Site icon Vistara News

Budget Session : 40 ಗಂಟೆ ಕಳೆದರೂ ಜಿಂದಾಬಾದ್‌ ಉಗ್ರರ ಸೆರೆ ಇಲ್ಲ; ಬಿಜೆಪಿ ವಾಕೌಟ್‌

Budget Session BJP Walk out

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ಗೆದ್ದ ಕಾಂಗ್ರೆಸ್‌ ಅಭ್ಯರ್ಥಿಗಳ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ (Pakistan zindabad) ಘೋಷಣೆ ಕೂಗಿದ ಧೂರ್ತರ ವಿರುದ್ಧ 40 ಗಂಟೆ ಕಳೆದರೂ ಕ್ರಮ ಕೈಗೊಂಡಿಲ್ಲ. ಅವರಿಗೆ ರಕ್ಷಣೆ ಕೊಡಲಾಗುತ್ತಿದೆ ಎಂದು ಆಪಾದಿಸಿ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ಸಭಾತ್ಯಾಗ (BJP Walks out from Assembly) ಮಾಡಿದೆ. ಬಜೆಟ್‌ ಅಧಿವೇಶನದ (Budget Session) ಕೊನೆಯ ದಿನವಾದ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಚರ್ಚೆಯ ಮೇಲೆ ಉತ್ತರ ನೀಡುತ್ತಿದ್ದಾಗ ಬಿಜೆಪಿ ಶಾಸಕರು ಧರಣಿ ನಡೆಸಿದರು, ಭಜನೆ ನಡೆಸಿದರು. ಅಂತಿಮವಾಗಿ ವಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು. ಬಳಿಕ ಎಲ್ಲರೂ ರಾಜಭವನಕ್ಕೆ ತೆರಳಿದರು. ಅದರ ನಡುವೆ ಜೈ ಮೋದಿ, ಜೈ ಶ್ರೀರಾಮ್‌ ಘೋಷಣೆಗಳೂ ಮೊಳಗಿದವು.

ಅಧಿವೇಶನ ಸಮಾವೇಶಗೊಳ್ಳುತ್ತಿದ್ದಂತೆಯೇ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಆರ್‌ ಅಶೋಕ್‌ ಅವರು, ʻʻಈ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಇನ್ನೂ ಅದು ಎದ್ದೇ ಇಲ್ಲ. ದೇಶದ್ರೋಹಿಗಳನ್ನು ಶಿಕ್ಷಿಸುವ ಧೈರ್ಯ ತೋರಿಲ್ಲʼʼ ಎಂದು ಆಕ್ಷೇಪಿಸಿದರು.

ʻʻನಾನು ಸಿನಿಯರ್ ಶಾಸಕನಾಗಿದ್ದೇನೆ. ಹಲವು ವರ್ಷಗಳಿಂದ ಸರ್ಕಾರಗಳನ್ನು ನೋಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆಯವರು ಗೃಹ ಸಚಿವರಾಗಿದ್ದರು. ಆಗ ದಲಿತ ಸಮುದಾಯದ ಆರು ಜನರನ್ನ ಸಜೀವ ದಹನ ಮಾಡಲಾಗಿತ್ತು. ಆಗ ಸದನದಲ್ಲಿ ಖರ್ಗೆಯವರು ಕಣ್ಣೀರು ಹಾಕಿದ್ದರು. ಆದರೆ, ಈಗಿನ ಗೃಹ ಸಚಿವರು ವಿಧಾನಸೌಧದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದರೂ ಗಂಭೀರವಾಗಿ ಪರಿಗಣಿಸಿಲ್ಲ. ಘಟನೆ ನಡೆದು 40 ಗಂಟೆ ಕಳೆದರೂ ಒಬ್ಬರನ್ನೂ ಬಂದಿಸಿಲ್ಲ ಅಂತ ಹೇಳಿದ ಮೇಲೆ ಇವರು ಅಧಿಕಾರದಲ್ಲಿ ಇರಲು ಲಾಯಕ್ ಇಲ್ಲʼʼ ಎಂದರು. ಬಳಿಕ ಇತರ ಶಾಸಕರ ಜತೆ ಸದನದ ಬಾವಿಗೆ ಇಳಿದರು.

