Site icon Vistara News

BY Vijayendra: ಕಾಂಗ್ರೆಸ್‌ಗೆ ಕೈಕೊಟ್ಟ ಶೆಟ್ಟರ್; ಬಿ.ವೈ. ವಿಜಯೇಂದ್ರ ಮೊದಲ ಆಪರೇಷನ್‌ ಸಕ್ಸಸ್‌

BY Vijayendra and Jagadish Shetter

ಬೆಂಗಳೂರು: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ (Jagadish Shetter) ಘರ್‌ ವಾಪ್ಸಿ (Ghar Wapsi) ಆಗಿದೆ. ಈ ಮೂಲಕ ಕಾಂಗ್ರೆಸ್‌ಗೆ ಠಕ್ಕರ್‌ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡು ಕಾಂಗ್ರೆಸ್‌ ಹೋಗಿದ್ದ ಶೆಟ್ಟರ್‌, ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಲೇ ಇದ್ದರು. ಈ ಎಲ್ಲದರ ನಡುವೆಯೂ ಅವರನ್ನು ರಿವರ್ಸ್‌ ಆಪರೇಷನ್‌ ಮೂಲಕ ಮರಳಿ ಗೂಡಿಗೆ ತರಲಾಗಿದೆ. ಬಿ.ವೈ. ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷರಾದ ಬಳಿಕ ನಡೆಸಿದ ಮೊದಲ ಆಪರೇಷನ್‌ ಇದಾಗಿದ್ದು, ಸಕ್ಸಸ್‌ ಆಗಿದೆ. ಅವರು ಹೇಳಿದಂತೆಯೇ ಮಾಡಿ ತೋರಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಬಿ.ವೈ. ವಿಜಯೇಂದ್ರ ಅವರು, ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದ್ದರು. ಅಲ್ಲದೆ, ಎಲ್ಲ ಹಿರಿಯರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದಾಗಿಯೂ ಹೇಳಿದ್ದರು. ಇದರ ಜತೆಗೆ ಪಕ್ಷ ತೊರೆದ ನಾಯಕರನ್ನೂ ವಾಪಸ್‌ ಕರೆತರುವುದಾಗಿ ಹೇಳಿಕೆ ನೀಡಿದ್ದರು. ಈಗ ಅದರ ಭಾಗವಾಗಿ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಹಳ ಹಿಂದಿನಿಂದಲೇ ಮಾತುಕತೆ

ಒಂದು ಮಾಹಿತಿಯ ಪ್ರಕಾರ, ಜಗದೀಶ್‌ ಶೆಟ್ಟರ್‌ ಅವರನ್ನು ಬಹಳ ಹಿಂದೆಯೇ ಸಂಪರ್ಕ ಮಾಡಲಾಗಿತ್ತು. ಶೆಟ್ಟರ್‌ ಸಹ ಕಾಂಗ್ರೆಸ್‌ನಲ್ಲಿ ಅಷ್ಟಾಗಿ ಒಗ್ಗಿಕೊಳ್ಳಲಾಗದೆ ತೊಳಲಾಟದಲ್ಲಿದ್ದರು ಎನ್ನಲಾಗಿದೆ. ಇದರ ಜತೆಗೆ ಲಿಂಗಾಯತ ಮುಖಂಡರಾಗಿರುವ ಜಗದೀಶ್‌ ಶೆಟ್ಟರ್‌ ಅವರನ್ನು ವಾಪಸ್‌ ಕರೆತಂದರೆ ಲೋಕಸಭಾ ಚುನಾವಣೆಯಲ್ಲಿ ಪ್ಲಸ್‌ ಆಗಲಿದೆ ಎಂಬ ಲೆಕ್ಕಾಚಾರ ಬಿ.ವೈ. ವಿಜಯೇಂದ್ರ ಅವರದ್ದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೆಟ್ಟರ್‌ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರೂ ಕಾಂಗ್ರೆಸ್‌ ಪಕ್ಷಕ್ಕೆ ಅವರಿಂದ ಸಾಕಷ್ಟು ಲಾಭವಾಗಿತ್ತು. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದವರು ಕಾಂಗ್ರೆಸ್‌ ಬೆಂಬಲಕ್ಕೆ ನಿಂತರು. ಇದರಿಂದ ಬಿಜೆಪಿಯ ಸಾಂಪ್ರದಾಯಿಕ ವೋಟುಗಳು ವಿಭಜನೆಯಾಯಿತು. ಈ ಪರಿಪಾಠ ಲೋಕಸಭೆಗೂ ಮುಂದುವರಿಯುತ್ತದೆಯೇ ಎಂಬ ಅಂಜಿಕೆ ಇತ್ತು. ಆದರೆ, ಅಷ್ಟರಲ್ಲಿ ಅವರನ್ನು ವಾಪಸ್‌ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಿಯಾಗಿತ್ತು.

