Site icon Vistara News

BY Vijayendra: ಲೋಕಸಭೆ ಎಲೆಕ್ಷನ್‌ವರೆಗೂ ಮನೆಗೆ ಹೋಗುವಂತಿಲ್ಲ: ಅವಿರತ ದುಡಿಮೆಗೆ ವಿಜಯೇಂದ್ರ ಕರೆ

BJP President BY vijayendra

ದಾವಣಗೆರೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡಿದ್ದರು‌. ನಾನು ಅದೇ ರೀತಿಯಲ್ಲಿ ಓಡಾಡುತ್ತೇನೆ. ನಿಮ್ಮ ಸಂಪೂರ್ಣ ಬೆಂಬಲ ನೀಡಿ. ಲೋಕಸಭೆ ಎಲೆಕ್ಷನ್ ಮುಗಿಯುವವರೆಗೆ ಯಾರೂ ಮನೆಗೆ ಹೋಗುವಂತಿಲ್ಲ. ಸೈನಿಕರಂತೆ ಪಕ್ಷಕ್ಕಾಗಿ ದುಡಿಯೋಣ. ಲೋಕಸಭೆಯಲ್ಲಿ ಎಲ್ಲ 28 ಕ್ಷೇತ್ರಗಳನ್ನು ಜಯಗಳಿಸೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕರೆ ನೀಡಿದ್ದಾರೆ. ಅಲ್ಲದೆ, ಶಾಲಾ-ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ ಜಾರಿಯಾದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ‘ಕಾರ್ನರ್ ಮೀಟಿಂಗ್’ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ‌‌‌ಬಿ.ವೈ. ವಿಜಯೇಂದ್ರ, ಮಂಗಳವಾರ ಬೆಳಗ್ಗೆ ಹನ್ನೊಂದು ಗಂಟೆಗೆ ನೂತನ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಲೋಕಸಭೆ ಚುನಾವಣೆ ಮುಗಿಯುವವರೆಗೂ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆ ಉದ್ಭವಿಸುವುದಿಲ್ಲ. ನಾವೆಲ್ಲರೂ ಒಗ್ಗಟಾಗಿ, ಒಂದಾಗಿ ಪಕ್ಷದ ಸಂಘಟನೆಗೆ ಬಲ ನೀಡಬೇಕು ಎಂಬ ಸಂದೇಶ ಕೊಡಲಿದ್ದೇನೆ‌. ನಮ್ಮ ಗುರಿ ಸ್ಪಷ್ಟವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: BY Vijayendra: ಇನ್ನು ಮೂರ್ನಾಲ್ಕು ದಿನ ಕಾದು ನೋಡಿ, ಬೇರೆ ಬೇರೆ ಪಟ್ಟಿ ರಿಲೀಸ್ ಆಗುತ್ತೆ: ವಿಜಯೇಂದ್ರ

ರಾಜ್ಯ ಸರ್ಕಾರಕ್ಕೆ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಬಡವರು, ಎಸ್ಸಿ, ಎಸ್ಟಿ, ಯುವಕರು ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿ ಆಗಬೇಕು ಎನ್ನುತ್ತಿದ್ದಾರೆ. ದುಷ್ಟ, ಭ್ರಷ್ಟ, ಬಡವ ವಿರೋಧಿ ಕಾಂಗ್ರೆಸ್ ಸರ್ಕಾರದ ಬಂಡವಾಳವನ್ನು ಬಯಲಿಗೆ ತರುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಯುವಕರಿಗೆ, ಹಿರಿಯರಿಗೆ, ಹೊಸಬರಿಗೆ ಪಕ್ಷದಿಂದ ಅವಕಾಶ

ಪದಾಧಿಕಾರಿಗಳ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಶನಿವಾರ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಆಗಿದೆ. ಬೇರೆ ಸಮಾಜ, ಪಂಗಡಗಳು, ಮುಂಬೈ, ಕಿತ್ತೂರು, ಕಲ್ಯಾಣ ಕರ್ನಾಟಕ ಎಲ್ಲ ಭಾಗದಲ್ಲಿ ಗುರುತಿಸಲಾಗಿದೆ. ಯುವಕರಿಗೆ, ಹಿರಿಯರಿಗೆ, ಹೊಸಬರಿಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ‌. ನಮ್ಮ ಮುಂದೆ ದೊಡ್ಡ ಸವಾಲು ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಬಿಜೆಪಿ ಮತ್ತು ಜೆಡಿಎಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಬಿಜೆಪಿ- ಜೆಡಿಎಸ್ ಒಂದಾಗಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಜಯ ದಾಖಲಿಸಬೇಕು. ಆ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಹಿಜಾಬ್‌ ಜಾರಿಯಾದರೆ ಬೀದಿಗಿಳಿದು ಹೋರಾಟ