ಇದನ್ನೂ ಓದಿ : Budget Session : ಹೆಡಗೇವಾರ್‌ ಸ್ವಾತಂತ್ರ್ಯಕ್ಕೆ ಹೋರಾಡಿದ್ರಾ? ಗೋಲ್ವಲ್ಕರ್‌ ಭಾಗವಹಿಸಿದ್ರಾ; ಸಿಎಂ ಪ್ರಶ್ನೆ

ಆಗ ಗೃಹ ಸಚಿವ ಪರಮೇಶ್ವರ್‌ ಅವರು, ಎಫ್ಎಸ್ಎಲ್ ರಿಪೋರ್ಟ್ ಬರಲಿ. ಏಳು ಜನರ ಬಳಿ ಹೇಳಿಕೆ ಪಡೆದಿದ್ದೇವೆ. ಇದನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ʻʻಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರೆ ಕ್ರಮ ನಿಶ್ಚಿತ. ನಾವು ದೇಶಭಕ್ತಿಯನ್ನು ಇವರಿಂದ ಕಲಿಯುವ ಅಗತ್ಯವಿಲ್ಲ. ಎಫ್ಎಸ್ಎಲ್ ರಿಪೋರ್ಟ್ ಬರಲಿ. ನಾವು ಯಾರನ್ನೂ ಸಹ ರಕ್ಷಣೆ ಮಾಡಲ್ಲ.ʼʼ ಎಂದರು. ಸದನದ ಬಾವಿಯಲ್ಲಿ ಇಳಿದು ಗದ್ದಲ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿರುವ ನಡುವೆಯೇ ಬಜೆಟ್ ಮೇಲೆ ಚರ್ಚೆಗೆ ಸಿಎಂ ಉತ್ತರ ನೀಡಲು ಆರಂಭಿಸಿದರು. ಆಗ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು. ಬಿಜೆಪಿ ಶಾಸಕರು ಪೇಪರ್‌ಗಳನ್ನು ಹರಿದು ಹಾಕಿದರು. ಸಿದ್ದರಾಮಯ್ಯ ಅವರ ಮಾತುಗಳನ್ನು ಸುಳ್ಳು ಸುಳ್ಳು.. ಬುರುಡೆ ಬುರುಡೆ ಎಂದು ರೇಗಿಸಿದ ಬಿಜೆಪಿ ಶಾಸಕರು, ನ್ಯಾಯ ಬೇಕು ಅಂತ ಬಾವಿಯಲ್ಲಿ ಸುತ್ತು ಹೊಡೆದರು.

ಕಟ್ಟಿ ಕಟ್ಟಿ ಕಾಂಗ್ರೆಸ್ ಗೆ ಚಟ್ಟ ಕಟ್ಟಿ.. ಸತ್ತೋಯಿತು, ಸತ್ತೋಯಿತು.. ಕಾಂಗ್ರೆಸ್ ಸತ್ತೋಯಿತು ಎಂದು ಬಿಜೆಪಿ ಭಜನೆ ಶುರು ಮಾಡಿತು. ʻʻಮೊದಲು ಸಿಎಂ ರಾಜೀನಾಮೆ ಕೊಡಬೇಕು. ವಿಧಾನ ಸೌಧಕ್ಕೆ ಭಯೋತ್ಪಾದಕರನ್ನು ಕರೆ ತಂದಿದ್ದು ಇವರು. ಇವರ ನಡೆ ವಿರೋಧಿಸಿ ನಾವು ರಾಜಭವನ ಚಲೋ ಮಾಡ್ತೀವಿ. ರಾಜಭವನ ತೆರಳಿ ಸರ್ಕಾರದ ವಿರುದ್ಧ ದೂರು ಕೊಡ್ತೀವಿ. ಸದನದಿಂದ ವಾಕ್ ಔಟ್ ಮಾಡ್ತೀವಿʼʼ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು. ಬಳಿಕ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.

Exit mobile version