Site icon Vistara News

Caste Census : ಜಾತಿ ಗಣತಿ ವರದಿ ಬಿಡುಗಡೆಗೆ ಸಿಎಂ – ಡಿಸಿಎಂ ಡಿಶುಂ; ಯಾವ ಶಾಸಕ – ಸಚಿವರು ಯಾರ ಕಡೆಗೆ?

CM Siddaramaiah and DCM DK Shivakumar

ಬೆಂಗಳೂರು: ಎಚ್‌. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿ (ಜಾತಿ ಗಣತಿ – Caste Census) ಬಗ್ಗೆ ಈಗ ರಾಜ್ಯ ಸರ್ಕಾರದಲ್ಲಿಯೇ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ವರದಿ ಸ್ವೀಕಾರದ ಪರವಾಗಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ವಿರೋಧ ನಿಲುವನ್ನು ಹೊಂದಿದ್ದಾರೆ. ಈ ಬಗ್ಗೆ ಇಬ್ಬರೂ ಬಹಿರಂಗವಾಗಿಯೇ ತಮ್ಮ ತಮ್ಮ ನಿಲುವುಗಳನ್ನು ಒಂದೊಂದು ಮೂಲಗಳ ಮೂಲಕ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ ಶಾಸಕ – ಸಚಿವರಲ್ಲಿಯೂ ಪರ – ವಿರೋಧ ಧೋರಣೆಗಳು ಕಂಡುಬಂದಿವೆ.

ಕಾಂತರಾಜ್ ವರದಿ ಸ್ವೀಕಾರಕ್ಕೆ ವಿರೋಧ ಇರುವ ಒಕ್ಕಲಿಗ ಶಾಸಕರ ಹಾಗೂ ಸಚಿವರ ಪಟ್ಟಿ ಇಂದಿದೆ.

  1. ಡಿ.ಕೆ ಶಿವಕುಮಾರ್, ಡಿಸಿಎಂ
  2. ಚೆಲುವರಾಯಸ್ವಾಮಿ, ಸಚಿವ
  3. ಎಂ.ಸಿ ಸುಧಾಕರ್, ಸಚಿವ
  4. ಟಿ.ಬಿ ಜಯಚಂದ್ರ, ಕರ್ನಾಟಕ ಸರ್ಕಾರದ ಕೇಂದ್ರ ಪ್ರತಿನಿಧಿ

ಜಾತಿಗಣತಿ ತಿರಸ್ಕಾರಕ್ಕೆ ಸಹಿ ಹಾಕಿದ ಕಾಂಗ್ರೆಸ್ ಶಾಸಕರು

  1. ಎಂ.ಕೃಷ್ಣಪ್ಪ
  2. ಪ್ರಿಯಕೃಷ್ಣ
  3. ಎಚ್.ಸಿ ಬಾಲಕೃಷ್ಣ
  4. ಎಚ್.ಡಿ. ರಂಗನಾಥ್
  5. ಪುಟ್ಟಸ್ವಾಮಿ ಗೌಡ
  6. ರವಿಕುಮಾರ್ ಗೌಡ
  7. ಶಿವಲಿಂಗೇಗೌಡ
  8. ರಮೇಶ್ ಬಂಡಿಸಿದ್ದೇಗೌಡ
  9. ರಾಜೇಗೌಡ
  10. ಮಂಥರ್ ಗೌಡ

ವಿರೋಧ ಇರುವ ಲಿಂಗಾಯತ ಶಾಸಕರು ಹಾಗೂ ಸಚಿವರ ಪಟ್ಟಿ

1) ಶಾಮನೂರು ಶಿವಶಂಕರಪ್ಪ
2) ಈಶ್ವರ ಖಂಡ್ರೆ
3 ) ಎಸ್.ಎಸ್ ಮಲ್ಲಿಕಾರ್ಜುನ
4) ಲಕ್ಷ್ಮೀ ಹೆಬ್ಬಾಳ್ಕರ್
5) ಎಂ.ಬಿ ಪಾಟೀಲ್
6) ಶಿವಾನಂದ ಪಾಟೀಲ್
7) ಶರಣುಪ್ರಕಾಶ್ ಪಾಟೀಲ್
8) ಶರಣಬಸವಪ್ಪ ದರ್ಶಾನಾಪುರ
9) ವಿನಯ್ ಕುಲಕರ್ಣಿ
10) ವಿಜಯಾನಂದ ಕಾಶಪ್ಪನವರ್
11) ಯಶವಂತರಾಯಗೌಡ ಪಾಟೀಲ್
12) ಲಕ್ಷ್ಮಣ್ ಸವದಿ