ಹಿಜಾಬ್‌ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಯೂಟರ್ನ್ ಹೊಡೆದಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಯಾಕೆ ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಡುತ್ತೀರ. ಕನಿಷ್ಠ ಶಿಕ್ಷಣ ಕ್ಷೇತ್ರವನ್ನಾದರೂ ನಿಮ್ಮ ಕೆಟ್ಟ ರಾಜಕಾರಣದಿಂದ ದೂರ ಇಡಬಹುದಿತ್ತಲ್ಲವಾ? ಶಾಲೆಗೆ ಹೋಗುವ ಮಕ್ಕಳ ಮನಸ್ಸಿನಲ್ಲಿ ಜಾತಿಯ ವಿಷ ಬೀಜ ಬಿತ್ತು ಪ್ರಯತ್ನ ಯಾಕೆ ಮಾಡುತ್ತಿದ್ದೀರಿ. ನಿಮ್ಮ ರಾಜಕಾರಣಕ್ಕೆ ಕಾಲೇಜು, ಶಾಲೆ ಮಕ್ಕಳನ್ನು ಎಳೆದು ತರಬೇಡಿ. ನಾನು ಆ ರೀತಿ ಹೇಳಿಲ್ಲ ಎಂದು ಸಿಎಂ ಹೇಳಿದ್ದಾರೆ. ಅದು ಸಂತೋಷದ ವಿಚಾರವಾಗಿದೆ. ಆದರೆ, ಅವರ ಹೇಳಿಕೆಯನ್ನು ರಾಜ್ಯದ ಜನ ನೋಡಿದ್ದಾರೆ. ಇನ್ನು ಮುಂದಾದರೂ ಅವರು ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಅಂತಹ ಸಂದರ್ಭ ಏನಾದರೂ ಸೃಷ್ಟಿಯಾದರೆ ಬಿಜೆಪಿ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಬೀದಿಗಿಳಿದು ಹೋರಾಟ ಮಾಡಬೇಕಾಗಿ ಬಂದರೆ ಹೋರಾಟ ಮಾಡುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಗುಡುಗಿದರು.

ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅದಾಗಲೇ ಇಷ್ಟೊಂದು ಆತುರ ಯಾಕೆ? ಬರಗಾಲದಲ್ಲಿ ಸರ್ಕಾರಕ್ಕೆ ರೈತರು ಆದ್ಯತೆ ಆಗಬೇಕೇ ಹೊರತು ಹಿಜಾಬ್ ವಿಚಾರ ಯಾಕೆ ಬಂತು? ಇದು ಒಡೆದಾಳುವ ನೀತಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಒಂದು ಸ್ಥಾನವೂ ಬರುವುದಿಲ್ಲ ಎಂದಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಕಾಂಗ್ರೆಸ್ ಪಕ್ಷ ಒಡೆದಾಳಲು ಹೊರಟಿದೆ. ಬಿಜೆಪಿ ಈ ವಿಚಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಸೋಲು ಗೊತ್ತಾದಾಗ ಸಿಎಂ ಬಾಯಿಂದ ಇಂಥ ಮಾತು

ಯಾವಾಗ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಗೊತ್ತಾಗುತ್ತದೋ ಆಗ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸರ್ಕಾರಕ್ಕೆ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಒಡೆಯುವುದು ನೆನಪು ಆಗುತ್ತದೆ. ಯಾವಾಗ ಲೋಕಸಭೆಯಲ್ಲಿ ಒಂದು ಸ್ಥಾನ ಗೆಲ್ಲಲ ಅನ್ನಿಸುತ್ತೋ ಆಗ ಇವರಿಗೆ ಕಾಂತರಾಜ್ ವರದಿ ನೆನಪಿಗೆ ಬರುತ್ತದೆ. ಹಿಜಾಬ್ ನೆನಪಿಗೆ ಬರುತ್ತದೆ. ಹಿಂದು ತಾಯಿಯರ ತಾಳಿ ತೆಗೆಸಿ ಇಡಬೇಕು ಅನ್ನಿಸುತ್ತದೆ ಎಂದು ಬಿ.ವೈ. ವಿಜಯೇಂದ್ರ ಕಿಡಿಕಾರಿದರು.

ಇದನ್ನೂ ಓದಿ: PM Modi: ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಮೋದಿಯಿಂದಾಗಿ: ಕಲ್ಲಡ್ಕ ಪ್ರಭಾಕರ್‌ ಭಟ್

ಜಾತಿಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲ. ಆದರೆ, ಅವರದ್ದೇ ವಿಶ್ಲೇಷಣೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವು ಮಾಡುತ್ತಿದೆ. ಹಿಂದುಳಿದ ವರ್ಗಗಳಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿಯನ್ನು ಕೊಡುವ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ನಾವು ಬೆಂಬಲ ಕೊಡುತ್ತೇವೆ. ಆದರೆ, ಕಾಂಗ್ರೆಸ್ ಸರ್ಕಾರದ ನಿಲುವು ಒಡೆದಾಳುವ ನೀತಿಯಾಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಬೇಕು ಎಂದು ಯೋಚನೆ ಮಾಡುತ್ತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುವು ಕೆಲಸ ‌ಮಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನವನ್ನು ಹೊರಹಾಕಿದರು.

Exit mobile version