Site icon Vistara News

Bypolls Result: 13 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟ; ಎನ್‌ಡಿಎ V/S ಇಂಡಿ ಒಕ್ಕೂಟ; ಯಾರಿಗೆ ಮುನ್ನಡೆ?

Bypolls Result

Bypolls Result

ನವದೆಹಲಿ: ಲೋಕಸಭಾ ಚುನಾವಣೆ (Lok Sabha Election)ಯ ಬಳಿಕ ನಡೆದ ಉಪಚುನಾವಣೆಯ ಫಲಿತಾಂಶ ಇಂದು (ಜುಲೈ 13) ಹೊರ ಬೀಳಲಿದ್ದು, ಕುತೂಹಲ ಮೂಡಿಸಿದೆ. ಜುಲೈ 10ರಂದು ಏಳು ರಾಜ್ಯಗಳ 13 ಅಸೆಂಬ್ಲಿ ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆದಿತ್ತು. ಇದು ಲೋಕಸಭಾ ಚುನಾವಣೆಯ ಅನಂತರ ನಡೆದ ಮೊದಲ ಚುನಾವಣೆಯಾಗಿರುವ ಕಾರಣ ಮಹತ್ವ ಪಡೆದುಕೊಂಡಿದೆ. ಆಡಳಿತರೂಢ ಎನ್‌ಡಿಎ ಮತ್ತು ಈ ಲೋಕಸಭಾ ಚುನಾವಣೆಯಲ್ಲಿ ಶಕ್ತಿ ವೃದ್ಧಿಸಿಕೊಂಡ ಪ್ರತಿಪಕ್ಷಗಳ ಇಂಡಿ ಒಕ್ಕೂಟ ರಿಸಲ್ಟ್‌ನತ್ತ ನಿರೀಕ್ಷೆಯ ಕಣ್ಣು ನೆಟ್ಟಿವೆ (Bypolls Result).

ಯಾವೆಲ್ಲ ರಾಜ್ಯಗಳಲ್ಲಿ?

ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯ ಪ್ರದೇಶ, ಉತ್ತರಾಖಂಡ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಉಪಚುನಾವಣೆ ನಡೆದಿತ್ತು.

ಯಾವೆಲ್ಲ ಕ್ಷೇತ್ರ?

ಪಶ್ಚಿಮ ಬಂಗಾಳದ ರಾಯ್‌ಗಂಜ್‌, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ, ಉತ್ತರಾಖಂಡದ ಬದ್ರಿನಾಥ್ ಮತ್ತು ಮಂಗ್ಲೌರ್, ಪಂಜಾಬ್‌ನ ಜಲಂಧರ್ ವೆಸ್ಟ್, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಘರ್, ಬಿಹಾರದ ರುಪೌಲಿ, ಮಧ್ಯಪ್ರದೇಶದ ಅಮರ್ವಾರಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಈ ಪೈಕಿ ನಾಲ್ಕು ರಾಜ್ಯಗಳನ್ನು ಇಂಡಿ ಮೈತ್ರಿ ಕೂಟ ಆಳುತ್ತಿದ್ದರೆ, ಉಳಿದ ರಾಜ್ಯಗಳಲ್ಲಿ ಬಿಜೆಪಿ ಅಥವಾ ಎನ್‌ಡಿಎ ಸರ್ಕಾರವಿದೆ.

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮಣಿಕ್ತಾಲಾ ಸ್ಥಾನವನ್ನು ಗೆದ್ದರೆ, ಬಿಜೆಪಿ ರಾಯ್‌ಗಂಜ್‌, ರಣಘಾಟ್ ದಕ್ಷಿಣ ಮತ್ತು ಬಾಗ್ಡಾವನ್ನು ಗೆದ್ದಿತ್ತು. ನಂತರ ಬಿಜೆಪಿ ಶಾಸಕರು ಟಿಎಂಸಿ ಸೇರಿದ್ದರು. ಹೀಗಾಗಿ ಈ ಕ್ಷೇತ್ರಗಳ ಫಲಿತಾಂಶ ದೇಶದ ಗಮನ ಸೆಳೆದಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಅನೇಕ ಅನುಭವಿಗಳು ಮತ್ತು ಹಲವು ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಉತ್ತರಾಖಂಡದ ಮಾಂಗ್ಲಾರ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಇದು ಬಿಎಸ್‌ಪಿ ಶಾಸಕ ಸರ್ವಾತ್ ಕರೀಮ್ ಅನ್ಸಾರಿ ಅವರ ಸಾವಿನಿಂದ ತೆರವಾದ ಕ್ಷೇತ್ರವಾಗಿದ್ದು, ಇಲ್ಲಿ ಇದುವರೆಗೆ ಗೆದ್ದಿಲ್ಲದ ಬಿಜೆಪಿ ಗುಜ್ಜರ್ ನಾಯಕ ಕಾರ್ತಾರ್ ಸಿಂಗ್ ಭದಾನಾ ಅವರನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಇನ್ನು ಪಂಜಾಬ್‌ನ ಜಲಂಧರ್ ವೆಸ್ಟ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕಠಿಣ ಪರೀಕ್ಷೆಯಾಗಿದೆ. ಎಎಪಿ ಮೊಹಿಂದರ್ ಭಗತ್ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್‌ನಿಂದ ಸುರಿಂದರ್ ಕೌರ್ ಸ್ಪರ್ಧಿಸುತ್ತಿದ್ದಾರೆ.

ತಮಿಳುನಾಡಿನ ವಿಕ್ರಾವಂಡಿ ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ಎನ್.ಪುಗಜೆಂಧಿ ಅವರ ನಿಧನದಿಂದಾಗಿ ಉಪಚುನಾವಣೆ ಅನಿವಾರ್ಯವಾಗಿತ್ತು. ಆಡಳಿತಾರೂಢ ಡಿಎಂಕೆಯ ಅಣ್ಣಿಯೂರ್ ಶಿವ, ಪಿಎಂಕೆಯ ಸಿ. ಅನ್ಬುಮಣಿ ಮತ್ತು ನಾಮ್ ತಮಿಳರ್ ಕಚ್ಚಿಯ ಕೆ.ಅಭಿನಯ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಕಮಲೇಶ್ ಶಾ ಮಾರ್ಚ್‌ನಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಅಮರವಾರಾ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಬಿಹಾರದ ರುಪೌಲಿ ಕ್ಷೇತ್ರದ ಹಾಲಿ ಶಾಸಕಿ ಬಿಮಾ ಭಾರತಿ ಅವರ ರಾಜೀನಾಮೆಯಿಂದ ಉಪಚುನಾವಣೆ ನಡೆದಿದೆ.

ಇದನ್ನೂ ಓದಿ: MLC Election Result: ಮಹಾರಾಷ್ಟ್ರ ಪರಿಷತ್‌ ಚುನಾವಣೆ; ಬಿಜೆಪಿ ಮೈತ್ರಿಗೆ ಭರ್ಜರಿ ಗೆಲುವು; 11ರ ಪೈಕಿ 9 ಸ್ಥಾನಗಳಲ್ಲಿ ಜಯ

Exit mobile version