Site icon Vistara News

Caste Census: ಇನ್ನು 15 ದಿನದಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ? ಅವಧಿ ವಿಸ್ತರಣೆಗೆ ಹಿಂದುಳಿದ ಆಯೋಗ ಮನವಿ

Caste Census and Jayaprakash hegde

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಮತ್ತು ಸದಸ್ಯರ ಅವಧಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹದಿನೈದು ದಿನಗಳ ಕಾಲ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ. ಕಾರಣ, ಅಷ್ಟರಲ್ಲಿ ಜಾತಿ ಗಣತಿ ವರದಿಯನ್ನು (Caste Census Report) ಸರ್ಕಾರ ಸ್ವೀಕಾರ ಮಾಡಿ ಬಹಿರಂಗಪಡಿಸಲು ಹೆಚ್ಚಿನ ಆಸಕ್ತಿಯನ್ನು ತೋರಿದೆ. ಹೀಗಾಗಿ ಇನ್ನು 15 ದಿನದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಕಳೆದ 2023ರ ನವೆಂಬರ್‌ನಲ್ಲಿ ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ಎರಡು ತಿಂಗಳವರೆಗೆ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರನ್ವಯ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹಾಗೂ ಐವರು ಸದಸ್ಯರ ಅಧಿಕಾರವನ್ನು 2024ರ ಜನವರಿ 31ರವರೆಗೆ ಮುಂದುವರಿಸಲಾಗಿತ್ತು. ಈಗ ಜನವರಿ 31ಕ್ಕೆ ಇನ್ನೆರಡು ದಿನ ಬಾಕಿ ಇದೆ. ಹೀಗಾಗಿ, ಇನ್ನೂ 15 ದಿನ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

ಆಯೋಗದಿಂದ ಅವಧಿ ವಿಸ್ತರಣೆಗೆ ಮನವಿ

ಜಾತಿ ಗಣತಿ ವರದಿಯನ್ನು ಅಂತಿಮಗೊಳಿಸುವ ಸಂಬಂಧ ಫೆ‌. 15ರವರೆಗೆ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗವು ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಏಕೆ ಅವಧಿ ವಿಸ್ತರಣೆ?

ಜಾತಿ ಗಣತಿ ವರದಿ ಬಗ್ಗೆ ಮೊದಲಿನಿಂದಲೂ ಅಪಸ್ವರ ಕೇಳಿ ಬರುತ್ತಲೇ ಇದೆ. ಪ್ರಮುಖವಾಗಿ ಪ್ರಬಲ ಸಮುದಾಯದವರಾದ ಲಿಂಗಾಯತ, ಒಕ್ಕಲಿಗರು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸರ್ಕಾರದಲ್ಲಿಯೂ ಸಹ ಈ ಎರಡು ಸಮುದಾಯದ ಸಚಿವರು ವರದಿ ಮಂಡನೆ ಬೇಡ ಎಂದೇ ಹೇಳುತ್ತಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ವರದಿಯನ್ನು ಸ್ವೀಕಾರ ಮಾಡಿಯೇ ಸಿದ್ಧ ಎಂದು ಹೇಳಿಕೊಂಡು ಬಂದಿದ್ದಾರೆ. ಇನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹ ಲೋಕಸಭಾ ಚುನಾವಣೆಗೆ ಮುನ್ನವೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಸಿಎಂ ವರದಿ ಬಿಡುಗಡೆಗೆ ಉತ್ಸಾಹ ತೋರಿದ್ದಾರೆ.

ಲೋಕಸಭಾ ಚುನಾವಣೆಗೆ ಹೊಡೆತ ಭೀತಿ

ಇನ್ನು ಈ ಎಲ್ಲ ಬೆಳವಣಿಗೆ ನಡುವೆ ಲೋಕಸಭಾ ಚುನಾವಣೆ ಒಳಗೆ ಜಾತಿಗಣತಿ ವರದಿಯನ್ನು ಬಿಡುಗಡೆಗೊಳಿಸಿದರೆ ಲಿಂಗಾಯತರು ಮತ್ತು ಒಕ್ಕಲಿಗರ ವಿರೋಧವನ್ನು ಕಟ್ಟಿಕೊಳ್ಳುವ ಭಯ ಕಾಂಗ್ರೆಸ್‌ಗೆ ಕಾಡುತ್ತಿದೆ. ಇಷ್ಟಾದರೂ ಸಿಎಂ ಮಾತ್ರ ವರದಿ ಬಿಡುಗಡೆ ಬಗ್ಗೆ ಒಲವು ತೋರಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗದ ಜಾಗೃತಿ ಸಮಾವೇಶಕ್ಕೆ ಬಂದಾಗಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: Rajya Sabha Election: ಕಾಂಗ್ರೆಸ್‌ನ 3, ಬಿಜೆಪಿಯ 1 ರಾಜ್ಯಸಭಾ ಸ್ಥಾನಕ್ಕೆ ಫೆ.27ಕ್ಕೆ ಚುನಾವಣೆ: ಶುರುವಾಗಿದೆ ರಾಜಕೀಯ ಲೆಕ್ಕಾಚಾರ!

ಏನಿದು ಕಾಂತರಾಜು ವರದಿ?

2013ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2014 -15ರಲ್ಲಿ ನಮ್ಮ ಸರ್ಕಾರ ಜಾತಿ ಸಮೀಕ್ಷೆ ಮತ್ತು ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡಲು ಕಾಂತರಾಜು ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು. ಆದರೆ, ಆ ಸರ್ಕಾರದ ಅವಧಿ ಮುಗಿಯುವ ವೇಳೆಗೆ ವರದಿ ಸಿದ್ಧವಾಗಿರಲಿಲ್ಲ. ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. 2018ರ ಕೊನೇ ಭಾಗದಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ (Congress – JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ.

Exit mobile version