ಕಾಂತರಾಜ್ ವರದಿ ಪರ ಇರುವ ಶಾಸಕರು ಸಚಿವರ ಪಟ್ಟಿ

1) ಗೃಹ ಸಚಿವ ಡಾ.ಜಿ‌. ಪರಮೇಶ್ವರ್
2) ಎಚ್. ಸಿ ಮಹದೇವಪ್ಪ
3) ಕೆ.ಎಚ್. ಮುನಿಯಪ್ಪ
4) ಆರ್.ಬಿ. ತಿಮ್ಮಾಪುರ
5) ಜಮೀರ್ ಅಹ್ಮದ್
6) ರೂಪಾ ಶಶಿಧರ್
7) ಬಿ. ನಾಗೇಂದ್ರ
8) ಸತೀಶ್ ಜಾರಕಿಹೊಳಿ‌
9) ಪ್ರಿಯಾಂಕ್ ಖರ್ಗೆ
10) ಕೆ.ಎನ್. ರಾಜಣ್ಣ
11) ಮಧು ಬಂಗಾರಪ್ಪ

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಮೂಲ ಪ್ರತಿ ಕಾಣೆ ಬಗ್ಗೆ ಗೊತ್ತಿಲ್ಲವೆಂದ ಸಿಎಂ ಸಿದ್ದರಾಮಯ್ಯ!

ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಜಾತಿ ಗಣತಿ ವಾರ್!

ಜಾತಿ ಗಣತಿ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ನೇರ ಸಂಘರ್ಷಕ್ಕೆ ಕಾರಣವಾಗಿದೆ. ಜಾತಿ ಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂಬ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಡಿ.ಕೆ. ಶಿವಕುಮಾರ್‌ ಮನವಿ ಸಹಿ ಹಾಕುತ್ತಿದ್ದಂತೆ, ಇತ್ತ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು, ರಾಹುಲ್‌ ಗಾಂಧಿ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಅವರ ನಿಲುವಿಗೆ ನನ್ನ ಪೂರ್ಣ ಸಹಮತ ಇದೆ ಎಂದು ಹೇಳುವ ಮೂಲಕ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ದಾಳ ಉರುಳಿಸಿದ್ದರು.

ಸಚಿವ ಚಲುವರಾಯಸ್ವಾಮಿ ನೀಡಿದ ಹೇಳಿಕೆ ಇಲ್ಲಿದೆ

ಸಿಎಂ ಸಿದ್ದರಾಮಯ್ಯ ಟ್ವೀಟ್‌ ಏನು?

“ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ. ದೇಶಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ “ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಆಕ್ಷೇಪಕ್ಕೆ ಸೊಪ್ಪು ಹಾಕುವುದಿಲ್ಲ ಎಂಬ ನೇರ ಸಂದೇಶವನ್ನೇ ರವಾನೆ ಮಾಡಿದ್ದಾರೆ. ಇದಕ್ಕೆ ರಾಹುಲ್‌ ಗಾಂಧಿ ಅವರ ಹೆಸರನ್ನು ಸಹ ಎಳೆದು ತಂದಿದ್ದಾರೆ.