ದೆಹಲಿಗೆ ಕರೆದೊಯ್ದಿದ್ದ ವಿಜಯೇಂದ್ರ

ಇನ್ನು ಜಗದೀಶ್‌ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್‌ನಿಂದ ಒಪ್ಪಿಗೆ ಪಡೆದುಕೊಂಡಿದ್ದ ಬಿ.ವೈ. ವಿಜಯೇಂದ್ರ, ಗುರುವಾರ ಗೃಹ ಸಚಿವ ಅಮಿತ್‌ ಶಾ ಅವರ ಜತೆಗೂ ಭೇಟಿ ಮಾಡಿಸಿ ಮಾತುಕತೆಗೆ ವೇದಿಕೆ ಒದಗಿಸಿದ್ದಾರೆ. ಈ ವೇಳೆ ಬಿ.ಎಸ್.‌ ಯಡಿಯೂರಪ್ಪ ಅವರೂ ಸಹ ಜತೆಗಿದ್ದರು. ಅಲ್ಲದೆ, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಬಿಜೆಪಿ ಹೈಕಮಾಂಡ್‌ನಿಂದ ಶೆಟ್ಟರ್‌ಗೆ ಅಭಯ ಸಿಕ್ಕಿದೆ ಎನ್ನಲಾಗಿದೆ.

ಶೆಟ್ಟರ್‌ ಸೇರ್ಪಡೆ ಹಿಂದಿದೆ ಲೆಕ್ಕಾಚಾರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ – ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಜಗದೀಶ್‌ ಶೆಟ್ಟರ್‌, ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ವಿರುದ್ಧ ಸೋಲು ಕಂಡಿದ್ದರು. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತಗಳನ್ನು ತರುವಲ್ಲಿ ಶೆಟ್ಟರ್‌ ಯಶಸ್ವಿಯಾಗಿದ್ದರು. ಈಗ ಲೋಕಸಭೆ ಚುನಾವಣೆ ಇರುವುದರಿಂದ ಅವರನ್ನು ಪಕ್ಷಕ್ಕೆ ಮರಳಿ ತಂದರೆ ಬಿಜೆಪಿ ಲಿಂಗಾಯತ ಮುಖಂಡರನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ನೀಡದಂತೆ ಆಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

ಜಗದೀಶ್‌ ಶೆಟ್ಟರ್‌ ಆಗಮನದಿಂದ ಬಿಜೆಪಿಗೇನು ಲಾಭ?

1.ಬಿಜೆಪಿಯು ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಕಾಂಗ್ರೆಸ್‌ ಮಾಡುತ್ತಾ ಬಂದಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತೋರಿಸಿದಂತಾಗುತ್ತದೆ.

2.ಧಾರವಾಡ, ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌‌ ಅವರ ಪ್ರಭಾವ ಬಳಸಿಕೊಳ್ಳಬಹುದು.

3.ಹಿರಿಯ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡುತ್ತದೆ ಎಂಬ ಅಪವಾದ ತಪ್ಪಲಿದೆ.

4.ಸಮರ್ಥ ಹಿರಿಯ ನಾಯಕರ ಕೊರತೆಯನ್ನು ಎದುರಿಸುತ್ತಿರುವ ರಾಜ್ಯ ಬಿಜೆಪಿಗೆ ಕಟ್ಟಾಳು ಮಾರ್ಗದರ್ಶಕರೊಬ್ಬರು ಸಿಕ್ಕಂತಾಗಲಿದೆ.

5. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ಮತ್ತು ಇತರ ನಾಯಕರಿಗೆ ನೀಡಿದಂತಾಗಿದೆ.

ಇದನ್ನೂ ಓದಿ : Jagadish Shetter: ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್‌ಗೆ ನೀಡಿದ ಆ 3 ಆಫರ್‌ ಏನು?

ಶೆಟ್ಟರ್‌ ನಿರ್ಗಮನದಿಂದ ಕಾಂಗ್ರೆಸ್‌ಗೆ ನಷ್ಟಗಳೇನು?

1. ಬಿಜೆಪಿಯಿಂದ ಬಂದ ಹಿರಿಯ ಲಿಂಗಾಯಿತ ನಾಯಕರೊಬ್ಬರನ್ನು ಸರಿಯಾಗಿ ಸಂಬಾಳಿಸದ ಅಪವಾದ ಹೊತ್ತುಕೊಳ್ಳಬೇಕಾಗುತ್ತದೆ.

2. ಕಾಂಗ್ರೆಸ್‌ನತ್ತ ಹೊರಟಿದ್ದ ಬಿಜೆಪಿ ನಾಯಕರು ಈ ಬೆಳವಣಿಗೆಯಿಂದ ಪಕ್ಷ ಸೇರ್ಪಡೆಯಾಗಲು ಹಿಂದೆ-ಮುಂದೆ ನೋಡಬಹುದು.

3. ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯಿತ ಮತದಾರರನ್ನು ಸೆಳೆಯಲು ಮತ್ತೆ ಕಷ್ಟಪಡಬೇಕಾಗುತ್ತದೆ.

4. ಬಿಜೆಪಿಯ ತಂತ್ರಗಾರಿಕೆಯನ್ನು ಬಲ್ಲ ಓರ್ವ ಹಿರಿಯ ನಾಯಕರ ಅನುಭವವನ್ನು ಕಳೆದುಕೊಂಡಂತಾಗಲಿದೆ.

5. ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಸೇರ್ಪಡೆ ಕಾಂಗ್ರೆಸ್‌ ಪಕ್ಷದ ಪರವಾಗಿ ಉಂಟು ಮಾಡಿದ್ದ ಪಾಸಿಟಿವ್‌ ಅಲೆಯು, ನೆಗೆಟಿವ್‌ ಆಗಿ ಮಾರ್ಪಡಬಹುದು.

Exit mobile version