ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಕಣ್ಣ ಮುಂದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಹಳಿ ತಪ್ಪಿದ್ದ ರಾಜ್ಯ ಬಿಜೆಪಿಯನ್ನು ಸರಿದಾರಿಗೆ ತರುವುದು ಬಿಜೆಪಿ ಹೈಕಮಾಂಡ್‌ಗೆ (BJP high command) ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಅಳೆದೂ ತೂಗಿ ಬಿಜೆಪಿಯಿಂದ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ (BY Vijayendra) ಅವರನ್ನು ನೇಮಕ ಮಾಡಲಾಗಿತ್ತು. ಈಗ ವಿಜಯೇಂದ್ರ ಅವರು ಅಧಿಕಾರ ಸ್ವೀಕಾರ ಮಾಡಿ ನೂರು ದಿನಗಳು ಪೂರೈಸಿದ್ದು, ಹಲವಾರು ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಅಲ್ಲದೆ, 100 ದಿನದಲ್ಲಿ 10 ಸಾವಿರ ಕಿ.ಮೀ. ಸಂಚಾರ ಮಾಡಿದ್ದಾರೆ.
ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಿದ್ದಂತೆ ಮೊದಲು ಅವರು ಮಾಡಿದ್ದ ಕೆಲಸ ಬೂತ್ ಮಟ್ಟದ ಅಧ್ಯಕ್ಷರೊಬ್ಬರ ಮನೆಗೆ ಭೇಟಿ ನೀಡಿರುವುದು. ಈ ಮೂಲಕ ತಾವು ಮೊದಲು ಕಾರ್ಯಕರ್ತರಿಗೆ ಬೆಲೆ, ಮನ್ನಣೆಯನ್ನು ಕೊಡುತ್ತೇನೆ. ಇದು ಕಾರ್ಯಕರ್ತರ ಪಕ್ಷ, ಕಾರ್ಯಕರ್ತರಿದ್ದರೆ ನಾಯಕರು ಎಂಬ ಸಂದೇಶವನ್ನು ರವಾನೆ ಮಾಡಿದರು. ಇದು ಹೆಚ್ಚಿನ ಕಾರ್ಯಕರ್ತರ ಮನಮುಟ್ಟಿತ್ತು. ಅಲ್ಲದೆ, ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಾದ ತೊಂದರೆ ಎದುರಾದರೂ ಪಕ್ಷದ ಕಾರ್ಯಕರ್ತರ ಪರವಾಗಿ ನಿಲ್ಲುತ್ತೇನೆ ಎಂಬ ಸಂದೇಶವನ್ನು ಕೊಡುವ ಮೂಲಕ ಕಾರ್ಯಕರ್ತರು ನನ್ನ ಆದ್ಯತೆ ಎಂಬ ಸಂದೇಶವನ್ನೂ ರವಾನೆ ಮಾಡಿದರು. ಈ ಎಲ್ಲದರ ನಡುವೆ ಮುನಿಸಿಕೊಂಡು ಪಕ್ಷ ತೊರೆದಿದ್ದ ನಾಯಕರನ್ನು ವಾಪಸ್ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅಲ್ಲದೆ, ಪಕ್ಷದೊಳಗೇ ಬೇಸರಗೊಂಡಿದ್ದ ನಾಯಕರನ್ನೂ ಸಮಾಧಾನಪಡಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.
100 ದಿನ – 10 ಸಾವಿರ ಕಿ.ಮೀ ಪ್ರವಾಸ- 10 ಸವಾಲು ಮೆಟ್ಟಿನಿಂತ ವಿಜಯೇಂದ್ರ!
