Site icon Vistara News

Bypolls Result: 7 ರಾಜ್ಯಗಳ ಉಪಚುನಾವಣೆಯಲ್ಲಿ ಮುನ್ನಡೆ ಸಾಧಿಸಿದ ಇಂಡಿ ಒಕ್ಕೂಟ; ಬಿಜೆಪಿಗೆ ಮುಖಭಂಗ

Bypolls Result

Bypolls Result

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ ಬಳಿಕ ನಡೆದ ಉಪಚುನಾವಣೆಯ ಫಲಿತಾಂಶ ಇಂದು (ಜುಲೈ 13) ಹೊರ ಬೀಳುತ್ತಿದ್ದು, ಪ್ರತಿಪಕ್ಷಗಳ ಇಂಡಿ ಒಕ್ಕೂಟ ಮೇಲುಗೈ ಸಾಧಿಸಿದೆ (Bypolls Result). ಜುಲೈ 10ರಂದು ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆದಿತ್ತು. ಸದ್ಯ ಇಂಡಿ ಒಕ್ಕೂಟ ಕನಿಷ್ಠ 6 ಕಡೆ ಜಯ ಸಾಧಿಸಿದ್ದು, 4 ಕಡೆ ಮುನ್ನಡೆಯಲ್ಲಿದೆ. ಬಿಜೆಪಿ 1 ಸೀಟು ತನ್ನದಾಗಿಸಿಕೊಂಡಿದೆ.

ಪಶ್ಚಿಮ ಬಂಗಾಳದ ರಾಯ್‌ಗಂಜ್‌, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ, ಉತ್ತರಾಖಂಡದ ಬದ್ರಿನಾಥ್ ಮತ್ತು ಮಂಗ್ಲೌರ್, ಪಂಜಾಬ್‌ನ ಜಲಂಧರ್ ವೆಸ್ಟ್, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಘರ್, ಬಿಹಾರದ ರುಪೌಲಿ, ಮಧ್ಯಪ್ರದೇಶದ ಅಮರ್ವಾರಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇದೀಗ ಹೊರ ಬೀಳುತ್ತಿದೆ.

ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷ (AAP) ಮೊಹಿಂದರ್ ಭಗತ್ 23,000 ಮತಗಳಿಂದ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿಯೂ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಹಿನ್ನಡೆಯಲ್ಲಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಾಂಗ್ರೆಸ್‌ನ ಕಮಲೇಶ್ ಠಾಕೂರ್ ಡೆಹ್ರಾದಲ್ಲಿ ಗೆಲುವು ಸಾಧಿಸಿದ್ದಾರೆ. ನಲಘರ್‌ನಲ್ಲಿ ಕಾಂಗ್ರೆಸ್, ಹಮೀರ್‌ಪುರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ಮುನ್ನಡೆ ಸಾಧಿಸಿದ್ದಾರೆ.

ಉತ್ತರಾಖಂಡದ ಬದ್ರಿನಾಥ ಮತ್ತು ಮಂಗಳೌರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಮಧ್ಯಪ್ರದೇಶದ ಅಮರವಾರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧೀರನ್ ಶಾ ಇನ್ವತಿ 4,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಹಾರದ ರುಪೌಲಿಯಲ್ಲಿ ಜೆಡಿಯು ಅಭ್ಯರ್ಥಿ ಕಲಾಧರ್ ಪ್ರಸಾದ್ ಮಂಡಲ್ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನ ವಿಕ್ರಾವಂಡಿ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆಯ ಅಣ್ಣಿಯೂರ್ ಶಿವ 10,000ಕ್ಕೂ ಹೆಚ್ಚು ಮತಗಳಿಂದ ಮುಂದಿದ್ದಾರೆ.

ಯಾಕೆ ಈ ಉಪಚುನಾವಣೆ ?

ಕೆಲವು ಕ್ಷೇತ್ರಗಳ ಸದಸ್ಯರು ಸಾವನ್ನಪ್ಪಿದ್ದು, ಕೆಲವು ಕಡೆ ರಾಜೀನಾಮೆಯಿಂದ ಸ್ಥಾನ ಖಾಲಿಯಾಗಿರುವುದರಿಂದ ಉಪ ಚುನಾವಣೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ಟಿಎಂಸಿ ಲೋಕಸಭಾ ಚುನಾವಣೆಯಲ್ಲಿನ ತನ್ನ ಯಶಸ್ಸನ್ನು ಮುಂದುವರಿಸಲು ಬಹುತೇಕ ಯಶಸ್ವಿಯಾಗಿದೆ. ಇತ್ತ ಲೋಕಸಭಾ ಚುನಾವಣೆಯಲ್ಲಿ ಬಹುಮತ ಹೊಂದಲು ವಿಫಲವಾಗಿರುವ ಬಿಜೆಪಿಗೆ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ. ಪ್ರತಿಪಕ್ಷ ಇಂಡಿ ಒಕ್ಕೂಟ ಮತ್ತಷ್ಟು ಬಲಿಷ್ಠವಾಗುವ ಮೂಲಕ ಎನ್‌ಡಿಎಗೆ ತಲೆನೋವು ತಂದಿಟ್ಟಿದೆ.

ಇದನ್ನೂ ಓದಿ: KEA Exam: ಕ್ಯಾಮೆರಾ ಕಣ್ಗಾವಲಿನಲ್ಲಿ ಕೆಇಎ ಸ್ಪರ್ಧಾತ್ಮಕ ಪರೀಕ್ಷೆ; ವೆಬ್ ಕಾಸ್ಟಿಂಗ್ ಪರಿಶೀಲಿಸಿದ ಉನ್ನತ ಶಿಕ್ಷಣ ಸಚಿವ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಮೂಲಕ ಸರಳ ಬಹುಮತಕ್ಕೆ 32 ಸೀಟುಗಳ ಕೊರತೆ ಎದುರಾಗಿದ್ದು, ಮಿತ್ರಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಿದೆ. ಮಿತ್ರಪಕ್ಷಗಳ ಬೆಂಬಲದಿಂದ ಎನ್‌ಡಿಎ ಇದೀಗ 293 ಹೊಂದಿದೆ. ಇತ್ತ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಇಂಡಿ ಒಕ್ಕೂಟ 232 ಸೀಟು ಪಡೆದುಕೊಂಡು ಪ್ರಬಲ ಪೈಪೋಟಿ ಒಡ್ಡಿದೆ. ಈ ಬಾರಿ ಕಾಂಗ್ರೆಸ್‌ 99 ಕಡೆ ಜಯಗಳಿಸಿದೆ.

Exit mobile version