Site icon Vistara News

Caste Census : ಜಾತಿ ಗಣತಿ ವರದಿ ಬರೆಸಿದರೇ ಸಿಎಂ? ತನಿಖೆ ನಡೆಸಲು ಆರ್.‌ ಅಶೋಕ್‌ ಸವಾಲು

R Ashok and CM Siddaramaiah

ಬೆಂಗಳೂರು: ಎಚ್‌. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿ (ಜಾತಿ ಗಣತಿ – Caste Census) ಮೂಲ ಪ್ರತಿಯನ್ನು ಬಿಜೆಪಿಯೇ ಕದ್ದಿದೆ ಎಂದು ಹೇಳುವುದಾದರೆ, ತನಿಖೆ ಮಾಡಿಸಿ ಎಂದು ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ (Opposition leader R Ashok) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಕೊಠಡಿ ಪೂಜೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್ ಕಾಂತರಾಜು ಆಯೋಗ ವರದಿ ಬಗ್ಗೆ ಯಾರನ್ನೂ ಕೇಳದೇ ಆಯೋಗವನ್ನು ಸಿಎಂ ಸಿದ್ದರಾಮಯ್ಯ ರಚನೆ ಮಾಡಿದ್ದರು. ಹತ್ತು ವರ್ಷದ ಹಳೆಯ ವರದಿ ಇದು. ಅದಾದ ಬಳಿಕ ಅನೇಕ ನಾಗರಿಕರು ನಮ್ಮ ಬಳಿ ಬರಲೇ ಇಲ್ಲ ಅಂತ ಹೇಳಿದ್ದಾರೆ. ಇನ್ನು ಸೆಕ್ರೆಟರಿ ಇದಕ್ಕೆ ಸಹಿ ಹಾಕಬೇಕು. ನಮ್ಮ‌ ಸರ್ಕಾರ ಇದ್ದಾಗ ಸಹಿಯೂ ಹಾಕಿರಲಿಲ್ಲ. ಈಗ ಮೂಲ ಪ್ರತಿಯೇ ಕಳೆದಿದೆ. 168 ಕೋಟಿ ರೂಪಾಯಿ ಖರ್ಚು ಮಾಡಿ ತಯಾರಾದ ವರದಿ ಕಾಣೆಯಾಗಿದೆ. ಸರ್ಕಾರ ಯಾಕೆ ತನಿಖೆ ಮಾಡುತ್ತಿಲ್ಲ? ಸರ್ಕಾರ ಏನೋ ಮುಚ್ಚಿಡುವ, ಕಾಪಾಡುವ ಕೆಲಸವನ್ನು ಮಾಡುತ್ತಿದೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಆರ್.‌ ಅಶೋಕ್ ಹೇಳಿದರು.

ಇದನ್ನೂ ಓದಿ: BJP Karnataka : ಅತೃಪ್ತಿ ಶಮನಕ್ಕೆ ಮುಂದಾದ ಬಿ.ವೈ. ವಿಜಯೇಂದ್ರ; ಜಾರಕಿಹೊಳಿ ಜತೆ ಮಾತುಕತೆ

ವರದಿಯಲ್ಲಿ ಏನಿದೆ? ಜನಸಂಖ್ಯೆ ಆಧಾರದಲ್ಲಿ ಸಮೀಕ್ಷೆ ಆಗಬೇಕು. ಸರಿಯಾದ ಮಾನದಂಡ ಉಪಯೋಗಿಸಿ ತನಿಖೆ ಮಾಡಿ. ಈಗಾಗಲೇ ಒಕ್ಕಲಿಗ, ಲಿಂಗಾಯತ ಇತರೆ ಸಮುದಾಯದವರು ವರದಿ ಬಿಡುಗಡೆಯನ್ನು ತಡೆ ಹಿಡಿಯಲು ಸಹಿ ಹಾಕಿದ್ದಾರೆ. ಆ ವರದಿಯಲ್ಲಿ ನಿವೇ ಏನಾದರೂ ಬರೆಸಿದ್ದೀರಿ ಎಂಬ ಅನುಮಾನ ಜನರಿಗೆ ಬರುತ್ತಿದೆ. ನಾವೇನೂ ಮಾಡಿಲ್ಲ, ಬರೆಸಿಲ್ಲ ಅನ್ನೋದಾದ್ರೆ ಎಲ್ಲರನ್ನು ಕರೆಸಿ ಮಾತನಾಡಿ ಎಂದು ಆರ್.‌ ಅಶೋಕ್‌ ಸವಾಲು ಹಾಕಿದರು.

ವರದಿ ಬಗ್ಗೆ ಕ್ಯಾಬಿನೆಟ್‌ನಲ್ಲೂ ವಿರೋಧ ಇದೆ. ಅವರ ಸಚಿವರೇ ವಿರೋಧ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂಗಳು, ಸ್ವಾಮೀಜಿಗಳ ಸಹಿತ ನಾನು ಕೂಡಾ ವಿರೋಧ ಇರುವ ಮನವಿ ಪತ್ರಕ್ಕೆ ಸಹಿ ಮಾಡಿದ್ದೇನೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲೇ ವಿರೋಧ ಇದೆ. ಮೊದಲು ಅವರ ಸಚಿವರ ಬಳಿ ಮಾತನಾಡಲಿ ಎಂದು ಆರ್.‌ ಅಶೋಕ್‌ ಹೇಳಿದರು.