ಜಾತಿ ಗಣತಿ ವಿಚಾರವಾಗಿ ತಮ್ಮಲ್ಲಿ ಡಿಸಿಎಂ ಮಾತನಾಡಿಲ್ಲವೆಂದ ಸಿಎಂ; ಇಲ್ಲಿದೆ ವಿಡಿಯೊ

ಮುಂದಿನ ಲೋಕಸಭಾ ಚುನಾವಣೆ ಒಳಗೆ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೂಚನೆ ನೀಡಿದ್ದರು. ಈ ಮೂಲಕ ಚುನಾವಣೆಯಲ್ಲಿ ಇದರ ಲಾಭವನ್ನು ಪಡೆಯಬಹುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್‌ ಹಾಕಿಕೊಂಡಿದೆ. ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲು ಮಸೂದೆಗೆ ಪ್ರತ್ಯಸ್ತ್ರವಾಗಿ ಈ ಜಾತಿಗಣತಿ ವರದಿಯನ್ನು ಬಳಸಿಕೊಳ್ಳಲು ಮುಂದಾಗಲಾಗಿದೆ. ಆದರೆ, ಇದರಿಂದ ಸಾಮಾಜಿಕವಾಗಿ ಪ್ರಬಲರಾಗಿರುವ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರ (Lingayat and Vokkaliga communities) ವಿರೋಧವನ್ನು ಕಟ್ಟಿಕೊಳ್ಳಬೇಕಾದೀತು ಎಂಬ ಆತಂಕ ಡಿ.ಕೆ. ಶಿವಕುಮಾರ್‌ ಅವರದ್ದಾಗಿದೆ. ಅದೂ ಅಲ್ಲದೆ, ಒಕ್ಕಲಿಗ ಸಮುದಾಯದ ಮುಖಂಡರು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವರ ಒತ್ತಡ ಸಹ ಡಿ.ಕೆ. ಶಿವಕುಮಾರ್‌ ಮೇಲಿದೆ. ಈ ಕಾರಣಕ್ಕೆ ಅವರು ಸಹ ಆಂತರಿಕವಾಗಿ ಇದನ್ನು ವಿರೋಧ ಮಾಡುತ್ತಾ ಬಂದಿದ್ದಾರೆ.

ಏನಿದು ಜಾತಿ ಗಣತಿ ವರದಿ?

ಯಾವ ಯಾವ ಜಾತಿಯಲ್ಲಿ ಎಷ್ಟು ಜನರು ಇದ್ದಾರೆ? ಅವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ (Social and Economic status) ಏನಿದೆ? ಹಿಂದುಳಿದ ವರ್ಗಗಳು (Backward Classes) ಎಲ್ಲೆಲ್ಲಿ, ಎಷ್ಟು ಜನರಿದ್ದಾರೆ? ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ? ಅವರ ಸಾಮಾಜಿಕ ಸ್ಥಿತಿಗತಿಗಳು ಏನು ಎಂಬುದನ್ನು ಅರಿತು ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಸಂಬಂಧ ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಜಾತಿ ಗಣತಿ ವರದಿಯನ್ನು ಸಿದ್ಧ ಮಾಡಲು ಎಚ್‌. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿತ್ತು. ಈ ಸಮಿತಿಯು ರಾಜ್ಯಾದ್ಯಂತ ಅಧ್ಯಯನ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಆದರೆ, ವರದಿ ಸಲ್ಲಿಸುವ ವೇಳೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿ ಪೂರ್ಣಗೊಂಡಿತ್ತು. ಮುಂದೆ ಬಂದ ಕುಮಾರಸ್ವಾಮಿ ನೇತೃತ್ವದ ಸರ್ಕಾರವಾಗಲೀ ಇಲ್ಲವೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಾಗಲೀ ಈ ವರದಿ ಸ್ವೀಕಾರಕ್ಕೆ ಮನಸ್ಸು ಮಾಡಲಿಲ್ಲ. ಹಿಂದೇಟು ಹಾಕಿ ಅದನ್ನು ಹಾಗೇಯೇ ಇಟ್ಟರು. ಈಗ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರಿಂದ ಜಾತಿ ಗಣತಿ ಚರ್ಚೆಯು ಮುನ್ನೆಲೆಗೆ ಬಂದಿದೆ. ಅಲ್ಲದೆ, ಜಾತಿ ಗಣತಿ ವರದಿ ಸ್ವೀಕಾರಕ್ಕೆ ಒತ್ತಡಗಳೂ ಬಂದಿವೆ.

ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಕದ್ದಿದ್ದು ಯಾರು? ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತೀರಾ?

ಆಗಲೇ ಸೋರಿಕೆಯಾಗಿದ್ದ ವರದಿ!

ಕಾಂತರಾಜು ಅವರು 2018ರಲ್ಲಿ ವರದಿಯನ್ನು ಸಿದ್ಧಪಡಿಸಿದ್ದರು. ಆ ಸಲ್ಲಿಕೆ ಮಾಡುವ ವೇಳೆ ಸರ್ಕಾರ ಬದಲಾಗಿತ್ತು. ಈ ವೇಳೆ ವರದಿಯ ಕೆಲವು ಅಂಶಗಳೂ ಸೋರಿಕೆಯಾಗಿದ್ದವು. ಆ ಸೋರಿಕೆಯಾಗಿದ್ದ ಅಂಶಗಳ ಪ್ರಕಾರ ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ದಲಿತ, ಲಿಂಗಾಯತ, ಕುರುಬ ಸಮುದಾಯದವರು ಬರುತ್ತಾರೆ. ಅದರ ನಂತರದಲ್ಲಿ ಒಕ್ಕಲಿಗ ಸಮುದಾಯದವರು ಬರುತ್ತಾರೆ.

ಯಾವೆಲ್ಲ ನಾಯಕರ ವಿರೋಧ ಇದೆ? ಇಲ್ಲಿದೆ ವಿಡಿಯೊ

ಈಗ ಕಾಂಗ್ರೆಸ್‌ ಪ್ಲ್ಯಾನ್‌ ಏನು?

ಕಾಂಗ್ರೆಸ್‌ ಹಾಗೂ ಇಂಡಿಯಾ ಒಕ್ಕೂಟಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಕಡೆ ಜಾತಿ ಗಣತಿ ವರದಿಯನ್ನು ಸಮರ್ಥವಾಗಿ ಮಂಡಿಸುವ ಮೂಲಕ ಹಿಂದುಳಿದ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ಲ್ಯಾನ್‌ ಅನ್ನು ಕಾಂಗ್ರೆಸ್‌ ಹಾಕಿಕೊಂಡಿದೆ. ಈ ಮೂಲಕ ಆ ಸಮುದಾಯಗಳಿಗೆ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿ ಲೋಕಸಭೆಯಲ್ಲಿ ಮತಗಳಾಗಿ ಪರಿವರ್ತನೆ ಮಾಡುವ ಯೋಜನೆ ಕಾಂಗ್ರೆಸ್‌ ಹೈಕಮಾಂಡ್‌ನದ್ದಾಗಿದೆ.

ಜಾತಿ ಗಣತಿ ವರದಿ ತಿರಸ್ಕಾರ ಮನವಿಗೆ ಸಹಿ ಹಾಕಿದ ಡಿ.ಕೆ. ಶಿವಕುಮಾರ್!

ಕಾಂತರಾಜ್ ಆಯೋಗದ ವರದಿ ತಿರಸ್ಕರಿಸಲು ಒಕ್ಕಲಿಗರ ಸಂಘ (Vokkaliga Sangha) ಸಲ್ಲಿಸಿದ್ದ ಮನವಿ ಪತ್ರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸಹಿ ಹಾಕುವ ಮೂಲಕ ತಮ್ಮ ವಿರೋಧವನ್ನು ದಾಖಲಿಸಿದ್ದರು.

ಈ ಮೂಲಕ ಸರ್ಕಾರದ ಜಾತಿ ಜನಗಣತಿ ವರದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಹ ವಿರೋಧ ವ್ಯಕ್ತಪಡಿಸಿದಂತೆ ಆಗಿದೆ. ಕಾಂತರಾಜು ಆಯೋಗದ ವರದಿ ತಿರಸ್ಕರಿಸುವ ಸಂಬಂಧ ಒಕ್ಕಲಿಗರ ಸಂಘ ಮನವಿ ಪತ್ರವನ್ನು ಸಿದ್ಧಪಡಿಸಿತ್ತು. ಇದಕ್ಕೆ ಈಗ ಡಿ.ಕೆ. ಶಿವಕುಮಾರ್‌ ಅವರ ಸಹಿಯನ್ನು ಪಡೆದುಕೊಳ್ಳಲಾಗಿದ್ದು, ಆ ಪತ್ರವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಲಾಗಿದೆ. ಇದರ ಮನವಿ ಪ್ರತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಲ್ಲಿಸಲಾಗಿತ್ತು.

