ಶಿವಮೊಗ್ಗ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ (Lok Sabha Election 2024) ಅಭ್ಯರ್ಥಿಗಳ ಆಯ್ಕೆ ನನ್ನೊಬ್ಬನದು ಅಲ್ಲ. ನಾನೊಬ್ಬನೇ ಆಯ್ಕೆ ಮಾಡಲು ಸಾಧ್ಯವಿಲ್ಲ. ನನ್ನೊಬ್ಬನ ಮಾತು ಕೇಳುವ ಸ್ಥಿತಿಯಲ್ಲಿ ರಾಷ್ಟ್ರೀಯ ನಾಯಕರಿಲ್ಲ. ಯಾರೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ರು ಅದು ರಾಷ್ಟ್ರೀಯ ನಾಯಕರ (BJP National Leaders) ಆಯ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ಶಿವಮೊಗ್ಗದಲ್ಲಿ ನಡೆಯುವ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ (Shivamogga BJP Samavesha) ಭಾಗವಹಿಸಲಿದ್ದಾರೆ. ಅದರ ಪೂರ್ವಭಾವಿಯಾಗಿ ಮಾತನಾಡಿದ ವಿಜಯೇಂದ್ರ ಅವರು, ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (KS Eshwarappa) ಅವರಿಗೆ ಟಿಕೆಟ್ ಸಿಗದಿರುವುದರಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ʻʻಈಶ್ವರಪ್ಪನವರು ಹಿರಿಯರಿದ್ದಾರೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಾನೊಬ್ಬ ರಾಜ್ಯಾಧ್ಯಕ್ಷನಾಗಿ ಎಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆʼʼ ಎಂದರು.
ʻʻಹಿಂದೆ ನನಗೂ ಕೂಡಾ ವರುಣಾ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿತ್ತು. ಆದರೆ ಅದು ವರಿಷ್ಠರ ತೀರ್ಮಾನ ಎಂದುಕೊಂಡು ಪಕ್ಷದ ಕೆಲಸ ಮಾಡಿದ್ದೆ. ಈಗಲೂ ಈಶ್ವರಪ್ಪ ಮತ್ತಿತರರ ಬಂಡಾಯ ವಿಚಾರ ಬಗೆಹರಿಯುತ್ತದೆ ಎಂಬ ವಿಶ್ವಾಸ ಇದೆʼʼ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: PM Narednra Modi: ಶಿವಮೊಗ್ಗದ ಮೋದಿ ಸಭೆಯಲ್ಲಿ 3 ಲಕ್ಷ ಜನ ಭಾಗಿ, ಈ ದಾರಿಗಳು ಇಂದು ಬಂದ್, ಗಮನಿಸಿ
ನನ್ನನ್ನು ರಾಜ್ಯಾಧ್ಯಕ್ಷ ಮಾಡಿದ್ದು ಬಿಎಸ್‌ವೈ ಅಲ್ಲ, ರಾಷ್ಟ್ರೀಯ ನಾಯಕರು
ಯಾರೆಲ್ಲ ಅಭ್ಯರ್ಥಿ ಆಗಿ ತೀರ್ಮಾನ ಆಗಿದೆಯೋ ಅದು ರಾಷ್ಟ್ರೀಯ ನಾಯಕರ ತೀರ್ಮಾನ. ಅದಕ್ಕೆ ಗೌರವ ಕೊಡಬೇಕಾಗುತ್ತದೆ. 20 ಕ್ಷೇತ್ರಗಳ ಟಿಕೆಟ್ ಘೋಷಣೆ ಸಹ ವರಿಷ್ಠರ ತೀರ್ಮಾನ ದಂತೆ ಆಗಿದೆ. ನಾವು ನಮ್ಮ ಅಭಿಪ್ರಾಯ ಕೊಟ್ಟಿದ್ದೇವೆ ಅಷ್ಟೆ. ಟಿಕೆಟ್ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ. ಈಶ್ವರಪ್ಪ ಬಂಡಾಯದ ಬಗ್ಗೆ ಈಗಲೇ ಮಾತನಾಡುವುದು ಬೇಡ. ನಮ್ಮ ವರಿಷ್ಠರು ಮಾತನಾಡುತ್ತಾರೆʼʼ ಎಂದು ವಿಜಯೇಂದ್ರ ಹೇಳಿದರು.
