Site icon Vistara News

BY Vijayendra : ರಾಜ್ಯದಲ್ಲಿ SBI ಸ್ಥಾಪಿಸಿದ ಕಾಂಗ್ರೆಸ್‌; ಶಿವಕುಮಾರ್‌ ಬ್ಯಾಂಕ್‌ ಆಫ್‌ ಇಂಡಿಯಾ!

Shivakumar Bank of India; BY Vijayendra

ಬೆಂಗಳೂರು: ದೇಶದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India- RBI) ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ನವರು SBI ಬ್ರಾಂಚ್ ಓಪನ್ ಮಾಡಿಕೊಂಡಿದ್ದಾರೆ. SBI ಎಂದರೆ ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ (Shivakumar Bank of India)!: ಹೀಗೆಂದು ಲೇವಡಿ ಮಾಡಿದ್ದಾರೆ ಶಿಕಾರಿಪುರದ ಶಾಸಕ ಬಿ.ವೈ ವಿಜಯೇಂದ್ರ (BY Vijayendra).

ʻʻಡಿ.ಕೆ ಶಿವಕುಮಾರ್ ಮೂಲಕ ಬಿಬಿಎಂಪಿ ಸೇರಿದಂತೆ ಬೇರೆ ಬೇರೆ ಇಲಾಖೆಯಲ್ಲಿ ಹಣ ಸಂಗ್ರಹ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಹಣ ಸಾಗಿಸ್ತಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಲ್ಲಿ ಹಿಂದೆ ಮುಂದೆ ನೋಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಮಂತ್ರಿಗಳು ಕಂಟ್ರಾಕ್ಟರ್ಸ್ ಮೂಲಕ ಹಣ ಸಂಗ್ರಹ ಮಾಡಿ ಕಳಿಸ್ತಿದ್ದಾರೆʼʼ ಎಂದು ಬಿವೈ ವಿಜಯೇಂದ್ರ ಆಪಾದಿಸಿದರು.

ʻʻಡಿ.ಕೆ ಶಿವಕುಮಾರ್‌ (DK Shivakumar), ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಏನೇ ಹೇಳಲಿ. ರಾಜ್ಯದಲ್ಲಿ ಲೂಟಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ನಿಜ. ಲೂಟಿ ಮಾಡುವ ಮೂಲಕ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಹುನ್ನಾರ ನಡೆದಿದೆʼʼ ಎಂದು ಬೆಂಗಳೂರಿನಲ್ಲಿ ವಿಜಯೇಂದ್ರ ಹೇಳಿದರು.

ʻʻಪಂಚ ರಾಜ್ಯಗಳ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಆರಂಭವಾಗಿದೆ. ರಾಜ್ಯದಲ್ಲಿ ಹಣ ಸಂಗ್ರಹಿಸಿ ಆ ರಾಜ್ಯಗಳಿಗೆ ಕಳಿಸಿಕೊಡುವ ಹುನ್ನಾರ ಬಯಲಾಗಿದೆ. ಮೊನ್ನೆ 42 ಕೋಟಿ ರೂ. ಸೀಜ್ ಆಗಿತ್ತು, ನಿನ್ನೆ 45 ಕೋಟಿ ಸೀಜ್ ಆಗಿದೆ. ಎಲ್ಲರೂ ಮಾತನಾಡುವ ಹಾಗೆ ಸಾವಿರಾರು ಕೋಟಿ ಅಂತ ಹೇಳ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಎಷ್ಟು ಕಳಿಸ್ತಿದ್ದಾರೆ ಅಂತ ಅಂದಾಜು ಸಿಗ್ತಿಲ್ಲ. ಆದರೆ ಒಂದು ವಿಷಯ ಸತ್ಯ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡ್ತೀವಿ, ಪಾರದರ್ಶಕ ಆಡಳಿತ ಕೊಡ್ತೀವಿ ಅಂತ ಹೇಳಿದ್ದ ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗಲು ದರೋಡೆಯಲ್ಲಿ ನಿರತವಾಗಿದೆʼʼ ಎಂದು ವಿಜಯೇಂದ್ರ ನುಡಿದರು.

ʻʻಕಾಂಗ್ರೆಸ್ ಪಕ್ಷದ ಮುಖಂಡರೆಲ್ಲರೂ ಈ ದಾಳಿ ರಾಜಕೀಯಪ್ರೇರಿತ ಎಂದು ಹೇಳುತ್ತಿದ್ದಾರೆಯೇ ಹೊರತು ಯಾರೂ ಸ್ವಾಗತ ಮಾಡಿಲ್ಲ. ಅಂದರೆ ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿರೋದು ಅಂತ ಅವರೇ ಒಪ್ಪಿಕೊಂಡಿದ್ದಾರೆʼʼ ಎಂದು ಬಿವೈ ವಿಜಯೇಂದ್ರ ಹೇಳಿದರು.

ʻʻಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರ ಎಲ್ಲಿಗೆ ಬಂದು ನಿಂತಿದೆ ಎಂದರೆ ದಸರಾಗೆ ಬಂದ ಕಲಾವಿದರ ಬಳಿಯು ಲಂಚ ಕೇಳುವ ಪರಿಸ್ಥಿತಿಗೆ ಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತಾಗಿ ಅದು ರಾಜಕಾರಣಿಗಳಿಂದ ಅಧಿಕಾರಿಗಳಿಗೂ ಹರಡಿರೋದು ಸ್ಪಷ್ಟವಾಗಿದೆ.ʼʼ ಎಂದು ಹೇಳಿದರು.