ನೀವೇ ಬರೆಸಿದ್ದೀರಿ ಎಂಬುದು ನಮ್ಮ ಅನುಮಾನ

ನಮಗೆ ಅನುಮಾನ ಇರೋದು, ನೀವೇ ಬರೆಸಿದ್ದೀರಿ ಅಂತ. ನಮ್ಮ ಡಿಮ್ಯಾಂಡ್ ತನಿಖೆಗೆ ಒಪ್ಪಿಸಬೇಕು. ಸಮಾಜದ ಮುಖಂಡರ ಕರೆಸಿ ಮಾತನಾಡೋದು. ಜಾತಿ ನಡುವೆ ವಿಷ ಬೀಜ ಬಿತ್ತೋ ಕೆಲಸ‌ ಮಾಡಬೇಡಿ. ವೀರಶೈವ, ಲಿಂಗಾಯತರ ನಡುವೆ ಜಗಳ ತಂದಿಟ್ಟಿರಿ. ಆದರೆ, ಮುಂದೇನಾಯ್ತು? ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ, ಗಾಂಧಿ ಹಾಗೂ ನಾಯಕ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವ ಕೆಲಸವನ್ನು ಮಾಡಬೇಡಿ ಎಂದು ಆರ್. ಅಶೋಕ್ ಆಕ್ರೋಶವನ್ನು ಹೊರಹಾಕಿದರು.

ಕಾಂತರಾಜು ಆಯೋಗದ ವರದಿಗೆ ಸಹಿಯೇ ಹಾಕಿಲ್ಲ. ಹಾಗಾದ್ರೆ ಸಹಿ ಹಾಕದಷ್ಟು ಮೈ ಮರೆತಿದ್ರಾ? ಎಲ್ಲಿ ಕೂತು, ಯಾರ ಮನೆಯಲ್ಲಿ ಕೂತು ಬರೆದಿದ್ದಾರೆ? ಸಹಿ ಹಾಕುವ ಪರಿಜ್ಞಾನ ಇಲ್ಲ ಅಂದ್ರೆ, ನಿಮ್ಮ ವರದಿಗೆ ಬೆಲೆ ಇಲ್ಲ. ನಾನು, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಎಲ್ಲ ನಾಯಕರು ಸಭೆ ಸೇರುತ್ತಿದ್ದೇವೆ. ಬಳಿಕ ನಮ್ಮ ನಿಲುವು ತಿಳಿಸುತ್ತೇವೆ ಎಂದು ಆರ್.‌ ಅಶೋಕ್‌ ಹೇಳಿದರು.

ಬಿಜೆಪಿ ಬಗ್ಗೆ ಮಾಜಿ ಸಚಿವ ವಿ. ಸೋಮಣ್ಣ ಅಸಮಾಧಾನ ಹೊರಹಾಕಿರುವ ಕುರಿತು ಪ್ರತಿಕ್ರಿಯೆ ನೀಡಿದ ಆರ್.‌ ಅಶೋಕ್‌, ಸೋಮಣ್ಣ ಹಿರಿಯರು. ಅವರ ಬಗ್ಗೆ ನಮ್ಮ ಪಕ್ಷದ ಪ್ರಮುಖರು ಮಾತನಾಡುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಎಲ್ಲವೂ ಸರಿ ಹೋಗಲಿದೆ. ರಾಜ್ಯಾಧ್ಯಕ್ಷರು‌ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಹೋಗಿ ಮಾತುಕತೆ ನಡೆಸಿದ್ದಾರೆ. ಸಿ.ಟಿ. ರವಿ ಜತೆಯೂ ಮಾತನಾಡಿದ್ದಾರೆ. ಅವರು ಕೂಡ ಶುಭ ಕೋರಿದ್ದಾರೆ ಎಂದು ತಿಳಿಸಿದರು.

ವಿಪಕ್ಷ ನಾಯಕ ಆರ್ ಅಶೋಕ್, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್, ರಾಜ್ಯದ ಪ್ರಮುಖ ನಾಯಕರಾದ ಬಿ.ಎಸ್. ಯಡಿಯೂರಪ್ಪ,‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಲ್ಲರೂ ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರ್. ಅಶೋಕ್‌ ಹೇಳಿದರು.

ಇದನ್ನೂ ಓದಿ: Caste Census : ನಾಟಕ ಮಾಡ್ತೀರಾ? ಜಾತಿ ಗಣತಿ ಹಗರಣ ಸಿಬಿಐ ತನಿಖೆಯಾಗಲಿ : ಸುನಿಲ್ ಕುಮಾರ್

ಈ ರಾಜ್ಯ ಸರ್ಕಾರದ ಟ್ರಾನ್ಸ್‌ಫರ್ ದಂಧೆ, ಐಟಿ ದಾಳಿಯಲ್ಲಿ ಹಣ ಪತ್ತೆ ವಿವಿಧ ವಿಚಾರ ಇಟ್ಟುಕೊಂಡು ಅಧಿವೇಶನದ ಬಳಿಕ ಹೋರಾಟ ಮಾಡುತ್ತೇವೆ. ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇವೆ. ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಮಾಡುತ್ತೇವೆ ಎಂದು ಆರ್.‌ ಅಶೋಕ್‌ ತಿಳಿಸಿದರು.

Exit mobile version