ಇದೇ ವೇಳೆ, ನನ್ನನ್ನ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ್ದು ಯಡಿಯೂರಪ್ಪನವರಲ್ಲ. ಬಿಜೆಪಿ ಪಾರ್ಟಿ ಮಾಡಿದೆ. ನನ್ನ ಆಯ್ಕೆ ಯಾಕೆ ಮಾಡಲಾಯಿತು ಅನ್ನೋ ಬಗ್ಗೆ ಜೆ.ಪಿ. ನಡ್ಡಾ ಅವರು ಕೂಡ ಮಾತನಾಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ನಗರಕ್ಕೆ ಸಿಮೀತವಾಗಿದ್ದ ಪಕ್ಷವನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಿದ್ದಾರೆ. ಅವರು ಸರ್ಕಾರ ರಚನೆ ಮಾಡಿ ಸಚಿವರಾಗಿಯೂ ಹಲವರಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ಕಡೆ ಬೆರಳು ತೋರಿಸುವುದು ಬೇಡ ಎಂದು ವಿಜಯೇಂದ್ರ ಹೇಳಿದರು.
BY Vijayendra ಶಿವಮೊಗ್ಗದಲ್ಲಿ ಕಾರ್ಯಕರ್ತರ ರಣೋತ್ಸಾಹ
ಶಿವಮೊಗ್ಗದಲ್ಲಿ ಕಾರ್ಯಕರ್ತರ ಉತ್ಸಾಹ ದೊಡ್ಡ ಮಟ್ಟದಲ್ಲಿದೆ. ಮೋದಿ ಅವರ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದು ಹೇಳಿದ ಅವರು, ಶಿವಮೊಗ್ಗ ಕ್ಷೇತ್ರದಲ್ಲಿ ಸಂಸದರಾಗಿರುವ ರಾಘವೇಂದ್ರ ಅವರು ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ಅವರನ್ನು ಜನರು ಒಪ್ಪಿಕೊಳ್ಳುತ್ತಾರೆ. ಅವರು ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲ ಪಡಿಸುವ ಕೆಲಸ ಇದೆ ಎಂದು ಹೇಳಿದರು.
ನಮ್ಮ ಕರ್ನಾಟಕದ ಜನತೆ ಪ್ರಜ್ಞಾವಂತರಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಏನು ಮಾಡಬೇಕು? ಲೋಕಸಭಾ ಚುನಾವಣೆಯಲ್ಲಿ ಏನು ಮಾಡಬೇಕು ಅನ್ನೋದು ನಮ್ಮ ಜನರಿಗೆ ಗೊತ್ತಿದೆ ಎಂದು ಹೇಳಿದ ಅವರು, ಕಾಂಗ್ರೆಸ್ ಗೆ ಅಭ್ಯರ್ಥಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಡೆಪಾಸಿಟ್ ಕಳೆದುಕೊಳ್ಳುತ್ತೇವೆ ಎನ್ನುವ ಭಯದಲ್ಲಿ ಸಚಿವರು ಅಭ್ಯರ್ಥಿ ಆಗಲು ಹಿಂದೇಟು ಹಾಕ್ತಿದ್ದಾರೆ ಎಂದರು.
ಕೋಲಾರಕ್ಕೆ ಬಿಜೆಪಿ ಬೇಡಿಕೆ ಇಟ್ಟಿದೆ ಎಂದ ವಿಜಯೇಂದ್ರ
ಜೆಡಿಎಸ್ ಜತೆಗೆ ಏನು ಮೈತ್ರಿ ನಡೆದಿದೆ. ಯಾವ ಸೀಟು ಅವರಿಗೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೈಕಮಾಂಡ್ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕೋಲಾರವನ್ನು ಉಳಿಸಿಕೊಳ್ಳಲು ಬಿಜೆಪಿ ಕಾರ್ಯಕರ್ತರು ಕೇಳ್ತಿದ್ದಾರೆ. ನಮ್ಮ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇವೆ. ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು ವಿಜಯೇಂದ್ರ.