Site icon Vistara News

BY Vijayendra : ಹಿರಿಯರ ಮನೆಯತ್ತ ವಿಜಯೇಂದ್ರ ನಡೆ; ಬೊಮ್ಮಾಯಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ

BY Vijayendra meets Basavaraj bommai

ಬೆಂಗಳೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ (BJP State President) ನೇಮಕಗೊಂಡಿರುವ ಬಿ.ವೈ. ವಿಜಯೇಂದ್ರ (BY Vijayendra) ಅವರು ಮೊದಲು ಬೂತ್‌ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಮೂಲಕ ಅಧ್ಯಕ್ಷ ಸ್ಥಾನದ ಕಾರ್ಯಭಾರವನ್ನು ಆರಂಭ ಮಾಡಿದ್ದರು. ಇದಾದ ಬಳಿಕ ಈಗ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೋಮವಾರ (ನ. 13) ಬೆಳಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ, ಅವರ ಆಶೀರ್ವಾದವನ್ನು ಪಡೆದುಕೊಂಡರು.

ಈ ವೇಳೆ ಕೆಲವು ಕಾಲ ಮಾತುಕತೆ ನಡೆಸಿದ ಉಭಯ ನಾಯಕರು, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಮಾರ್ಗದರ್ಶನ ಹಾಗೂ ಸಲಹೆ ನೀಡುವಂತೆ ಇದೇ ವೇಳೆ ಬಿ.ವೈ. ವಿಜಯೇಂದ್ರ ಅವರು ಬಸವರಾಜ ಬೊಮ್ಮಾಯಿ ಬಳಿ ಕೇಳಿಕೊಂಡರು.

ಇದಕ್ಕೂ ಮೊದಲು ತಮ್ಮ ನಿವಾಸಕ್ಕೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರಿಗೆ ಬಸವರಾಜ ಬೊಮ್ಮಾಯಿ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ, ಪರಿಷತ್ ಸದಸ್ಯ ಮುನಿರಾಜುಗೌಡ ಇತರರು ಇದ್ದರು.

ಸದಾ ಜತೆಗೆ ಇರುತ್ತೇನೆ ಎಂದಿರುವ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಮತ್ತು ಮಾರ್ಗದರ್ಶನ ಬೇಕು ಎಂದು ಕೇಳಿದ್ದೇನೆ. ಅವರು ಅತ್ಯಂತ ಸಂತೋಷಪಟ್ಟರು. ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಸದಾ ನಿನ್ನ ಜತೆ ಇರುತ್ತೇನೆಂದು ಹೇಳಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷವನ್ನು ಸಂಘಟನೆ ಮಾಡೋಣ ಎಂದಿದ್ದಾರೆ. ಬುಧವಾರದಂದು ನಾನು ಜವಾಬ್ದಾರಿ ತಗೆದುಕೊಳ್ಳುತ್ತಿದ್ದೇನೆ. ನೀವೂ ಬರಬೇಕು ಅಂತ ಆಹ್ವಾನಿಸಿದ್ದೇನೆ. ಬಂದು ಆಶೀರ್ವಾದ ಮಾಡಬೇಕು ಅಂತ ಮನವಿ‌ ಮಾಡಿಕೊಂಡಿದ್ದೇನೆ. ಇದಕ್ಕೆ ಅವರು, ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸಿ ಪ್ರವಾಸ ಮಾಡೋಣ ಎಂಬುದಾಗಿ ಹೇಳಿರುವುದಾಗಿ ತಿಳಿಸಿದರು.

ಎಚ್.ಡಿ. ದೇವೇಗೌಡ, ಎಸ್‌ಎಂಕೆ ಭೇಟಿ ಮಾಡಲಿರುವ ವಿಜಯೇಂದ್ರ

ಇದಾದ ಬಳಿಕ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಲಿರುವ ಬಿ.ವೈ. ವಿಜಯೇಂದ್ರ ಅವರು ಆಶೀರ್ವಾದವನ್ನು ಪಡೆದುಕೊಳ್ಳಲಿದ್ದಾರೆ.

ಹಿರಿಯರ ವಿಶ್ವಾಸ ಪಡೆಯಲು ಮುಂದಾದ ವಿಜಯೇಂದ್ರ

ಇದೇ ಬುಧವಾರ (ನ. 15) ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಪಡೆಯಲಿರುವ ಬಿ.ವೈ. ವಿಜಯೇಂದ್ರ ಅವರು, ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವ ಮೂಲಕ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ, ಎಲ್ಲರನ್ನೂ ಒಳಗೊಂಡು ತಾವು ಕಾರ್ಯನಿರ್ವಹಿಸುವುದಾಗಿ ಸಂದೇಶವನ್ನೂ ಈ ಮೂಲಕ ರವಾನೆ ಮಾಡುತ್ತಿದ್ದಾರೆ. ಇನ್ನು ಬಿಜೆಪಿ – ಜೆಡಿಎಸ್‌ ಮೈತ್ರಿ ದೃಷ್ಟಿಯಿಂದಲ್ಲದೆ, ನಾಡು ಕಂಡ ಹಿರಿಯ, ಅನುಭವಿ ರಾಜಕಾರಣಿಯರಲ್ಲೊಬ್ಬರಾದ ಎಚ್.ಡಿ. ದೇವೇಗೌಡ ಅವರ ಆಶೀರ್ವಾದವನ್ನೂ ಪಡೆದುಕೊಳ್ಳುವ ವಾಡಿಕೆಯಂತೆ ಅವರನ್ನೂ ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಳ್ಳಲಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ ಪೂರ್ವಭಾವಿ ಸಭೆ