ಬಿ.ವೈ ವಿಜಯೇಂದ್ರ ಅವರು ನೂರು ದಿನಗಳಲ್ಲಿ ಹಲವು ಸವಾಲುಗಳನ್ನು ಒಂದೊಂದಾಗೇ ಬಗೆಹರಿಸುತ್ತಾ ಬಂದಿದ್ದಾರೆ. ಕಳೆದ ನೂರು ದಿನಗಳಲ್ಲಿ ಒಂದು ದಿನವೂ ವಿರಾಮವನ್ನು ತೆಗೆದುಕೊಳ್ಳದ ವಿಜಯೇಂದ್ರ, ಈವರೆಗೆ 10 ಸಾವಿರ ಕಿ.ಮೀ. ಸಂಚರಿಸಿದ್ದಾರೆ. ವಿಧಾನಸಭಾ ಸೋಲಿನಿಂದ ಕಂಗೆಟ್ಟಿದ್ದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ.
ಹಿರಿಯ ನಾಯಕರಿಂದಲೂ ಶಹಬ್ಬಾಸ್‌ಗಿರಿ!
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಎಂದರೆ ಅದೊಂದು ಉನ್ನತ ಹುದ್ದೆ ಹಾಗೂ ಗೌರವವಾಗಿದೆ. ಇದಕ್ಕೆ ಹಿರಿಯ ನಾಯಕರನ್ನು ಆಯ್ಕೆ ಮಾಡಿಕೊಂಡು ಬಂದಿರುವುದು ಪರಿಪಾಠವಾಗಿತ್ತು. ಆದರೆ, ಯುವಕರಾಗಿರುವ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದ ಹೈಕಮಾಂಡ್ ಕ್ರಮದ ವಿರುದ್ಧ ಕೆಲವು ಹಿರಿಯ ನಾಯಕರು ಬೇಸರಗೊಂಡಿದ್ದರು. ಆದರೆ, ಈಗ ಅವರಿಂದಲೇ ಒಳ್ಳೆಯ ಸಂಘಟಕ ಎಂಬ ಹೆಸರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೂತನವಾಗಿ ರಾಜ್ಯದ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ಬಿ.ವೈ. ವಿಜಯೇಂದ್ರ ನೇಮಕ ಮಾಡಿದ್ದಾರೆ. ಜಿಲ್ಲಾ ಘಟಕಗಳನ್ನು ಪುನರ್ ರಚನೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಿಟ್ಟಿದ್ದ ಹಿರಿಯರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್‌ನಿಂದ ಮರಳಿ ಬಿಜೆಪಿಗೆ ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಅಸಮಾಧಾನಿತ ನಾಯಕರನ್ನು ಭೇಟಿ ಮಾಡಿ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ. ಮೈತ್ರಿ ಖಚಿತ ಆದ ಬಳಿಕ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಮನ್ವಯತೆಯನ್ನು ಸಾಧಿಸಿಕೊಂಡಿದ್ದಾರೆ. ಮುಂದಿನ ಹೋರಾಟದ ರೂಪುರೇಷೆಯಲ್ಲಿ ಯಾವುದೇ ರೀತಿಯ ಗೊಂದಲಗಳು ಆಗಬಾರದು ಎಂಬ ರೀತಿಯಲ್ಲಿ ಮುನ್ನೆಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಇದರ ಭಾಗವಾಗಿ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ.
ಸಂಘಟನೆಗೆ ಚುರುಕು
ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಂಘಟನೆಯನ್ನು ಚುರುಕುಗೊಳಿಸಿದ್ದಾರೆ. ಕರ್ನಾಟಕದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರವನ್ನೂ ಗೆಲ್ಲುವ ನಿಟ್ಟಿನಲ್ಲಿ ತಮ್ಮದೇ ಆದ ರಣತಂತ್ರವನ್ನು ರೂಪಿಸಲು ಮುಂದಾಗಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸರ್ವೆ ರಿಪೋರ್ಟ್ ಮತ್ತು ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಂದೇಶವನ್ನು ರವಾನೆ ಮಾಡಿದ್ದಾರೆ.