ಇದನ್ನೂ ಓದಿ: Caste Census : ಡಿಸೆಂಬರ್‌ ಒಳಗೆ ಜಾತಿ ಗಣತಿ ವರದಿ ಸಲ್ಲಿಕೆ; ರಿಪೋರ್ಟ್‌ ಮಿಸ್‌ ಆಗಿಲ್ಲವೆಂದ ಜಯಪ್ರಕಾಶ್‌ ಹೆಗ್ಡೆ

ಈಗ ಜಾತಿ ಗಣತಿ ವಿಚಾರಕ್ಕೆ ಸರ್ಕಾರದೊಳಗಿನ ಸಂಘರ್ಷಕ್ಕೆ ಕಾರಣವಾದಂತೆ ಆಗಿದ್ದು, ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಜಾತಿಗಣತಿ ಜಾರಿ ಮಾಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಕೆಲವು ಸಚಿವರು ಒತ್ತಡ ತರುತ್ತಿದ್ದಾರೆ. ಸಚಿವರಾದ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಸಿಎಂಗೆ ಮನವಿ ಮಾಡುತ್ತಿದ್ದಾರೆ. ಆದರೆ, ಒಕ್ಕಲಿಗ, ಲಿಂಗಾಯತ ಸಮುದಾಯದ ಸಚಿವರು ಜಾತಿಗಣತಿ ವರದಿ ಬಿಡುಗಡೆಗೆ ವಿರೋಧಿಸುತ್ತಿದ್ದಾರೆ.

ಜಾತಿ ಗಣತಿ ವಿರೋಧ ಮನವಿ ಪತ್ರಕ್ಕೆ ನಾನು ಸಹಿ ಮಾಡಬಾರದೇ?

ಜಾತಿ ಗಣತಿ ವರದಿ ಬಿಡುಗಡೆ ವಿರೋಧಿಸಿ ಒಕ್ಕಲಿಗರು ಸಿದ್ಧಪಡಿಸಿದ್ದ ಮನವಿ ಪತ್ರಕ್ಕೆ ಸಹಿ ಹಾಕಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡಿರುವ ಡಿ.ಕೆ. ಶಿವಕುಮಾರ್‌, “ನಾನು ಸಹಿ ಮಾಡಬಾರದೇ? ಸಹಿ ಮಾಡಿದರೆ ತಪ್ಪಾ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಎಂದು ಮರು ಪ್ರಶ್ನೆ ಹಾಕಿದ್ದರು. ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲ ನಾಯಕರಲ್ಲೂ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.

ಸಿಎಂ ನಿಲುವು ದೃಢ!

ಈ ವಿಚಾರ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿ, ಕಾಂತರಾಜು ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂಬ ರಾಹುಲ್‌ ಗಾಂಧಿ ಅವರ ಆಶಯಕ್ಕೆ ಸಂಪೂರ್ಣ ಸಹಮತವಿದೆ ಎಂದು ಹೇಳುವ ಮೂಲಕ ವರದಿಯನ್ನು ಬಿಡುಗಡೆ ಮಾಡಿಯೇ ಸಿದ್ಧ ಎಂಬ ಸಂದೇಶವನ್ನು ರವಾನೆ ಮಾಡಿದ್ದರು. ಅಲ್ಲದೆ, ಬುಧವಾರ (ನ. 22) ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವರದಿಯನ್ನು ಬಿಡುಗಡೆ ಮಾಡಿಯೇ ಸಿದ್ಧ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರದ ಒಳಗೆ ಆಂತರಿಕ ತಿಕ್ಕಾಟ ಆರಂಭವಾದಂತೆ ಆಗಿದೆ.

Exit mobile version