Site icon Vistara News

BY Vijayendra: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕ; ಯುವ ನಾಯಕನಿಗೆ ಪಟ್ಟ

BY Vijayendra appointed as State BJP President

ಬೆಂಗಳೂರು: ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷರ (BJP State President) ನೇಮಕವಾಗಿದೆ. ಶಿಕಾರಿಪುರ ಶಾಸಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ, ಪ್ರಭಾವಿ ಯುವ ನಾಯಕ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ನೇಮಕವನ್ನು ಪ್ರಕಟಿಸಿದ್ದಾರೆ.

ದೀಪಾವಳಿಗೆ ಮುನ್ನವೇ ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ಮತ್ತು ಬಿಎಸ್‌ವೈ ಕುಟುಂಬಕ್ಕೆ ವಿಶೇಷ ಕೊಡುಗೆಯನ್ನು ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎಂಬ ಬಹುಕಾಲದ ಕಾತರಕ್ಕೆ ತೆರೆ ಬಿದ್ದಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷರಾಗಿದ್ದು, ಅವರ ಅಧಿಕಾರಾವಧಿ ಒಂದು ವರ್ಷದ ಹಿಂದೆಯೇ ಮುಕ್ತಾಯವಾಗಿದೆ.

ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಹೈಕಮಾಂಡ್‌ ದೊಡ್ಡದೊಂದು ನಿರ್ಧಾರವವನ್ನು ಮಾಡಿದೆ. ವಿಜಯೇಂದ್ರ ಅವರು ಕೂಡಾ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾದ ಪಕ್ಷಕ್ಕೆ ಮರುಶಕ್ತಿ ನೀಡಲು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ : BY Vijayendra : ಕಾರ್ಯಕರ್ತರ ನಡುವೆ ಶಾಸಕ ವಿಜಯೇಂದ್ರ ಹುಟ್ಟುಹಬ್ಬ ಆಚರಣೆ; ಲೋಕಸಭಾ ಚುನಾವಣೆಗಾಗಿ ರಾಜ್ಯ ಪ್ರವಾಸ ಸಂಕಲ್ಪ

ಶಿಕಾರಿಪುರದಿಂದ ಆಯ್ಕೆಯಾಗಿದ್ದರು

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಕ್ಷೇತ್ರಗಳಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವೂ ಒಂದಾಗಿತ್ತು. ಕಾರಣ, ನಾಲ್ಕೂವರೆ ದಶಕಗಳ ಕಾಲ ಶಿಕಾರಿಪುರ ಕ್ಷೇತ್ರವನ್ನಾಳಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ರ ಬಿ.ವೈ ವಿಜಯೇಂದ್ರ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರಿಂದ ಸಾಕಷ್ಟು ಕುತೂಹಲ ಮೂಡಿಸಿತ್ತು. ಬಿ.ವೈ. ವಿಜಯೇಂದ್ರ ಅವರು ಈ ಕ್ಷೇತ್ರದಿಂದ ಜಯ ಸಾಧಿಸಿದ್ದರು. ಈ ಮೂಲಕ ಬಿಜೆಪಿ ಪಾರುಪತ್ಯ ಈ ಕ್ಷೇತ್ರದಲ್ಲಿ ಮುಂದುವರಿದಿತ್ತು.
ಬಿ.ವೈ. ವಿಜಯೇಂದ್ರ ಈ ಬಾರಿ ಸ್ವತಃ ಅಖಾಡಕ್ಕೆ ಇಳಿದಿದ್ದರು. ಅಲ್ಲದೆ, ಭರ್ಜರಿ ಪ್ರಚಾರವನ್ನೂ ಮಾಡಿದ್ದರು.

Exit mobile version