Site icon Vistara News

Budget 2024: ಡಿ.ಕೆ. ಸುರೇಶ್ ‘ಭಾರತ ವಿಭಜನೆ’‌ ಹೇಳಿಕೆ; ಸಿಎಂ ಸಿದ್ದರಾಮಯ್ಯ ವಿರೋಧ

Budget 2024 DK Suresh Partition of India remark Cm Siddaramaiah not agree

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ (Budget 2024) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್‌, ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈಗ, ಈ ಹೇಳಿಕೆಯನ್ನು ಒಪ್ಪದ ಸಿಎಂ ಸಿದ್ದರಾಮಯ್ಯ (CM Siddaramaiah), ಆ ರೀತಿ ಎಲ್ಲ ಕೇಳುವುದಕ್ಕೆ ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ.

ಸುದ್ದಿಗೋಷ್ಠಿ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ. ಪ್ರತ್ಯೇಕ ರಾಷ್ಟ್ರ ಬೇಕು ಎಂದೆಲ್ಲ ಕೇಳುವುದಕ್ಕೆ ಆಗುವುದಿಲ್ಲ. ದೇಶದಲ್ಲಿ ಸಾರ್ವಭೌಮತೆ ಇರಬೇಕು. ಒತ್ತಾಯ, ಮನವಿ ಮಾಡೋದು ಬೇರೆ. ಫೆಡರಲಿಸಂ ಅನ್ನು ಒಪ್ಪಿಕೊಂಡಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಬರುತ್ತಿಲ್ಲ. 4 ಲಕ್ಷ ಕೋಟಿ ರೂಪಾಯಿಗೂ ಅಧಿಕ ತೆರಿಗೆಯನ್ನು ನಮ್ಮ‌ ರಾಜ್ಯದಿಂದ ಕೇಂದ್ರ ಸರ್ಕಾರ ವಸೂಲಿ ಮಾಡುತ್ತಿದೆ. ಈ ತೆರಿಗೆ ಹಣ ನೀಡುವ ವಿಚಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕನೇ ಇರೋದು. ದಕ್ಷಿಣ ಭಾರತ, ಉತ್ತರ ಎಂಬುದು ಪ್ರಶ್ನೆಯೇ ಎಂದು ಸಿಎಂ ಸಿದ್ದರಾಮಯ್ಯ ಕೇಳಿದರು.

ಡಿ.ಕೆ. ಸುರೇಶ್ ಹೇಳಿದ್ದೇನು?

ಸಂಸದ ಡಿ.ಕೆ. ಸುರೇಶ್‌‌ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡುವಾಗ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್‌ ಅನ್ನು ಖಂಡಿಸಿದ್ದಾರೆ. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್‌ ಎಚ್ಚರಿಕೆ ನೀಡಿದ್ದಾರೆ. ‌

ನಾಮಫಲಕ ಮಾತ್ರ ಬದಲಾಯಿಸಲಾಗಿದೆ: ಡಿ.ಕೆ. ಸುರೇಶ್

ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ‌ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್‌ನಲ್ಲಿ ನಾಮಫಲಕವನ್ನು ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನು ಇಡಲಾಗಿದೆ. ಎಕನಾಮಿಕ್ ಸರ್ವೆಯವರು ಮುಂದಿಟ್ಟಿದ್ದಿದ್ದರೆ ಇವರ ಪರಿಸ್ಥಿತಿ ಏನಿದೆ? ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಎಂಬುದು ತಿಳಿಯುತ್ತಿತ್ತು. ಈಗ ದೇಶದ ಸ್ಥಿತಿ ಬಗ್ಗೆ ಅನುಮಾನಗಳು ಪ್ರಾರಂಭವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Budget 2024: ಪ್ರಗತಿನಿಷ್ಠ ಬಜೆಟ್’ ಎಂದ ಬಿಎಸ್‌ವೈ; ನಾಮಫಲಕವನ್ನು ಮಾತ್ರ ಬದಲಾಗಿದೆ ಎಂದ ಡಿ.ಕೆ. ಸುರೇಶ್

ಈ ಬಜೆಟ್ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳನ್ನು ನೀಡಿದೆ. ಆದರೆ, ಹೇಳಿಕೆಗಳಿಂದ ಕೂಡಿದ ಬಜೆಟ್‌ ಇದಾಗಿದೆ ಎಂದು ಹೇಳಬಹುದಾಗಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇವತ್ತು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂಥವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಡಿ.ಕೆ. ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದರು.

Exit mobile version