ಬೆಂಗಳೂರು: ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಿಲ್ಲದೆ ಜನರು ಪರಿತಪಿಸುತ್ತಿದ್ದು, ಬಹುತೇಕ ಕಡೆ ಬರದ (Drought in Karnataka) ಛಾಯೆ ಇರುವ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಚರ್ಚೆ ನಡೆಸಲಾಗಿದೆ. ಇದೇ ವೇಳೆ ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ (Revenue, Agriculture and Rural Development Department) ಜಂಟಿ ಸಮೀಕ್ಷೆಯ ವರದಿ (Joint Survey Report) ಪಡೆದು ಮುಂದಿನ ವಾರದಲ್ಲಿ ರಾಜ್ಯದ “ಬರ ತಾಲೂಕು”ಗಳ (Drought Taluk) ಘೋಷಣೆ ಮಾಡುವ ತೀರ್ಮಾನಕ್ಕೆ ಬರಲಾಗಿದೆ.
ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬರಗಾಲ ತಾಲೂಕುಗಳ ಘೋಷಣೆ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಬರ ತಾಲೂಕು ಘೋಷಣೆ ಮಾಡುವಂತೆ ಶಾಸಕರು ಒತ್ತಡ ತರುತ್ತಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯದ್ದೇ ಅಡ್ಡಿ ಇರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕೇಂದ್ರದ ಮಾರ್ಗಸೂಚಿ ಸಡಿಲಗೊಳಿಸುವಂತೆ ಸಿಎಂ ಪತ್ರ ಬರೆದಿದ್ದರೂ ಕೇಂದ್ರ ಅದಕ್ಕೆ ಸೊಪ್ಪು ಹಾಕದ ಪರಿಣಾಮ ಮುಂದಿನ ನಿರ್ಧಾರ ಹೇಗಿರಬೇಕು ಎಂಬ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಮತ್ತಷ್ಟು ಮಾಹಿತಿ ಬಂದ ಬಳಿಕ ಘೋಷಣೆ: ಎಚ್.ಕೆ. ಪಾಟೀಲ್
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಸಂಪುಟ ಸಭೆಯಲ್ಲಿ ಬರಗಾಲದ ಬಗ್ಗೆ ಸುದೀರ್ಘ ಚರ್ಚೆ ಆಗಿದೆ. ರಾಜ್ಯದ ಸ್ಥಿತಿಗತಿ ಬಗ್ಗೆ ಮತ್ತಷ್ಟು ಮಾಹಿತಿ ಬರಬೇಕಾಗಿದೆ. ಮುಂದಿನ ವಾರ ಕ್ಯಾಬಿನೆಟ್‌ನಲ್ಲಿ ಬರ ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರದ ಮಾನದಂಡ ವಾಸ್ತವತೆಯಿಂದ ಕೂಡಿಲ್ಲ
ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಬರದ ಮಾನದಂಡಗಳನ್ನು ಸಡಿಲ ಮಾಡುವಂತೆ ಕೋರಿದ್ದಾರೆ. ಕೇಂದ್ರದ ಮಾನದಂಡದ ಅನುಸಾರ ಶೇಕಡಾ 60ರಷ್ಟು ಮಳೆಯ ಕೊರತೆ ಇರಬೇಕು. ಮೂರು ವಾರ ಸಂಪೂರ್ಣ ಡ್ರೈ ಇರಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದು ವಾಸ್ತವಿಕವಾಗಿಲ್ಲ ಎಂದು ಪತ್ರದಲ್ಲಿ ಸಿಎಂ ಉಲ್ಲೇಖಿಸಿದ್ದಾರೆ. ಮುಂದೆ ರಿಪೋರ್ಟ್ ನೋಡಿಕೊಂಡು ಬರ ತಾಲೂಕು ಘೋಷಣೆ ಮಾಡುತ್ತೇವೆ. ಎಂದು ಎಚ್.ಕೆ. ಪಾಟೀಲ್ ಹೇಳಿದರು.
ಇದನ್ನೂ ಓದಿ: Gruha Lakshmi Scheme : ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ ಆಗಿಲ್ಲ, ಆಗಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಬರ ಘೋಷಣೆ ಅನಿವಾರ್ಯ; ಸಚಿವರ ಆತಂಕ
ಸುಮಾರು ಮೂರು ಗಂಟೆಗಳ ಕಾಲ ನಡೆದ ಸುದೀರ್ಘ ಸಂಪುಟ ಸಭೆಯಲ್ಲಿ ಬರ ಪರಿಸ್ಥಿತಿ ಬಗ್ಗೆಯೇ ಹೆಚ್ಚು ಚರ್ಚೆಯಾಗಿದೆ. ಆದರೆ, ಕೇಂದ್ರದ ಮಾರ್ಗಸೂಚಿಯನುಸಾರ ಕೆಲವು ತಾಲೂಕುಗಳು ಒಳಪಡದ ಕಾರಣ ಗುರುವಾರ ಅಧಿಕೃತವಾಗಿ ಬರ ತಾಲೂಕು ಘೋಷಣೆ ಮಾಡಲು ಹಿಂದೇಟು ಹಾಕಲಾಗಿದೆ. ಈ ವೇಳೆ ಮಾತನಾಡಿದ ಕೆಲವು ಸಚಿವರು, ರೈತರ ಪರ ನಿಲ್ಲಲು ಬರಗಾಲ ಘೋಷಣೆ ಅನಿವಾರ್ಯ ಎಂದು ಹೇಳಿದ್ದಾರೆ. ಹೀಗಾಗಿ ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಇನ್ನೊಂದು ರಿಪೋರ್ಟ್ ಬಂದ ಬಳಿಕ ಬರಗಾಲ ಘೋಷಣೆ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಸಚಿವ ಸಂಪುಟ ಬಂದಿದೆ ಎಂದು ವಿಸ್ತಾರ ನ್ಯೂಸ್‌ಗೆ ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.