Site icon Vistara News

Janardhana Reddy: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ; ವರಿಷ್ಠರ ಜತೆ ಚರ್ಚಿಸಿ ತೀರ್ಮಾನ: ವಿಜಯೇಂದ್ರ

BY Vijayendra in Raichur Mantralaya

ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು (Kalyana Rajya Pragati Party) ವಿಲೀನಗೊಳಿಸುವ ಸಂಬಂಧ ದೆಹಲಿಯಲ್ಲಿ ಪಕ್ಷ ವರಿಷ್ಠರ ಜತೆ ನಾನು ಚರ್ಚೆಯನ್ನೇ ಮಾಡಿಲ್ಲ. ಅವರೊಂದಿಗೆ ಚರ್ಚೆ ಮಾಡಿ, ಅವರ ಅಭಿಪ್ರಾಯವನ್ನು ಪಡೆದುಕೊಂಡ ಬಳಿಕವಷ್ಟೇ ಈ ವಿಚಾರದಲ್ಲಿ ನಾನು ಮುಂದುವರಿಯುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.

ರಾಯಚೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಧ್ಯಮದವರ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಈ ಬಗ್ಗೆ ತಾವು ವರಿಷ್ಠರ ಜತೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

BY Vijayendra in Raichur Mantralaya

ಸತೀಶ್‌ ಜಾರಕಿಹೊಳಿ ಬಿಜೆಪಿ ಸೇರ್ಪಡೆ; ಎಲ್ಲದಕ್ಕೂ ರಾಜಕೀಯ ಬೇಡ

ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಸತೀಶ್ ಜಾರಕಿಹೊಳಿ ಅವರು ಸಚಿವರಿದ್ದಾರೆ. ಒಬ್ಬ ಸಚಿವರು ಕೇಂದ್ರ ನಾಯಕರನ್ನು ಭೇಟಿ ಮಾಡೋದು ಸಹಜ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಹೇಳಿದರು.

BY Vijayendra in Raichur Mantralaya

ಕಾಂಗ್ರೆಸ್‌ನ ಕೆಲವು ನಾಯಕರು ಬಿಜೆಪಿಯತ್ತ ಮುಖ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಾಯಕತ್ವ ಒಪ್ಪಿಕೊಂಡು ಯಾರೇ ಬಂದರೂ ಪಕ್ಷದ ಹಿತದೃಷ್ಟಿಯಿಂದ ಅದು ಸರಿ ಇದ್ದರೆ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಅಧಿಕಾರದ ದರ್ಪ ಏರಿದೆ; ವಿಜಯೇಂದ್ರ ಕಿಡಿ

ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಣಯ ಮಾಡಿ‌, ನೂರಾರು ಅಡಿ ಎತ್ತರದ ಸ್ತಂಭದಲ್ಲಿ ಹನುಮನ ಧ್ವಜ ಹಾಕಿದ್ದಾರೆ. ಆದರೆ, ರಾಜ್ಯ ಸರ್ಕಾರ ಗೂಂಡಾ ವರ್ತನೆ ಮಾಡಿದೆ. ಪೊಲೀಸರ ಮೂಲಕ ದಬ್ಬಾಳಿಕೆ ನಡೆಸಿ ಧ್ವಜ ಇಳಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್‌ಗೆ ಅಧಿಕಾರದ ದರ್ಪ ಏರಿದೆ ಎಂದು ಕಿಡಿಕಾರಿದರು.

BY Vijayendra in Raichur Mantralaya

ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರಿಗೆ ಈ ಬಗ್ಗೆ ಕೇಳಲು ಇಷ್ಟಪಡುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸವನ್ನು ನಿಮ್ಮ ಸರ್ಕಾರವೇ ಮಾಡುತ್ತಿದೆ. ಗ್ರಾ.ಪಂ ನಿರ್ಣಯ ಸಹಿಸೋಕೆ‌ ಆಗಲ್ಲ ಅಂದರೆ ಏನು ಮಾಡಲು ಹೊರಟಿದ್ದೀರಿ? ಕಾನೂನು ಸುವ್ಯವಸ್ಥೆ ಹಾಳು ಮಾಡಲಾಗುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಇದನ್ನೂ ಓದಿ: BS Yediyurappa: ರೆಡ್ಡಿ, ಆಯನೂರು ಸೇರಿ ಪಕ್ಷ ಬಿಟ್ಟವರು ವಾಪಸ್‌ ಬರ್ತಾರೆ: ಬಿ.ಎಸ್.‌ ಯಡಿಯೂರಪ್ಪ

ರಾಯಚೂರಲ್ಲಿ ದೇಗುಲಗಳಿಗೆ ವಿಜಯೇಂದ್ರ ಭೇಟಿ

ಮೊದಲು ಮಂಚಾಲಮ್ಮ ದೇವಿ ದರ್ಶನ ಪಡೆದ ಬಿ.ವೈ. ವಿಜಯೇಂದ್ರ, ಬಳಿಕ ಮೂಲ ರಾಯರ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸದರು. ಮಂತ್ರಾಲಯದಲ್ಲಿ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದು ಮಂತ್ರಾಕ್ಷತೆ
ಪಡೆದುಕೊಂಡರು. ಈ ವೇಳೆ ಮಾಜಿ ಶಾಸಕ ಪಿ. ರಾಜೀವ್ ಮತ್ತು ಶರಣು ತಳ್ಳಿಕೇರಿ ಜತೆಗಿದ್ದರು. ಬಳಿಕ ವಿಜಯೇಂದ್ರ ಯಾದಗಿರಿ, ಬೀದರ್ ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.

Exit mobile version