Site icon Vistara News

BY Vijayendra: 100 ಮತವನ್ನು 200 ಮಾಡಿ; ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಟಾಸ್ಕ್‌; ಸಿಎಂ ವಿರುದ್ಧ ವಾಗ್ದಾಳಿ

BY Vijayendra calls on BJP workers to make 100 votes 200 Attack on CM Siddaramaiah

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರವನ್ನು ಮತ್ತು‌ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ನಿರಂತರವಾಗಿ ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ದ್ವಿಮುಖ ನೀತಿಯನ್ನು ಅನಾವರಣಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ. ಅಲ್ಲದೆ, ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆ. ಅಲ್ಲದೆ, 100 ಮತವನ್ನು 200 ಮಾಡಬೇಕು, 500 ಮತವನ್ನು ಮತ್ತಷ್ಟು ಹೆಚ್ಚು ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮ ಹಾಕಬೇಕು ಎಂದು ಟಾಸ್ಕ್‌ ನೀಡಿದ್ದಾರೆ.

ಮಲ್ಲೇಶ್ವರದ ಹವ್ಯಕ ಭವನದಲ್ಲಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ, ವಿದ್ಯುತ್ ನಿಯಂತ್ರಣ ಪ್ರಾಧಿಕಾರವು ವಿದ್ಯುತ್ ದರ ಏರಿಸಿದೆ ಎನ್ನುವ ಮುಖ್ಯಮಂತ್ರಿಗಳು ಹಣಕಾಸು ಆಯೋಗವು ತೆರಿಗೆ ಹಂಚಿಕೆಯನ್ನು ನಿರ್ಧರಿಸಿದ್ದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದೇಶ ಮಾತ್ರವಲ್ಲದೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದು ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಹಿತದೃಷ್ಟಿ, ದೇಶದ ರಕ್ಷಣೆಗಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸಿದ್ದಾರೆ. ರಾಜ್ಯದಲ್ಲೂ 28ಕ್ಕೆ 28 ಸೀಟುಗಳನ್ನು ಬಿಜೆಪಿ- ಜೆಡಿಎಸ್ ಪಕ್ಷಗಳು ಗೆಲ್ಲಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿ.ವೈ. ವಿಜಯೇಂದ್ರ, ಬಿಜೆಪಿ ಕಾರ್ಯಕರ್ತರು, ಪ್ರಮುಖರು ಮೋದಿಯವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯದಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಎಂಬ ಆತಂಕ ಕಾಂಗ್ರೆಸ್ ಸರ್ಕಾರಕ್ಕಿದೆ. ಈ ದುಷ್ಟ, ಭ್ರಷ್ಟ, ದುರಹಂಕಾರಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಮುಂದಾಗಬೇಕು ಎಂದ ಅವರು, ಗೆಲುವಿನ ಸವಾಲನ್ನು ಸವಾಲಾಗಿ ಸ್ವೀಕಾರ ಮಾಡೋಣ ಎಂದು‌ ಬಿ.ವೈ. ವಿಜಯೇಂದ್ರ ಕರೆ ನೀಡಿದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಪರಾಭವದಿಂದ ಕಾಂಗ್ರೆಸ್ ಪಕ್ಷಕ್ಕೆ ಆತಂಕ ಉಂಟಾಗಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ನಾವೇ ಮೋದಿ ಎಂದು ಭಾವಿಸಿ ಹಗಲಿರುಳೆನ್ನದೆ ದುಡಿಯಬೇಕು. ಅಭ್ಯರ್ಥಿಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ. ಅಭ್ಯರ್ಥಿ ಯಾರೇ ಇದ್ದರೂ ಕಮಲದ ಹೂವನ್ನು ಗೆಲ್ಲಿಸಲು ಮುಂದಾಗಿ ಎಂದು ಬಿ.ವೈ. ವಿಜಯೇಂದ್ರ ಮನವಿ ಮಾಡಿದರು.