ಕಳೆದ ನೂರು ದಿನಗಳಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದಲ್ಲ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಒಟ್ಟಾರೆ ಯುವಕರಲ್ಲಿ ಎಲೆಕ್ಷನ್ ಉತ್ಸಾಹ ಕಂಡು ಬಂದಿದೆ. ಅಲ್ಲದೆ, ಬಿಜೆಪಿಯ ಹಿರಿಯರಲ್ಲಿ ಸಹ ವಿಜಯೇಂದ್ರ ಮೇಲೆ ನಂಬಿಕೆ ಬಂದಿದೆ. ಸದಾನಂದ ಗೌಡ ಸೇರಿದಂತೆ ಹಲವು ಹಿರಿಯ ನಾಯಕರು ವಿಜಯೇಂದ್ರ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಈ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಾಧಕ-ಬಾಧಕಗಳನ್ನು ಲೆಕ್ಕ ಹಾಕಿಯೇ ರಾಜ್ಯ ಬಿಜೆಪಿಯ ನೊಗವನ್ನು ಬಿ.ವೈ. ವಿಜಯೇಂದ್ರ ಅವರ ಹೆಗಲಿಗೆ ಕಟ್ಟಿದ್ದಾರೆ. ಹೀಗಾಗಿ ಈಗ ದೆಹಲಿ ನಾಯಕರ ಭೇಟಿ ಸುಗಮವಾಗಿ ಸಿಗುತ್ತಿದೆ.
ಸಂಘಟನೆ ಚುರುಕಿಗೆ ಒತ್ತು
ಕಳೆದ ಚುನಾವಣೆ ವೇಳೆಗೆ ರಾಜ್ಯ ಬಿಜೆಪಿ ನಾವಿಕನಿಲ್ಲದ ದೋಣಿಯಂತೆ ಆಗಿತ್ತು. ಆಗಲೇ ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ, ಚುನಾವಣೆಯಲ್ಲಿ ಪಕ್ಷ ಸೋಲು ಕಂಡ ಬಳಿಕ ಒಬ್ಬ ಗಟ್ಟಿ ನಾಯಕನ ಅಗತ್ಯವಿದ್ದು, ಲೋಕಸಭೆಗೆ ಪಕ್ಷವನ್ನು ಸಂಘಟಿಸಬಲ್ಲ, ಎಲ್ಲರನ್ನೂ ಜತೆಗೆ ಕರೆದೊಯ್ಯಬಲ್ಲ ನಾಯಕನ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರ ಗ್ರೌಂಡ್ ರಿಪೋರ್ಟ್ ಪಡೆದುಕೊಂಡಿದ್ದ ಹೈಕಮಾಂಡ್ ಕೊನೆಗೆ ಅವರ ಆಯ್ಕೆಯನ್ನು ಮಾಡಿತ್ತು. ಇಲ್ಲಿ ಕೇವಲ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಆಯ್ಕೆ ಮಾನದಂಡವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ಸಂದೇಶವನ್ನು ಸಹ ಹೈಕಮಾಂಡ್ ರವಾನೆ ಮಾಡಿತ್ತು. ಏಕೆಂದರೆ, ಅದಾಗಲೇ ರಾಜ್ಯದಲ್ಲಿ ಒಂದೆರಡು ಉಪ ಚುನಾವಣೆಯ ಗೆಲುವು, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯ ಸುತ್ತಾಟ, ಇದಲ್ಲದೆ, ಯುವ ಜನತೆಗೆ ವಿಜಯೇಂದ್ರ ಮೇಲಿರುವ ಕ್ರೇಜ್ ಸೇರಿದಂತೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈಗ ಶತದಿನ ಪೂರೈಸಿರುವ ಬಿ.ವೈ. ವಿಜಯೇಂದ್ರ, ಲೋಕಸಭೆ ಚುನಾವಣೆಯಲ್ಲಿ ಕ್ಲೀನ್‌ಸ್ವೀಪ್ ಮಾಡಲು ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ.