ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಒಂದು ದಿನವೂ ಕೇಂದ್ರ ಸರ್ಕಾರದ ಬಳಿ ಸಭೆ ಮಾಡದ ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿದ ಡಿ.ಕೆ. ಶಿವಕುಮಾರ್, ಮನಮೋಹನ್ ಸಿಂಗ್ ಅವರ ಅವಧಿಗಿಂತ ಈಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ಬಿಜೆಪಿ ನಾಯಕರು ಈ ಹಿಂದಿನ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ಈಗ ಅವರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಒಪ್ಪಿಕೊಂಡಂತೆ ಅಲ್ಲವೇ? ಎಂದು ಪ್ರಶ್ನೆ ಮಾಡಿದರು.
ಮನಮೋಹನ್ ಸಿಂಗ್ ಅವರ ಸರ್ಕಾರ ಹೋಗಿ 10 ವರ್ಷಗಳಾಗಿವೆ. ಅವರಿಗೆ ಜ್ಞಾನ ಇರಬೇಕು. ದೇಶದಲ್ಲಿ ವಿದ್ಯಾವಂತರಿಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. 10 ವರ್ಷಗಳಿಂದ ದೇಶ ನಿಮ್ಮ ಕೈಗೆ ಅಧಿಕಾರ ಕೊಟ್ಟಿದೆ. ಮಾತೆತ್ತಿದರೆ ಡಬಲ್ ಎಂಜಿನ್ ಎಂದು ಹೇಳುತ್ತಿದ್ದರು. ಇವರು ಒಂದು ದಿನ ರಾಜ್ಯದ ಬರಗಾಲದ ಬಗ್ಗೆ ಮಾತನಾಡಲಿಲ್ಲ. ಒಂದು ದಿನವೂ ರಾಜ್ಯದ ಹಿತದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮಾತನಾಡಿಲ್ಲ. ಈಗ ಮಾತೆತ್ತಿದರೆ ರಾಜ್ಯ ಸರ್ಕಾರ ಬರ ಪರಿಹಾರ ನೀಡಲಿಲ್ಲ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಪ್ರತಿ ರೈತರ ಖಾತೆಗೆ 2 ಸಾವಿರ ಹಾಕಿದ್ದೇವೆ. ಇದರ ಜತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿರುವುದರಲ್ಲಿ ಅನುಮಾನವಿಲ್ಲ. ನೀರಾವರಿ ಇಲಾಖೆ ವಿಚಾರಕ್ಕೆ ಬಂದರೆ ಕಳೆದ ವರ್ಷ ಬಜೆಟ್‌ನಲ್ಲಿ 5,300 ಕೋಟಿ ಘೋಷಣೆ ಮಾಡಿದ್ದರೋ ಇಲ್ಲವೋ? ಅದರ ಹಣವನ್ನು ಬಿಡುಗಡೆ ಮಾಡಿದ್ದಾರಾ? ಮೆಟ್ರೋ ವಿಚಾರದಲ್ಲಿ ಏನಾದರೂ ಕ್ರಮ ಕೈಗೊಂಡಿದ್ದಾರಾ? ಇಲ್ಲವಲ್ಲಾ? ಈಗ ರಾಜ್ಯದ ಪರವಾಗಿ ಧ್ವನಿ ಎತ್ತದೆ ಬೇರೆ ದಾರಿ ಇಲ್ಲ. ಹೀಗಾಗಿ ನಮ್ಮ ಪ್ರತಿಭಟನೆಗೆ ಕೈಜೋಡಿಸುವಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೂ ಆಹ್ವಾನ ನೀಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಜತೆ ಕೇರಳ ಹಾಗೂ ತೆಲಂಗಾಣ ರಾಜ್ಯ ಕೂಡ ಪ್ರತಿಭಟನೆ ಮಾಡಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ನಾವು ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಬೇರೆ ರಾಜ್ಯದವರು ಅವರ ಬೇಡಿಕೆಗಾಗಿ ಹೋರಾಟ ಮಾಡುತ್ತಾರೆ” ಎಂದು ತಿಳಿಸಿದರು.
ಇದನ್ನೂ ಓದಿ: Satish Jarkiholi: ʼಹಿಂದುʼ ಅಶ್ಲೀಲ ಎಂದಿದ್ದ ಸತೀಶ್ ಜಾರಕಿಹೊಳಿಗೆ ಸಂಕಷ್ಟ; ಕ್ರಿಮಿನಲ್ ಕೇಸ್‌ಗೆ ಕೋರ್ಟ್ ಒಪ್ಪಿಗೆ
ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕಾಗಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪರೇಡ್ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬಿಜೆಪಿಯವರು ಏನಾದರೂ ಆರೋಪ ಮಾಡಲಿ. ಅವರು ನಮ್ಮನ್ನು ನೆನಪಿಸಿಕೊಳ್ಳುತ್ತಿರಲಿ ಎಂದು ತಿಳಿಸಿದರು.