ಬೆಂಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ (BY Vijayendra) ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ತಮ್ಮ ಹೋರಾಟದ ದಿನಗಳನ್ನು ಎಚ್‌ಡಿಡಿ ನೆನಪು ಮಾಡಿಕೊಂಡಿದ್ದಾರೆ. ಅಲ್ಲದೆ, ತಂದೆ ಬಿಎಸ್‌ವೈ ದಾರಿಯಲ್ಲೇ ಕ್ರಮಿಸು, ನಿನಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಶುಭ ಹಾರೈಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ, ವಿಜಯೇಂದ್ರ, ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ ಆಶೀರ್ವಾದವನ್ನು ಪಡೆದಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ದೇವೇಗೌಡರು ತುಂಬಾ ಖುಷಿಪಟ್ಟರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಸೇರಿಕೊಂಡು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಜತೆಗೆ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: BY Vijayendra : ವಿಜಯೇಂದ್ರ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಟೆನ್ಶನ್; ಶೆಟ್ಟರ್, ಸವದಿಗೆ ಸಿಗಲಿದೆಯೇ ಸಚಿವ ಭಾಗ್ಯ?
ಈ ವೇಳೆ ಎಚ್.ಡಿ. ದೇವೇಗೌಡ ಅವರು ತಮ್ಮ ತಂದೆಯವರ ಹೋರಾಟದ ಬಗ್ಗೆ ಹಾಗೂ ಅವರ ಹೋರಾಟದ ದಿನಗಳ ಬಗ್ಗೆ ನೆನಪು ಮಾಡಿಕೊಂಡರು. ಮಾಜಿ ಪ್ರಧಾನ ಮಂತ್ರಿಗಳು, ದೇವೇಗೌಡರನ್ನು ಇವತ್ತು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅವರು ಬಹಳ ಹೆಮ್ಮೆಪಟ್ಟರು. ಬಿಜೆಪಿಯು ಒಂದು ದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಇಂತಹ ಪಕ್ಷದಲ್ಲಿ ಕಿರಿಯವನಾದ ನಿನಗೆ ಪ್ರಧಾನಿ ನರೇಂದ್ರ ಮೋದಿಯವರು ಅವಕಾಶ ಕೊಟ್ಟಿದ್ದಾರೆ. ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯಾ, ಅವರ ದಾರಿಯಲ್ಲಿ ಹೋಗು ನಿನಗೂ ಒಳ್ಳೆಯ ಯಶಸ್ಸು ಸಿಗುತ್ತದೆ ಎಂದು ಶುಭ ಹಾರೈಸಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಂಡು, ವ್ಯತ್ಯಾಸಗಳು ಕಂಡುಬಂದಲ್ಲಿ ಸರಿಪಡಿಸಿಕೊಂಡು ಮುಂದೆ ಹೋಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾತಿನಿಂದ ನನಗೆ ತುಂಬಾ ಸಂತೋಷ ಆಯ್ತು. ಅವರ ಸಲಹೆಗಳನ್ನು ನಾನು ಅಳವಡಿಸಿಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ ಬಿ.ವೈ. ವಿಜಯೇಂದ್ರ, ಮೈತ್ರಿ ಮಾತುಕತೆ ಕುರಿತು ಕುಮಾರಸ್ವಾಮಿ ಜತೆ ರಾಷ್ಟ್ರೀಯ ನಾಯಕರ ಭೇಟಿ ಮಾಡುವ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಲೋಕಸಭಾ ಚುನಾವಣೆಗೆ ಯೂತ್ ಡೈನಾಮಿಕ್ ಲೀಡರ್ ಬೇಕಿತ್ತು. ಅದಕ್ಕಾಗಿ ಬಿ.ವೈ. ವಿಜಯೇಂದ್ರ ಅಣ್ಣ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ನಾವೆಲ್ಲ ಸೇರಿಕೊಂಡು ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನ ಪ್ರಧಾನಿ ಮಾಡಲು ದುಡಿಯುತ್ತೇವೆ. ರಾಜ್ಯದಲ್ಲಿ 22 ರಿಂದ 24 ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಅವರನ್ನು ಘೋಷಣೆ ಮಾಡುತ್ತಿದ್ದಂತೆ ಇಡೀ ರಾಜ್ಯದ ಯುವಕರಲ್ಲಿ ಸಂಚಲನ ಮೂಡಿಸಿದೆ. ಮುಂದಿನ ಚುನಾವಣೆಗೆ ಒಬ್ಬ ಡೈನಾಮಿಕ್ ಲೀಡರ್ ಬೇಕು ಎಂಬ ಭಾವನೆ ಕಾಡುತ್ತಿತ್ತು. ವಿಜಯೇಂದ್ರ ನೇಮಕದಿಂದ ಆ ಭಾವನೆಯಿಂದ ನಾವು ಹೊರಗೆ ಬಂದಿದ್ದೇವೆ. ಹೀಗಾಗಿ ಅವರು ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಸಣ್ಣಪುಟ್ಟ ಮಾಹಿತಿ ನೀಡಿ, ಸಲಹೆ ಪಡೆದುಕೊಂಡಿದ್ದಾರೆ. ಬರುವ ಎಲ್ಲ ಚುನಾವಣೆಗಳಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಪ್ರಮಾಣ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: BY Vijayendra : ಹಿರಿಯರ ಮನೆಯತ್ತ ವಿಜಯೇಂದ್ರ ನಡೆ; ಬೊಮ್ಮಾಯಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ
ಮುಂದಿನ ದಿನಗಳಲ್ಲಿ ಬಿ.ವೈ. ವಿಜಯೇಂದ್ರ ಜತೆ ಸೇರಿಕೊಂಡು, ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು. ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುವ ಕೆಲಸವನ್ನು ಒಟ್ಟಾಗಿ ಮಾಡುತ್ತೇವೆ. ಮತ್ತೊಮ್ಮೆ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗೋಕೆ ನಾವು ಬೆಂಬಲ ಕೊಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.