ʻʻಐದು ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ATM ರೀತಿ ಬಳಕೆ ಮಾಡಿಕೊಳ್ತಿದ್ದಾರೆ. ಇದನ್ನು ನಾವು ಮೊದಲೇ ಹೇಳಿದ್ದೆವು. ಕರ್ನಾಟಕದ ಒಳಿತಿಗಾಗಿ ಇವರು ಆಡಳಿತಕ್ಕೆ ಬರ್ತಿಲ್ಲ ಅಂತ ಆರೋಪ ಮಾಡಿದ್ದೆವು. ಅದೆಲ್ಲ ಸತ್ಯ ಆಗ್ತಿದೆ. ಇದನ್ನು ಇಡೀ ದೇಶದ ಜನ ನೋಡ್ತಿದ್ದಾರೆʼʼ ಎಂದರು.

ವಿದ್ಯುತ್ ಅಭಾವ ಮತ್ತು ದರ ಹೆಚ್ಚಳ ವಿಚಾರ

ʻʻಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಬಹಳಷ್ಟು ಗ್ಯಾರಂಟಿ ಘೋಷಣೆ ಮಾಡಿದರು. ಅದರಲ್ಲಿ ಅವರು ಯಶಸ್ವಿಯಾಗಿ ಅಧಿಕಾರಕ್ಕೂ ಬಂದರು. ಅದರೆ, ದಿನೇದಿನೆ ಅವರ ಬಣ್ಣ ಕಳಚಿಬೀಳ್ತಿರೋದು ಅಷ್ಟೇ ಸತ್ಯ. ಹತ್ತು ಕೆ.ಜಿ ಅಕ್ಕಿ ಕೋಡೋದಾಗಿ ಹೇಳಿದರು. ಈಗ ಸಿಗುತ್ತಿರುವುದು ಕೇಂದ್ರ ಸರ್ಕಾರ ಕೊಡುತ್ತಿರುವ ಐದು ಕೆಜಿ ಅಕ್ಕಿ ಮಾತ್ರ! 200 ಯೂನಿಟ್ ವಿದ್ಯುತ್ ಕೊಡ್ತೀವಿ ಅಂದ್ರು, ಅದರ ಪರಿಸ್ಥಿತಿ ಏನಾಗಿದೆ ನಿಮಗೆ ಗೊತ್ತಿದೆ. ಮಹಿಳೆಯರಿಗೆ 2000 ರೂ. ಕೊಡ್ತೀವಿ ಅಂದ್ರು, ಎರಡು ತಿಂಗಳು ಕೊಟ್ರು. ಈಗ ಯಾರಿಗೂ ತಲುಪುತ್ತಿಲ್ಲ. ವಿದ್ಯುತ್ ಕೂಡ ಸರಿಯಾಗಿ ಸಿಗ್ತಿಲ್ಲ. ಆರೇಳು ತಾಸು ವಿದ್ಯುತ್ ಕೊಡದ ಹಿನ್ನೆಲೆ ಬೆಳೆ ಕೂಡ ಒಣಗುತ್ತಿದೆʼʼ ಎಂದು ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದರು.

ಇದನ್ನೂ ಓದಿ: Commission politics: ಕಾಂಗ್ರೆಸ್‌ಗೆ ಕಮಿಷನ್‌ ತಿರುಗುಬಾಣ; ಸಿದ್ದರಾಮಯ್ಯ ಕಲೆಕ್ಷನ್‌ ಮಾಸ್ಟರ್‌ ಎಂದ ಬಿಜೆಪಿ

ಬರಗಾಲ ಬರುತ್ತೆ ಅಂತ ಹವಾಮಾನ ಇಲಾಖೆ ಮೊದಲೇ ಹೇಳಿತ್ತು

ʻʻಈ ಬಾರಿ ಮಳೆ ಕಡಿಮೆ ಎಂದು ಹವಾಮಾನ ಇಲಾಖೆ ಹಿಂದೆಯೇ ಎಚ್ಚರಿಕೆ ಕೊಟ್ಟಿತ್ತು. ಬರಗಾಲ ಬರಲಿದೆ ಅಂತ ಮೊದಲೇ ಹೇಳಿದರು. ಇದೇನು ತುರ್ತಾಗಿ ಬಂದಿದ್ದಲ್ಲ. ಮಳೆಯಾಗಿಲ್ಲ ಅಂದಾಗ ಯಡಿಯೂರಪ್ಪ ಅವರು ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ ಮಾಡಲಿಲ್ವಾ.? ಎಲ್ಲವನ್ನು ರಾಜಕಾರಣ ಮಾಡಿಕೊಂಡು ಕೂತಿದ್ದಾರೆ. ರೈತರ, ಬಡವರ ಕಾಳಜಿ ಇಲ್ಲದೆ ಕೂತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ಆಗ್ತಿಲ್ಲ. ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಿದ್ಯುತ್ ಖರೀದಿ ಮಾಡಬಹುದಿತ್ತು. ಅದರೆ ಈಗ ವಿದ್ಯುತ್ ಖರೀದಿ ಮಾಡುವ ಡ್ರಾಮ ಮಾಡ್ತಿದ್ದಾರೆ. ಇವರು ಹೇಳೋದೊಂದು, ಮಾಡುವುದು ಇನ್ನೊಂದು. ಇವರಿಂದಾಗಿ ರಾಜ್ಯದ ಜನರು ಅನುಭವಿಸುವಂತಾಗಿದೆʼʼ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ʻʻರೈತರು, ಬಡವರು ಎಲ್ಲರನ್ನೂ ಸಮಸ್ಯೆಗೆ ಸಿಲುಕಿಸಿದ ಇವರು ಈಗ ಲೋಕಸಭಾ ಚುನಾವಣೆ ಗೆದ್ದುಬಿಡ್ತೀವಿ ಅಂತ ಪೊಳ್ಳು ಭರವಸೆ ಕೊಡ್ತಿದ್ದಾರೆʼʼ ಎಂದರು.

Exit mobile version