಚರ್ಚೆ ಮಾಡದೇ ಹೊರಗೆ ಹೋರಾಟ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು.

“ಬಿಜೆಪಿಯವರ‌ ನಡವಳಿಕೆಯಿಂದ ಅವರ ಪಕ್ಷದಲ್ಲಿ ಒಮ್ಮತವಿಲ್ಲ‌ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆರ್. ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರೂ ವಿಧಾನಸಭೆಯಲ್ಲಿ ಇದ್ದಾರೆ. ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುವರ್ಣಸೌಧ ಕಟ್ಟಿಸಿರುವುದು ಉತ್ತರ ಕರ್ನಾಟಕದ ಸಮಸ್ಯೆಗಳು, ಬರ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು. ಅವರ ಆಚಾರ, ವಿಚಾರ, ಜನಪರ ಧ್ವನಿಯನ್ನು ಸದನದಲ್ಲಿ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಹೊರಗೆ ಹೋರಾಟ ಮಾಡುತ್ತೇನೆ ಎಂದರೆ ಯಾರು‌ ಕೇಳುತ್ತಾರೆ? ಅದರಿಂದ ಏನು ಪ್ರಯೋಜನ? ಎಂದು ಡಿ.ಕೆ. ಶಿವಕುಮಾರ್‌ ಕೇಳಿದರು.

ರಮೇಶ್ ಜಾರಕಿಹೊಳಿ ಅವರ ಪ್ರಕರಣದ ಬಗ್ಗೆ ಮತ್ತೆ ತನಿಖೆ ನಡೆಸಲು ಸರ್ಕಾರ ತಯಾರಿ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ನನಗದು ಗೊತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಾಲ್ಯ ವಿವಾಹ ಪದ್ಧತಿಯನ್ನು ಬೇರು ಸಮೇತ ಕಿತ್ತು ಹಾಕ್ತೇವೆ: ಲಕ್ಷ್ಮಿ ಹೆಬ್ಬಾಳ್ಕರ್‌

ಬಾಲ್ಯ ವಿವಾಹ ಪದ್ಧತಿಯನ್ನು (Child Marriage System) ಬೇರು ಸಮೇತ ಕಿತ್ತು ಹಾಕಲು ನಮ್ಮ ಇಲಾಖೆ ಸನ್ನದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Laxmi Hebbalkar) ಅವರು ವಿಧಾನ ಮಂಡಲ ಅಧಿವೇಶನದಲ್ಲಿ (Belagavi Winter Session) ತಿಳಿಸಿದ್ದಾರೆ.

ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಕೇಳಿದ ಪ್ರಶ್ನೆಗೆ ಬುಧವಾರ ವಿಧಾನಸಭೆಯಲ್ಲಿ ಉತ್ತರ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಬಾಲ್ಯ ವಿವಾಹ ಪ್ರಕರಣವನ್ನು ಮುಚ್ಚಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಈಗ ಕಾನೂನು ಹಿಂದಿನಂತಿಲ್ಲ. ಅತ್ಯಂತ ಪ್ರಬಲವಾದ ಕಾನೂನು ರಾಜ್ಯದಲ್ಲಿ ಜಾರಿ ಇದೆ. ಯಾವುದಾದರೂ ನಿರ್ದಿಷ್ಟ ಪ್ರಕರಣದಲ್ಲಿ ಲೋಪ ಕಂಡುಬಂದಲ್ಲಿ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ವಿವಿಧ ನಿಯಮಗಳ ಅಡಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಅನುಷ್ಠಾನದಲ್ಲಿರುವ ಕೆಲವು ಕುಂದುಕೊರತೆಗಳನ್ನು ಸರ್ಕಾರ ಗಮನಿಸಿದೆ. ಅವುಗಳನ್ನು ಪರಿಹರಿಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿಕ್ಷಣ ಇಲಾಖೆ, ಪೊಲಿಸ್ ಇಲಾಖೆ, ಕಾರ್ಮಿಕ ಇಲಾಖೆ, ಮತ್ತಿತರ ಸಂಬಂಧಿಸಿದ ಇಲಾಖೆಗಳಲ್ಲದೆ ರಾಜ್ಯ ಅಪರಾಧ ಜಾಗೃತಿ ದಳ ಹಾಗೂ ಬಾಲ್ಯ ವಿವಾಹ ನಿಷೇಧ ಕೋಶ ಇತ್ಯಾದಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಇವುಗಳ ಮೇಲುಸ್ತುವಾರಿ ಹಾಗೂ ದಾಖಲಾಗುವ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪೂರಕ ಪ್ರಶ್ನೆಗೆ ವಿವರಣೆ ನೀಡಿದರು.

ಅಂಗನವಾಡಿಗಳಿಗೆ ಸ್ವಂತ ಕಟ್ಟಡಕ್ಕೆ ಕ್ರಮ; ಲಕ್ಷ್ಮಿ ಹೆಬ್ಬಾಳ್ಕರ್

ರಾಜ್ಯದಲ್ಲಿ ಸಾಧ್ಯವಾದಷ್ಟು ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸಭೆಗೆ ಮಾಹಿತಿ ನೀಡಿದರು.

ತಿಪಟೂರಿನ ಷಡಕ್ಷರಿ ಕೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 376 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, 274 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. 62 ಬಾಡಿಗೆ ಕಟ್ಟಡಗಳಲ್ಲಿವೆ. 22 ಶಾಲಾ ಆವರಣಗಳಲ್ಲಿ ನಡೆಯುತ್ತಿವೆ. 8 ಸಮುದಾಯ ಭವನಗಳಲ್ಲಿ ನಡೆಯುತ್ತಿವೆ. 3 ಪಂಚಾಯಿತಿ ಕಟ್ಟಡಗಳಲ್ಲಿ ನಡೆಯುತ್ತಿವೆ. 7 ಇತರ ಕಟ್ಟಡಗಳಲ್ಲಿ ನಡೆಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕಳೆದ 3 ವರ್ಷಗಳಲ್ಲಿ 364 ಲಕ್ಷ ರೂ. ಗಳನ್ನು ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Yuva Nidi Scheme: 5ನೇ ಗ್ಯಾರಂಟಿ ಯುವನಿಧಿ ನೋಂದಣಿ ಡಿ. 21ಕ್ಕೆ ಇಲ್ಲ! ರಾಜ್ಯ ಸರ್ಕಾರದ ಶಾಕಿಂಗ್‌ ನ್ಯೂಸ್‌

ರಾಜ್ಯದಲ್ಲಿ 4 ಸಾವಿರ ಸರ್ಕಾರಿ ನಿವೇಶನಗಳಿಗೆ ಅಂಗನವಾಡಿ ಹೆಸರು ಹಾಕಿಸಲಾಗಿದೆ. ನಿವೇಶನ ಸಿಕ್ಕ ತಕ್ಷಣ ಅಗತ್ಯವಿರುವ ಎಲ್ಲ ಕಡೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಸಾರ್ವಜನಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿರುವ ಸೈಟ್‌ಗಳನ್ನು ಅಂಗನವಾಡಿ ಕಟ್ಟಡಕ್ಕೆ ಬಳಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Exit mobile version