ಒಬಿಸಿ ಮೋರ್ಚಾದ ಪದಾಧಿಕಾರಿಗಳು ತಾವು ಬಿಜೆಪಿ ಕಾರ್ಯಕರ್ತರು ಎಂಬುದನ್ನು ಮರೆಯಬಾರದು. ನಮ್ಮ ಪದಾಧಿಕಾರಿಗಳು ತಮ್ಮ ಬೂತ್ ಕಡೆ ಗಮನ ಹರಿಸಬೇಕು. ಮತದಾರರ ಪಟ್ಟಿ, ಬೂತ್ ಕಡೆ ಗಮನ ಕೊಡಬೇಕು. ಎಷ್ಟು ಹೆಸರು ಸೇರ್ಪಡೆ ಆಗಿದೆ? ಎಷ್ಟು ಹೆಸರು ರದ್ದಾಗಿದೆ ಎಂಬ ಕಡೆ ಗಮನಿಸಬೇಕು ಎಂದು ಬಿ.ವೈ. ವಿಜಯೇಂದ್ರ ಸೂಚಿಸಿದರು.

100 ಮತವನ್ನು 200 ಮತ ಮಾಡಲು ಟಾಸ್ಕ್‌

100 ಮತ ಬಂದಿದ್ದರೆ ಅದನ್ನು 200 ಮಾಡುವುದು ಹೇಗೆ? 500 ಮತ ಬಂದಿದ್ದರೆ ಅದನ್ನು ಮತ್ತಷ್ಟು ಹೆಚ್ಚಿಸುವುದು ಹೇಗೆ ಎಂಬ ಕಡೆ ಗಮನ ಹರಿಸಬೇಕಿದೆ. ಕ್ಷೇತ್ರಕ್ಕೆ ತೆರಳಿ ಬೂತ್ ಬಲಪಡಿಸುವ ಕಡೆ ಯೋಜನೆ ಮತ್ತು ಕಾರ್ಯಕ್ರಮ ರೂಪಿಸಬೇಕು ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಬರಲಿದೆ ಚುನಾವಣಾ ಫಲಿತಾಂಶ

ಸೂರ್ಯ ಚಂದ್ರ ಇರುವುದು ಹೇಗೆ ಸತ್ಯವೋ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಸತ್ಯ ಎಂದು ನುಡಿದ ಬಿ.ವೈ. ವಿಜಯೇಂದ್ರ, ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಫಲಿತಾಂಶವು ಈ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕಕ್ಕೆ ಲಭ್ಯವಾಗಲಿದೆ. 28ಕ್ಕೆ 28 ಸ್ಥಾನ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಜಾನೆಯಲ್ಲಿ ದುಡ್ಡಿಲ್ಲ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಕೇವಲ 8-9 ತಿಂಗಳಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ರಾಜ್ಯಕ್ಕೆ ಸಂಬಂಧಿಸಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಅದು ಪ್ರಕಟಿಸಿಲ್ಲ ಎಂದು ಟೀಕಿಸಿದ ಬಿ.ವೈ. ವಿಜಯೇಂದ್ರ, ನಮ್ಮ ಸರ್ಕಾರವು ಉತ್ತರ ಕರ್ನಾಟಕದ 7800 ಕೋಟಿ ‌ರೂಪಾಯಿ ಮೊತ್ತದ ನೀರಾವರಿ ಯೋಜನೆಗೆ ಅನುಮೋದನೆ ಕೊಟ್ಟಿತ್ತು. ಅದರ ಅನುಷ್ಠಾನಕ್ಕೆ ಕಾಂಗ್ರೆಸ್ ಮುಂದಾಗಿಲ್ಲ. ಖಜಾನೆಯಲ್ಲಿ ದುಡ್ಡಿಲ್ಲದಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: Sumalatha Ambareesh: ಸ್ಪರ್ಧೆ ಖಚಿತ ಎಂದ ಸುಮಲತಾ; ‌ಅವರು ಬಿಜೆಪಿಯೊಳಗೆ ಇರ್ತಾರೆ ಎಂದ ಜೋಶಿ

ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಯಶ್‍ಪಾಲ್ ಸುವರ್ಣ, ಒಬಿಸಿ ಮೋರ್ಚಾ ರಾಜ್ಯ ಪ್ರಭಾರಿ ಎಸ್.ಕೆ. ಕವೆರ್ಂಧನ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ್ ತಪಸ್ವಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅವ್ವಣ್ಣ ಮ್ಯಾಕರಿ, ಬಿ.ಸೋಮಶೇಖರ್ ಅವರು ಉಪಸ್ಥಿತರಿದ್ದರು.

Exit mobile version