ನ. 15ರಂದು ಪಕ್ಷದ ಕಚೇರಿಯಲ್ಲಿ ಬಿ.ವೈ. ವಿಜಯೇಂದ್ರ ಪದಗ್ರಹಣ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಬಗ್ಗೆ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಪೂರ್ವ ಸಿದ್ಧತೆ ಸಭೆ ನಡೆಯಲಿದ್ದು, ಸಭೆಯಲ್ಲಿ ಬೆಂಗಳೂರಿನ ಮೂರು ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಭಾಗಿಯಾಗಲಿದ್ದಾರೆ.

ಬೂತ್‌ ಮಟ್ಟದಿಂದಲೇ ಕಾರ್ಯಾಚರಣೆ ಶುರು ಮಾಡಿದ್ದ ವಿಜಯೇಂದ್ರ

ಪಕ್ಷದ ರಾಜ್ಯಾಧ್ಯಕ್ಷರಾಗಿ ಶನಿವಾರ ಬೆಳಗ್ಗಿನಿಂದಲೇ ಕೆಲಸ ಶುರು ಮಾಡಿದ ಅವರು ಮೊದಲು ಭೇಟಿಯಾಗಿದ್ದೇ ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ (Booth President Shasheendra) ಅವರ ಮನೆಗೆ. ಬಿಜೆಪಿ ಯಾವತ್ತಿದ್ದರೂ ಕೇಡರ್‌ ಬೇಸ್ಡ್‌ ಪಾರ್ಟಿ (Cadre based party). ಕಾರ್ಯಕರ್ತರೇ ಅದರ ನಿಜವಾದ ಆಸ್ತಿ ಎಂದು ಆಗಾಗ ಹೇಳಲಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ವಿಜಯೇಂದ್ರ ಅವರು ತಮ್ಮ ಕಾರ್ಯಾಚರಣೆ ಶುರು ಮಾಡಿದ್ದಾರೆ. ದೊಡ್ಡ ನಾಯಕರನ್ನು ಭೇಟಿ ಮಾಡುವ ಮೊದಲು ಸಾಮಾನ್ಯ ಕಾರ್ಯಕರ್ತರನ್ನು ಭೇಟಿ ಮಾಡಿ ತಮ್ಮ ಮುಂದಿನ ನಡೆಯೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಬೂತ್ ಅಧ್ಯಕ್ಷರು ಪಕ್ಷದ ಜೀವಾಳ ಎಂದಿರುವ ಬಿ.ವೈ. ವಿಜಯೇಂದ್ರ

ರಾಜ್ಯಾಧ್ಯಕ್ಷರಾಗಿ ಘೋಷಣೆಯಾದ ಮರು ದಿನವೇ ಗಾಂಧಿ ನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ನೀಡಿದ್ದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ. ಪಕ್ಷದ ಎಲ್ಲ ಬೂತ್‍ಗಳನ್ನು ಬಲಪಡಿಸಲು ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದರು.

ಗಾಂಧಿ ನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ದೀಪಾವಳಿ ಶುಭಾಶಯ ಕೋರಿದ್ದೇನೆ. ರಾಜ್ಯದಲ್ಲಿ 58,282 ಬೂತ್‍ಗಳು ಇವೆ. ಎಲ್ಲ ಬೂತ್‍ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲಾಗುವುದು ಎಂದು ತಿಳಿಸಿದ್ದರು.

ಎಲ್ಲರೂ ಬೂತ್‌ ಮಟ್ಟದಿಂದಲೇ ಬಂದವರು

ಪ್ರತಿ ಬೂತ್ ಪ್ರಮುಖ ಮತ್ತು ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇಂದಿನ ಕೇಂದ್ರ ಗೃಹ ಸಚಿವರು ಆದ ಅಮಿತ್ ಶಾ, ಇಂದಿನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಕಾರ್ಯಾರಂಭ ಮಾಡಿದ್ದೇನೆ. ಇಡೀ ರಾಜ್ಯದಲ್ಲಿರುವ ಎಲ್ಲ 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಹೆಜ್ಜೆ ಇಡುವುದಾಗಿ ಬಿ.ವೈ. ವಿಜಯೇಂದ್ರ ಹೇಳಿದ್ದರು.

ಇದನ್ನೂ ಓದಿ: BY Vijayendra : ನ.16ರ ಬಿಜೆಪಿ ಸಮಾವೇಶ ಮುಂದಕ್ಕೆ; ಈ ಮಾಸಾಂತ್ಯಕ್ಕೆ ಸಭೆ, ನಡ್ಡಾ ಆಗಮನ

ʻʻಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣುತ್ತದೆ. ಇದೇ ಬಿಜೆಪಿಯ ವಿಶೇಷತೆʼʼ ಎಂದು ಬಿ.ವೈ. ವಿಜಯೇಂದ್ರ ಹೇಳಿಕೊಂಡಿದ್ದರು.

Exit mobile version